ಈ ಲೇಖನ ‘ವನ್ಯಜೀವಿಗಳ ಬೇಟೆ’ ಎಂಬ ನಮ್ಮ ಲೇಖನ ಸರಣಿಯಲ್ಲಿ ಮೊದಲನೆಯದು.
ಲೇಖಕರು: ಅನುಷಾ ಚೌಧರಿ ಮತ್ತು ಡಾ।। ಕೃತಿ ಕೆ. ಕಾರಂತ
ಅನುವಾದ: ಸೌರಭಾ ರಾವ್
ಭಾರತದ ಪ್ರಾಣಿಸಂಕುಲ ಕ್ಷೀಣಿಸುವುದಕ್ಕೆ ವನ್ಯಜೀವಿಗಳ ಬೇಟೆಯೂ ಒಂದು ಬಹುಮುಖ್ಯ ಕಾರಣ. ಸ್ಥಳೀಯವಾಗಿ ಆಹಾರಕ್ಕಾಗಿ ಮತ್ತು ವ್ಯಾಪಾರಕ್ಕಾಗಿ ವನ್ಯಜೀವಿಗಳ ಬೇಟೆ ಮಾಡಲಾಗುತ್ತದೆ. ವನ್ಯಜೀವಿಗಳನ್ನು ದಂತಗಳು, ಕೊಂಬುಗಳು, ಪಿತ್ತರಸ, ರೋಮ ಮತ್ತು ಚರ್ಮಗಳಿಗಾಗಿ ಬೇಟೆಯಾಡಲಾಗುತ್ತದೆ, ಮತ್ತು ಇವುಗಳ ವ್ಯಾಪಾರದಿಂದ ಆದಾಯ ಹುಟ್ಟುತ್ತದೆ. ಮಾಂಸಕ್ಕಾಗಿ ಸ್ಥಳೀಯ ಬೇಟೆ ಮತ್ತು/ಅಥವಾ ಬೆಳೆ ಹಾನಿ, ಆಸ್ತಿ ನಷ್ಟ ಮತ್ತು ಜಾನುವಾರು ಹತ್ಯೆಯ ಕಾರಣದಿಂದಾಗಿ ವನ್ಯಜೀವಿಗಳ ಮೇಲೆ ಜನರು ಆಗಾಗ ನಕಾರಾತ್ಮಕವಾಗಿ ಪ್ರತಿಕ್ರಯಿಸುವುದರಿಂದ ಭಾರತದ ವನ್ಯಜೀವಿಗಳಿಗೆ ದೊಡ್ಡ ಅಪಾಯವಿದೆ.
ಕರ್ನಾಟಕದ ಕುದುರೆಮುಖ ಮತ್ತು ನಾಗರಹೊಳೆ, ಈ ಎರಡು ಅಭಯಾರಣ್ಯಗಳ ಒಳಗೆ ಮತ್ತು ಸುತ್ತಮುತ್ತ ೧೯೯೬-೯೭ರಲ್ಲಿ ಸಿಡಬ್ಲ್ಯೂಎಸ್ ವಿಜ್ಞಾನಿಗಳು ಸಮೀಕ್ಷೆಗಳನ್ನು ನಡೆಸಿದರು. ಕುದುರೆಮುಖದಲ್ಲಿ ಮೂರು ಹಳ್ಳಿಗಳ ವಲಯಗಳಲ್ಲಿ ಸಂಶೋಧನೆ ನಡೆಸಲಾಯಿತು. ಬೇಟೆಯ ತೀವ್ರತೆ ಮತ್ತು ವಿನ್ಯಾಸಗಳನ್ನು ಅರ್ಥಮಾಡಿಕೊಳ್ಳುವತ್ತ ಸಂಶೋಧನೆ ಕೇಂದ್ರೀಕೃತವಾಗಿತ್ತು. ಕುದುರೆಮುಖದಲ್ಲಿ ದೊಡ್ಡ ಸಸ್ತನಿಗಳ ಉಪಸ್ಥಿತಿ ಮತ್ತು ಅನುಪಸ್ಥಿತಿಗಳನ್ನು ಮತ್ತು ಅವುಗಳ ಸಂಖ್ಯೆಯನ್ನು ಅಂದಾಜು ಮಾಡಲಾಯಿತು. ನಿರ್ದಿಷ್ಟ ಪ್ರಾಣಿಜಾತಿಗಳು, ಬೇಟೆಯ ತಂತ್ರಗಳು ಮತ್ತು ಬೇಟೆಯ ಕಾರಣಗಳನ್ನು ಪರಿಶೀಲಿಸಲು ಪ್ರತ್ಯೇಕ ಬೇಟೆಗಾರರ ಬೇಟೆಯ ಪದ್ಧತಿಗಳನ್ನು ಮೌಲ್ಯಮಾಪನ ಮಾಡಲಾಯಿತು. ನಾಗರಹೊಳೆಯಲ್ಲಿ, ಅರ್ಕೇರಿ ಮತ್ತು ನಾಲ್ಕೇರಿ ಎಂಬ ಎರಡು ಕಾಡಿನ ಭಾಗಗಳಲ್ಲಿ ಬೇಟೆಗೆ ಕಾರಣವಾಗಿರುವ ಬೇರೆಬೇರೆ ಒತ್ತಡಗಳ ಮೌಲ್ಯಮಾಪನ ಮಾಡಲು ಅಧ್ಯಯನ ನಡೆಸಲಾಯಿತು. ಈ ಪ್ರದೇಶಗಳಲ್ಲಿ ಸಹಕಾಲಿಕವಾಗಿ ವಿಜ್ಞಾನಿಗಳು ಲೈನ್-ಟ್ರಾನ್ಸೆಕ್ಟ್ ಸಮೀಕ್ಷೆಗಳನ್ನು ನಡೆಸಿ ಒಂಭತ್ತು ಜಾತಿಯ ದೈನಂದಿನ ಸಸ್ತನಿಗಳ ಸಮೃದ್ಧಿಯನ್ನು ಅಂದಾಜು ಮಾಡಲಾಯಿತು – ಭಾರತದ ದೈತ್ಯ ಅಳಿಲು (ಇಂಡಿಯನ್ ಜಯಂಟ್ ಸ್ಕ್ವಿರಲ್), ಮಂಗ (ಬಾನೆಟ್ ಮಕಾಕ್), ಬುಕ್ಕ (ಕಾಮನ್ ಲಂಗೂರ್), ಬೊಗಳುವ ಜಿಂಕೆ (ಬಾರ್ಕಿಂಗ್ ಡೀಯರ್), ಕಾಡುಹಂದಿ (ವೈಲ್ಡ್ ಪಿಗ್), ಜಿಂಕೆ (ಚಿತಲ್), ಸಾಂಬಾರ್ (ಕಡವೆ), ಗೌರ್ (ಕಾಡೆಮ್ಮೆ), ಮತ್ತು ಆನೆ (ಏಷಿಯನ್ ಎಲಿಫೆಂಟ್).
ಕುದುರೆಮುಖದಲ್ಲಿ ಸ್ಥಳೀಯ ಬೇಟೆ ತೀವ್ರವಾಗಿತ್ತು ಮತ್ತು ವ್ಯಾಪಕವಾಗಿತ್ತು ಎಂದು ಅಧ್ಯಯನದಿಂದ ತಿಳಿದುಬಂದಿತು. ಈ ಕಾರಣ ಆ ಪ್ರದೇಶದಲ್ಲಿ ದೊಡ್ಡ ಸಸ್ತನಿಗಳ ಹೇರಳತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಸುಮಾರು ೨೬ ಸಸ್ತನಿ ಜಾತಿಗಳು ಕುದುರೆಮುಖದಲ್ಲಿ ಬೇಟೆಗೆ ಗುರಿಯಾಗುತ್ತಿದ್ದವು, ಅದರಲ್ಲೂ ಮೌಸ್ ಡೀಯರ್ ಅತ್ಯಂತ ಬೇಟೆಗೊಳಗಾದ ಪ್ರಾಣಿ ಎಂದು ಅಧ್ಯಯನದಿಂದ ರುಜುವಾತು ಮಾಡಲಾಯಿತು. ನಾಗರಹೊಳೆಯಲ್ಲಿ, ೨೯ ಸಸ್ತನಿ ಜಾತಿಗಳಲ್ಲಿ ೧೬ಅನ್ನು (ತೂಕ > ೧ ಕೆಜಿ) ನಿಯಮಿತವಾಗಿ ಬೇಟೆಯಾಡಲಾಗುತ್ತಿತ್ತು. ಹತ್ತಿರದ ಪಟ್ಟಣಗಳ ಮತ್ತು ನೆರೆಯ ಕೇರಳದ ಹಳ್ಳಿಗಳ ಮಾಂಸದಂಗಡಿಗಳಿಗೆ ಮಾಂಸ ಒದಗಿಸಲು ಬೇಟೆಗಾರರು ಕಾರ್ಯಾಚರಣೆ ನಡೆಸುತ್ತಿದ್ದರು. ಸ್ಥಳೀಯ ಮಾಂಸ ಮಾರುಕಟ್ಟೆಗಳಿಗೆ ಹತ್ತಿರವಿದ್ದುದರಿಂದ ಅರ್ಕೇರಿಯಲ್ಲಿ ಬೇಟೆಯ ಒತ್ತಡ ಸದಾ ಜಾಸ್ತಿಯಿರುತ್ತಿತ್ತು. ಸ್ಥಳೀಯ ಬೇಟೆಗಾರರು ಮತ್ತು ಸದ್ದಿಗಾರರ ಅಂದಾಜುಗಳ ಪ್ರಕಾರ ಅರ್ಕೇರಿಯಲ್ಲಿ ಬೇಟೆಯ ತೀವ್ರತೆ ನಾಲ್ಕೇರಿಗಿಂತ ಮೂರುಪಟ್ಟು ಹೆಚ್ಚಿತ್ತು. ಗಸ್ತು ತಿರುಗುವ ರಸ್ತೆಗಳು ಮತ್ತು ವಾಹನಗಳು ಕಡಿಮೆ ಇದ್ದುದು, ಸಾಧಾರಣ ಸಂವಹನ ಸೌಕರ್ಯಗಳು ಮತ್ತು ಕಾರ್ಯನಿರ್ವಹಣೆಗೆ ಅಗತ್ಯವಾದ ಉಪಕರಣಗಳು ಇಲ್ಲದಿರುವುದು ಅರ್ಕೇರಿಯಲ್ಲಿ ಬೇಟೆಯ ವ್ಯಾಪ್ತಿ ಹೆಚ್ಚಾಗಿದ್ದುದಕ್ಕೆ ಮತ್ತಷ್ಟು ಕಾರಣಗಳು. ಕುದುರೆಮುಖದಲ್ಲಿ ಸ್ಥಳೀಯವಾಗಿ ತಯಾರಿಸಿದ ಬಂದೂಕಗಳು ಮತ್ತು ಬಲೆಗಳನ್ನು ಬಳಸುವ ವಿಧಾನಗಳಿಗೆ ಹೋಲಿಸಿದರೆ, ನಾಗರಹೊಳೆಯಲ್ಲಿ ಬಿಲ್ಲು ಮತ್ತು ಜೇಡಿಮಣ್ಣು, ನಳಿಗೆ ಜಾಲ/ಬಲೆ, ಹೊಗೆ, ಕವಣೆಗಳು ಮತ್ತು ತಂತಿ ಬಳೆಗಳಂತಹ ಹೆಚ್ಚಿನ ಸಾಂಪ್ರದಾಯಿಕ ಬೇಟೆಯ ತಂತ್ರಗಳನ್ನು ಬಳಸಲಾಗುತ್ತಿತ್ತು.
ಈ ಅಧ್ಯಯನದ ಸಂಶೋಧನೆಯಿಂದ ತಿಳಿದುಬಂದಿದ್ದೇನೆಂದರೆ ಎಚ್ಚರಿಕೆಯ ರಕ್ಷಣೆಯಿಂದ ದೊಡ್ಡ ಸಸ್ತನಿಗಳು ವರ್ಧಿಸಿದರೂ ಕರ್ನಾಟಕದ ಎರಡು ಪ್ರಮುಖ ಅಭಯಾರಣ್ಯಗಳಲ್ಲಿ ಅವು ಸ್ಥಳೀಯ ಬೇಟೆಯ ತೀವ್ರ ಒತ್ತಡಗಳ ಮುಂದೆ ದುರ್ಬಲವಾಗೇ ಇದ್ದವು. ಬೇಟೆಯ ಚಟುವಟಿಕೆಗಳ ನಿರ್ವಹಣೆಯಲ್ಲಿ ಸಂರಕ್ಷಣೆಯ ಮತ್ತು ಬೆಂಬಲಿಸಬಲ್ಲ ವಿಧಾನಗಳಲ್ಲಿನ ಅಸಮಾನತೆಗಳನ್ನೂ ಅಧ್ಯಯನ ಒತ್ತಿಹೇಳಿದೆ. ಈ ಅಧ್ಯಯನದ ಆಧಾರದ ಮೇಲೆ, ಭಾರತದಲ್ಲಿ ‘ಬಿಡದೆ ನಡೆಸಬಲ್ಲ ದೊಡ್ಡ ಸಸ್ತನಿಗಳ ಸುಗ್ಗಿ’ಯನ್ನು ವ್ಯಾಖ್ಯಾನಿಸುವುದು ಅಥವಾ ರುಜುವಾತು ಮಾಡುವುದು ಬಹಳ ಕಷ್ಟ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. ಇದಕ್ಕೆ ಯಾವ ಗುಣಲಕ್ಷಣಗಳು ಕಾರಣವೆಂದು ಅವರು ಹೇಳುತ್ತಾರೆಂದರೆ: ಅಭಯಾರಣ್ಯಗಳ ಒಳಗೆ ಇರುವ ಸುಗಮವಾಗಿ ಸಿಗುವ ಸಸ್ತನಿಗಳ ಸಂಖ್ಯೆ, ಈ ಪ್ರದೇಶಗಳ ಸುತ್ತ ಇರುವ ವಿಸ್ತಾರವಾದ ಜನಸಂಖ್ಯೆ ಮತ್ತು ಅದರ ಜೊತೆಗೆ ಬರುವ ಒತ್ತಡಗಳು, ಮತ್ತು ಸಾಂಸ್ಕೃತಿಕ ಮತ್ತು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಲ್ಲಿರುವ ವಿಭಿನ್ನತೆ. ಬೇಟೆಯನ್ನು ಕಡಿಮೆಗೊಳಿಸಲು ಸಾಮಾಜಿಕವಾಗಿ ಒಪ್ಪಿಗೆಯಾಗುವ, ಆರ್ಥಿಕವಾಗಿ ನ್ಯಾಯಸಮ್ಮತವಾದ ಮತ್ತು ನೈತಿಕ ಅಭಿಮತ ಹೊಂದಿದ ದಾರಿಗಳನ್ನು ಕಂಡುಕೊಳ್ಳುವುದರ ಜೊತೆಗೆ, ಈ ಸಸ್ತನಿಗಳಿಗೆ ಸಂರಕ್ಷಣೆ ನೀಡುವ ಕರಾರು ಇರಲೇಬೇಕೆಂದು ವಿಜ್ಞಾನಿಗಳು ಸೂಚಿಸಿದ್ದಾರೆ.
ಮೂಲ ಸಂಶೋಧನಾ ವರದಿ:
ಲೋಕಲ್ ಹಂಟಿಂಗ್ ಅಂಡ್ ದ ಕಾನ್ಸರ್ವೇಶನ್ ಆಫ್ ಲಾರ್ಜ್ ಮ್ಯಾಮಲ್ಸ್ ಇನ್ ಇಂಡಿಯಾ, ಮಧುಸೂದನ್, ಎಂ. ಡಿ. & ಕಾರಂತ, ಕೆ. ಯೂ. (೨೦೨೦). AMBIO: ಅ ಜರ್ನಲ್ ಆಫ್ ದ ಹ್ಯೂಮನ್ ಎನ್ವಯರ್ನ್ಮೆಂಟ್, ೩೧(೧), ೪೯-೫೫.
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.