ಲೇಖಕರು: ಡಾ. ಕೃತಿ ಕೆ. ಕಾರಂತ್

ಅನುವಾದ: ಸೌರಭಾ ರಾವ್

ಈ ಲೇಖನ, ಸಂರಕ್ಷಣಾ ಪ್ರದೇಶಗಳ ಹೊರಗಿನ ಜೀವವೈವಿಧ್ಯತೆ’ ಎಂಬ ವಿಜ್ಞಾನ-ಲೇಖನ ಸರಣಿಯಲ್ಲಿ ಮೊದಲನೆಯದು.

ಕರ್ನಾಟಕದಲ್ಲಿರುವ ಕಾಫಿ, ರಬ್ಬರ್ ಮತ್ತು ಅಡಿಕೆಯಂಥ ಕೃಷಿ ಅರಣ್ಯಗಳು 204 ಬಗೆಯ ಹಕ್ಕಿಗಳನ್ನು ಪೋಷಿಸುತ್ತಿವೆಯೆಂದೂ, ಅವುಗಳಲ್ಲಿ 13 ಬಗೆಯ ಪಕ್ಷಿಗಳು ಪಶ್ಚಿಮ ಘಟ್ಟಗಳಲ್ಲೇ ವಿಶೇಷವಾಗಿ ಕಾಣಸಿಗುವುದೆಂದು ‘ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್’ನ (CWS) ವಿಜ್ಞಾನಿಗಳು ಮತ್ತು ಸಹೋದ್ಯೋಗಿಗಳು ಇತ್ತೀಚಿನ ಅಧ್ಯಯನವೊಂದರಲ್ಲಿ ಕಂಡುಕೊಂಡಿದ್ದಾರೆ. ಇದು ಕೃಷಿ ಅರಣ್ಯಗಳು ವನ್ಯಜೀವಿ ಸಂರಕ್ಷಣೆಯಲ್ಲಿ ವಹಿಸುವ ಪಾತ್ರವನ್ನು ಎತ್ತಿಹಿಡಿಯುತ್ತದೆ.

 

ಕೃಷಿ ಅರಣ್ಯ ಪದ್ಧತಿಯು ವ್ಯವಸಾಯ ಮತ್ತು ಅರಣ್ಯಶಾಸ್ತ್ರಗಳ ಸಂಯೋಜನೆ – ಸ್ಥಳೀಯ ಮರಗಳು ಮತ್ತು ಪೊದರುಗಳ ಜೊತೆಯಲ್ಲೇ ಪ್ರಮುಖ ಬೆಳೆ ಬೆಳೆಯುವ ಈ ಪದ್ಧತಿಯಿಂದ ಫಸಲು ಹೆಚ್ಚಾಗುವುದಲ್ಲದೇ ಜೀವವೈವಿಧ್ಯವೂ ವಿಸ್ತಾರಗೊಳ್ಳುತ್ತದೆ. ಉದಾಹರಣೆಗೆ, ಕಾಡುಗಳ ಎತ್ತರದ ಮರಗಳ ಕೆಳಗೆ ನೆರಳಿನಲ್ಲಿ ಬೆಳೆವ ಕಾಫಿ ತೋಟಗಳು. ಈ ಹಚ್ಚಹಸಿರು ತೋಟಗಳಲ್ಲಿ ಅಪಾರ ಪಕ್ಷಿಸಂಕುಲವಷ್ಟೇ ಅಲ್ಲದೇ ಅನೇಕ ಬಗೆಯ ಕೀಟಗಳು, ಉಭಯಚರಗಳು, ಸರೀಸೃಪಗಳು ಮತ್ತು ಬಾವಲಿಗಳೂ ಬಾಳುತ್ತವೆ.

 

ಭಾರತದ ಪಶ್ಚಿಮ ಘಟ್ಟಗಳಲ್ಲಿ, ಚಿಕ್ಕಮಗಳೂರಿನ ಭದ್ರಾ ಹುಲಿ ಅಭಯಾರಣ್ಯದಂಥಾ ಚಿಕ್ಕ ಮತ್ತು ಪ್ರತ್ಯೇಕ ಸಂರಕ್ಷಿತ ಪ್ರದೇಶಗಳು ವಿವಿಧ ಬಗೆಯ ಭೂ-ವ್ಯವಸಾಯ ನಡೆವ ಪ್ರದೇಶಗಳಿಂದ ಸುತ್ತುವರೆದಿವೆ. ಇದರಲ್ಲಿ ಕೃಷಿ ಅರಣ್ಯಗಳದ್ದೇ ಬಹುಪಾಲು. ಇಂಥ ಕೃಷಿ ಅರಣ್ಯಗಳನ್ನು ವನ್ಯಜೀವಿಗಳ ಆವಾಸ ಸ್ಥಾನಗಳಾಗಿ ಮತ್ತು ಅವುಗಳು ಓಡಾಡುವ ಮಾರ್ಗಗಳಿಗಾಗಿ ಆಧಾರ ನೀಡುವ ಪ್ರದೇಶಗಳನ್ನಾಗಿ ಹೆಚ್ಚಾಗಿ ಗುರುತಿಸಲಾಗುತ್ತಿದೆ. ಈ ಅಧ್ಯಯನದಲ್ಲಿ CWS ವಿಜ್ಞಾನಿಗಳು, ಅಡಿಕೆ, ಕಾಫಿ ಮತ್ತು ರಬ್ಬರ್ ಬೆಳೆವ ಪ್ರದೇಶಗಳ ಪಕ್ಷಿ ವೈವಿಧ್ಯತೆಯನ್ನು ಹೋಲಿಸಿ, ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಯಾವ ತೋಟಗಳು ವ್ಯಾಪಕವಾಗಿವೆ ಎಂದು ಪರಿಶೀಲಿಸಿದ್ದಾರೆ.

 

ಎರಡು ವರ್ಷಗಳ ಗಹನವಾದ ಈ ಅಧ್ಯಯನದಲ್ಲಿ ನಿರತರಾಗಿದ್ದ ಈ ತಂಡ, 30,000 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ 187 ಪ್ಲಾಂಟೇಶನ್ನುಗಳಲ್ಲಿ ಸಂಶೋಧನೆ ನಡೆಸಿದೆ. ಪ್ರಪಂಚದಲ್ಲಿ ನಡೆದಿರುವ ವಾಸ್ತಾರವಾದ ಸಂಶೋಧನೆಗಳಲ್ಲಿ, ಸಂರಕ್ಷಿತ ಪ್ರದೇಶಗಳ ಹೊರಗೆ ಜೀವಿಸುವ ಉಷ್ಣವಲಯದ ಪಕ್ಷಿ ವೈವಿಧ್ಯ ಅಧ್ಯಯನವಾದ ಇದೂ ಒಂದು.

 

ಕಾಫಿ, ರಬ್ಬರ್ ಮತ್ತು ಅಡಿಕೆಯಂಥ ಪ್ಲಾಂಟೇಷನ್ನುಗಳು 204 ಬಗೆಯ ಹಕ್ಕಿಗಳನ್ನು ಪೋಷಿಸುತ್ತಿವೆಯೆಂಬ ಬೆರಗಿನ ಸಂಗತಿಯನ್ನು ಈ ಅಧ್ಯಯನದಿಂದ ತಿಳಿದುಬಂದಿದ್ದು, ಅವುಗಳಲ್ಲಿ 13 ಬಗೆಯ ಪಕ್ಷಿಗಳು ಪಶ್ಚಿಮ ಘಟ್ಟಗಳಲ್ಲೇ ಇವೆ. ಅಧ್ಯಯನದ ಫಲಿತಾಂಶದಿಂದ, ಕಾಫಿ ತೋಟಗಳು ರಬ್ಬರ್ ಮತ್ತು ಅಡಿಕೆ ತೋಟಗಳಿಗಿಂತ ಹೆಚ್ಚು ಪಕ್ಷಿವೈವಿಧ್ಯ ಹೊಂದಿವೆ ಎಂದೂ ತಿಳಿದುಬಂದಿದೆ. ದೊಡ್ಡ ದೇಹವುಳ್ಳ ಫಲಾಹಾರಿ ಹಕ್ಕಿಗಳಾದ ಪಾರಿವಾಳ ಮತ್ತು ಹಾರ್ನ್‌ಬಿಲ್ (ಮಂಗಟ್ಟೆ)ಗಳು ಕಾಫಿ ತೋಟಗಳಲ್ಲಿ ಹೆಚ್ಚಾಗಿ ಕಂಡುಬಂದಿವೆ. ಬೀಜ-ಪ್ರಸರಣದಲ್ಲಿ, ಈ ಪ್ರದೇಶಗಳ ಕಾಡುಮರಗಳನ್ನು ಕಾಪಾಡುವಲ್ಲಿ ಈ ಹಕ್ಕಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

 

ಪಕ್ಷಿ ವೈವಿಧ್ಯತೆಗೂ, ಮರಗಳ ದಟ್ಟಣೆ ಮತ್ತು ಮರಗಳ ರಕ್ಷಣೆ (ಹೊದಿಕೆ)ಗೂ ನೇರ ಸಕಾರಾತ್ಮಕ ಸಂಬಂಧವಿರುವುದನ್ನು ವಿಜ್ಞಾನಿಗಳು ಮನಗಂಡಿದ್ದಾರೆ. ಮರಗಳ ಮೇಲ್ಕಾಪನ್ನು ತೆರೆಯುವಂತಹ ಕೃಷಿ ಪದ್ಧತಿಗಳಿಂದ, ಅಥವಾ ಕಾಫಿ ಮತ್ತು ಅಡಿಕೆ ಬಿಟ್ಟು ಏಕರೂಪದ ಪ್ರತ್ಯೇಕ ಬೆಳೆ ಬೆಳೆಯುವುದರಿಂದ, ಇಂಥಾ ಕೃಷಿ ಅರಣ್ಯಗಳ ಪಕ್ಷಿ ಪೋಷಣೆಯ ಬಲ ಕುಗ್ಗುತ್ತದೆ.   

 

ಭಾರತದ ಪಕ್ಷಿಗಳ ಸಂರಕ್ಷಣೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿರುವ ಕೃಷಿ ಅರಣ್ಯಗಳು ಮಹತ್ವದ ಪೂರಕ ಪಾತ್ರ ವಹಿಸುತ್ತಿವೆ. ಇಂಥ ಜೀವವೈವಿಧ್ಯದ ಮೌಲ್ಯವನ್ನು ಪರಿಗಣಿಸಿ ಭವಿಷ್ಯದ ಯೋಜನೆ ಮತ್ತು ಕಾರ್ಯನೀತಿಗಳನ್ನು ರೂಪಿಸುವಾಗ ಬಳಸಿ ದೂರದೃಷ್ಟಿಯುಳ್ಳ ಸಂರಕ್ಷಣಾ ಪದ್ಧತಿಗಳನ್ನು ಕೈಗೊಳ್ಳಬೇಕೆಂದು ಲೇಖಕರು ಕಂಡುಕೊಂಡಿದ್ದಾರೆ. ಈ ಅಧ್ಯಯನದಿಂದ ದೊರೆತಂಥ ವೈಜ್ಞಾನಿಕ ಫಲಿತಾಂಶಗಳನ್ನು ಕಾರ್ಯನೀತಿಗಳಲ್ಲಿ ಮತ್ತು ಮಾರುಕಟ್ಟೆ ವಹಿವಾಟುಗಳಲ್ಲಿ ಅಳವಡಿಸಿಕೊಳ್ಳಬೇಕು. ಆಗ ಜೀವವೈವಿಧ್ಯತೆ ಸಮೃದ್ಧವಾಗಿರುವ ಕೃಷಿ ಅರಣ್ಯಗಳು ಸುಸ್ಥಿರ ವ್ಯವಸಾಯ ಪದ್ಧತಿಗಳನ್ನು ಹೆಚ್ಚಿಸಲು, ಮತ್ತು ಕಾಫಿ, ಅಡಿಕೆ ಮತ್ತು ರಬ್ಬರಿನಂಥ ಕೃಷಿ ಅರಣ್ಯಗಳಲ್ಲಿ ಪಕ್ಷಿಗಳ ಸಂಪತ್ತನ್ನು ವೃದ್ಧಿಸಲು ಸಾಧ್ಯವಾಗುವುದು.

ಸಂಶೋಧನಾ ವರದಿ: ವೈವಿಧ್ಯತೆಯ ಉತ್ಪನ್ನ: ಭಾರತದ ಪಶ್ಚಿಮ ಘಟ್ಟಗಳಲ್ಲಿ ಕೃಷಿ ಅರಣ್ಯಗಳು ಪಕ್ಷಿ ಸಿರಿ ಮತ್ತು ಸಮೃದ್ಧಿಗೆ ಆಸರೆಯಾಗಿವೆ – ಕೃತಿ ಕೆ. ಕಾರಂತ್, ವಿಷ್ಣುಪ್ರಿಯಾ ಸಂಕರರಾಮನ್, ಶಶಾಂಕ್ ದಲ್ವಿ, ಅರ್ಜುನ್ ಶ್ರೀವತ್ಸ, ರವಿಶಂಕರ್ ಪರಮೇಶ್ವರನ್, ಸುಷ್ಮಾ ಶರ್ಮ, ಪಾಲ್ ರಾಬಿನ್ಸ್, ಮತ್ತು ಅಶ್ವಿನೀ ಛಾತ್ರೆ – Frontiers in Ecology and Evolution, 2016

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಈ ಲೇಖನ ಈ ಹಿಂದೆ ‘ಕಾನ್ಸರ್ವೇಶನ್ ಇಂಡಿಯಾ’ (Conservation India)ದಲ್ಲಿ ಪ್ರಕಟವಾಗಿತ್ತು. ಅದನ್ನು ಇಲ್ಲಿ ಓದಬಹುದು.