ಶೀರ್ಷಿಕೆ: ಮುಂಬಯಿಯಲ್ಲಿ ಮಾನವ-ಚಿರತೆ ಸಂಘರ್ಷದ ಬಗ್ಗೆ ಮಾಧ್ಯಮ ವರದಿಗಳು ವಹಿಸಿರುವ ಪಾತ್ರದ ವಿಶ್ಲೇಷಣೆ – ಸಲೋನಿ ಭಾಟಿಯಾ, ವಿದ್ಯಾ ಆತ್ರೇಯ, ರಿಚರ್ಡ್ ಗ್ರೆನ್ಯೇರ್, ಡೇವಿಡ್ ಡಬ್ಲ್ಯೂ. ಮೆಕ್ಡಾನಲ್ಡ್ – ಕಾನ್ಸರ್ವೇಷನ್ ಬಯಾಲಜಿ, 2013  

 

ಲೇಖಕರು: ಲೂಕ್ರೇಷಿಯಾ ಆಗಿಲಾರ್ ಮತ್ತು ಸಲೋನಿ ಭಾಟಿಯಾ

ಅನುವಾದ: ಸೌರಭಾ ರಾವ್

ಮಾಧ್ಯಮ ವರದಿಗಳು ಜನತೆಗೆ ಪ್ರಪಂಚದ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ತಿಳಿಸುವುದಕ್ಕಾಗಿವೆ. ಆದರೂ, ಇವೇ ವರದಿಗಳು, ಮಾನವ-ವನ್ಯಜೀವಿ ಸಂಘರ್ಷಗಳಂತಹ ಸೂಕ್ಷ್ಮ ಸಂರಕ್ಷಣಾ ವಿಷಯಗಳ ಬಗ್ಗೆ ಜನರ ನಿಲುವನ್ನೂ ಪ್ರಭಾವಿಸಬಲ್ಲವು. ಸಂರಕ್ಷಣಾ ಸಂಘರ್ಷದ ವಿಷಯದಲ್ಲಿ ಮಾಧ್ಯಮಗಳ ಮಹತ್ವದ ಪಾತ್ರವನ್ನು ಗುರುತಿಸಿ, ಸಂಶೋಧಕರಾದ ಸಲೋನಿ ಭಾಟಿಯಾ, ವಿದ್ಯಾ ಆತ್ರೇಯ, ರಿಚರ್ಡ್ ಗ್ರೆನ್ಯೇರ್, ಡೇವಿಡ್ ಡಬ್ಲ್ಯೂ. ಮೆಕ್ಡಾನಲ್ಡ್, ಮುಂಬೈಯಿಯಲ್ಲಿ ಮುದ್ರಣ ಮಾಧ್ಯಮ ಚಿರತೆಗಳ ಬಗ್ಗೆ ಹೇಗೆ ಸುದ್ದಿರಚನೆ ಮಾಡಿದೆಯೆಂದು ಅಧ್ಯಯನ ನಡೆಸಿದ್ದಾರೆ. ಚಿರತೆ-ಮನುಷ್ಯರು ಎದುರುಬದುರಾದ ಸುದ್ದಿಗಳ ವರದಿಗಳು ಸ್ಥಳೀಯ/ಪ್ರಾದೇಶಿಕ ದಿನಪತ್ರಿಕಗಳಲ್ಲೂ, ಇಂಗ್ಲಿಷ್ ಪತ್ರಿಕೆಗಳಲ್ಲೂ ಹೇಗೆ ಭಿನ್ನವಾಗಿವೆ ಎಂದೂ, ಮತ್ತು ಹತ್ತು ವರ್ಷಗಳ ಅವಧಿಯಲ್ಲಿ ಈ ವರದಿಗಳ ದೃಷ್ಟಿಕೋನ ಹೇಗೆ ಬದಲಾಗಿದೆಯೆಂದೂ ಈ ತಂಡ ಅಭ್ಯಸಿಸಿದೆ.

 

ಅತ್ಯಂತ ದಟ್ಟ ಜನಸಂಖ್ಯೆ ಹೊಂದಿರುವ ಜಗತ್ತಿನ ಮಹಾನಗರಗಳಲ್ಲಿ ಮುಂಬಯಿಯೂ ಒಂದು. ಇಲ್ಲಿಯ 100 ಚದುರ ಕಿಲೋಮೀಟರ್ ವಿಸ್ತೀರ್ಣದ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ಗಣನೀಯ ಸಂಖ್ಯೆಯಲ್ಲಿವೆ. ವನ್ಯ ಬೇಟೆಮೃಗಗಳನ್ನಲ್ಲದೇ ಈ ಚಿರತೆಗಳು ಆಗಾಗ ಬೀದಿನಾಯಿಗಳನ್ನೂ ಬೆನ್ನಟ್ಟಿ ಬೇಟೆಯಾಡುವುದರಿಂದ ಉದ್ದೇಶಪೂರ್ವಕವಾಗಿಲ್ಲದಿದ್ದರೂ ಮನುಷ್ಯರನ್ನು ಇದಿರಾಗುತ್ತವೆ. 2002 ಮತ್ತು 2004ರ ನಡುವೆ ಮುಂಬಯಿಯಲ್ಲಿ ಮನುಷ್ಯರ ಮೇಲೆ ಚಿರತೆಯ ದಾಳಿಯ ಸಂಖ್ಯೆ 84ಕ್ಕೆ ಏರಿ ಮಾಧ್ಯಮಗಳಲ್ಲಿ ಬಹಳ ದೊಡ್ಡ ಸುದ್ದಿಯಾಗಿತ್ತು.

 

2001 ರಿಂದ 2011ರ ಅವಧಿಯಲ್ಲಿ ಚಿರತೆಗಳಿಗೆ ಸಂಬಂಧಪಟ್ಟ ವರದಿಗಳನ್ನು ಭಾಟಿಯಾ ಮತ್ತು ಸಹೋದ್ಯೋಗಿಗಳು ಪರಿಶೀಲಿಸಿದಾಗ ದೊರೆತ ಮುಖ್ಯ ಮಾಹಿತಿಯೆಂದರೆ, ಅತಿ ಹೆಚ್ಚು ಚಿರತೆ ದಾಳಿಗಳು ನಡೆದ 2004ರ ನಂತರ ಮಾರ್ಪಾಡಾದ ಸುದ್ದಿಯಲ್ಲಿನ ವ್ಯತ್ಯಾಸ. ಆನಂತರದ ದಿನಪತ್ರಿಕೆಗಳು ಚಿರತೆಯ ಬಗ್ಗೆ ನಕಾರಾತ್ಮಕ ಧೋರಣೆ ತಾಳದೇ ನಿಷ್ಪಕ್ಷಪಾತವಾಗಿ ವರದಿ ಮಾಡಿರುವುದು ಕಂಡುಬಂದಿದೆ. ಈ ಬದಲಾವಣೆಯು, ಮಾಧ್ಯಮ ಸಿಬ್ಬಂದಿವರ್ಗ ವಿಜ್ಞಾನಿಗಳು ಮತ್ತು ವನ್ಯಜೀವಿ ಕಾರ್ಯನಿರ್ವಾಹಕರೊಡನೆ ನಡೆಸಿದ ವಿಚಾರ ವಿನಿಮಯಗಳ ಜತೆ ತಾಳೆಹೊಂದಿದ್ದು, ವರದಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿರುವುದು ಕಂಡುಬಂದಿದೆ.

 

ಇಂಗ್ಲಿಷ್ ದಿನಪತ್ರಿಕೆಗಳು ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ವರದಿಗಳ ನಡುವೆ ಇರುವ ವ್ಯತ್ಯಾಸಗಳೂ ಈ ತಂಡ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ. ಈ ಎಲ್ಲ ಪತ್ರಿಕೆಗಳೂ ವನ್ಯಜೀವಿಗಳ ಸಹಜ ವಾಸಸ್ಥಾನವಾದ ಕಾಡಿನ ನಷ್ಟವನ್ನೇ ತೊಂದರೆಯೆಂದು ಒಮ್ಮತದಿಂದ ಪರಿಗಣಿಸಿದ್ದರೂ, ವನ್ಯಜೀವಿ-ಮನುಷ್ಯ ಸಂಘರ್ಷಕ್ಕೆ ಮಾತ್ರ ಬಹಳ ಭಿನ್ನವಾದ ಪರಿಹಾರಗಳನ್ನು ಸೂಚಿಸಿವೆ.

 

ಇಂಗ್ಲಿಷ್ ದಿನಪತ್ರಿಕೆಗಳು ಜನರನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಬದಲಾವಣೆಗಳನ್ನು (ಉದಾಹರಣೆಗೆ, ಜನರು ವಾಸಿಸುವ ನೆಲೆಯನ್ನು ಸ್ಥಳಾಂತರಿಸುವುದು) ಸೂಚಿಸಿದರೆ, ಪ್ರಾದೇಶಿಕ ಭಾಷೆಯ ಪತ್ರಿಕೆಗಳು ಚಿರತೆ-ಕೇಂದ್ರಿತ ಬದಲಾವಣೆಗಳನ್ನು (ಉದಾಹರಣೆಗೆ, ಚಿರತೆಗಳಿಗೆ ಅಧಿಕವಾಗಿ ಆಹಾರ ಒದಗಿಸುವುದು) ಸೂಚಿಸಿರುತ್ತವೆ. ಹೀಗಿದ್ದರೂ, ಯಾವುದೇ ಪತ್ರಿಕೆಗಳೂ ತಮ್ಮ ಸಲಹೆ, ಸೂಚನೆಗಳನ್ನು ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಪ್ರಸ್ತಾಪಿಸಿಲ್ಲ.

 

ಮಾಧ್ಯಮಗಳ ಪ್ರಭಾವವನ್ನು ಸರಿಯಾಗಿ ಬಳಸಿಕೊಂಡಲ್ಲಿ, ವನ್ಯಜೀವಿ-ಮಾನವ ಸಂಘರ್ಷಗಳಂಥ ವಿಷಯಗಳ ಬಗ್ಗೆ ಜನರಲ್ಲಿರುವ ತಪ್ಪು ತಿಳುವಳಿಕೆ ಮತ್ತು ಭಯವನ್ನು ಕಮ್ಮಿ ಮಾಡಬಹುದೆಂದು ಈ ಸಂಶೋಧನಾ ತಂಡ ಸೂಚಿಸಿದೆ. ಆದರೆ ಪತ್ರಿಕೆಯ ವರದಿಗಾರರು ಮತ್ತು ಸಂಪಾದಕರು ಪಕ್ಷಪಾತ ಮಾಡಿದಲ್ಲಿ, ವೈಜ್ಞಾನಿಕ ದೃಢೀಕರಣದ ಅತಿಕ್ರಮಣವಾಗುತ್ತದೆಂದು ತಂಡ ಒತ್ತಿಹೇಳಿದೆ.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.