ಲೇಖಕರು: ಮಿಷೆಲ್ ಲ್ಯೂಯಿಜ್ ಅನುವಾದ: ಸೌರಭಾ ರಾವ್
ಈ ಲೇಖನ, ಸಂರಕ್ಷಣಾ ಪ್ರದೇಶಗಳ ಹೊರಗಿನ ಜೀವವೈವಿಧ್ಯತೆ ಎಂಬ ವಿಜ್ಞಾನ-ಲೇಖನ ಸರಣಿಯಲ್ಲಿ ಎರಡನೆಯದು.
NCBS ಮತ್ತು CWS ವಿಜ್ಞಾನಿಗಳು ನಡೆಸಿರುವ ಒಂದು ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿನ ಕೃಷಿ ಅರಣ್ಯಗಳು ಕನಿಷ್ಠ ೮೬ ವಿವಿಧ ಬಗೆಯ ಚಿಟ್ಟೆಗಳನ್ನು ಪೋಷಿಸುತ್ತಿವೆ. ಇದು ಕೃಷಿ ಅರಣ್ಯಗಳು ಜೀವವೈವಿಧ್ಯತೆಯನ್ನು ರಕ್ಷಿಸುತ್ತಿವೆಯೆಂಬ ನಂಬಿಕೆಯನ್ನು ಬೆಂಬಲಿಸುತ್ತದೆ.
ಜಗತ್ತಿನೆಲ್ಲೆಡೆ ವನ್ಯಜೀವಿ ಆವಾಸಸ್ಥಾನಗಳು ಅಪಾರ ಪ್ರಮಾಣದ ಅರಣ್ಯನಾಶ ಮತ್ತು ಅರಣ್ಯ ವಿಭಾಗೀಕರಣದಿಂದ ಸೊರಗುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸಂರಕ್ಷಿತ ಪ್ರದೇಶಗಳು ಭೂಮಿಯ ಕೇವಲ ೧೫%ರಷ್ಟಿದ್ದು, ಮಿಕ್ಕೆಲ್ಲಾ ಭೂಭಾಗ ಮನುಷ್ಯನ ಶೋಷಣೆಗೆ ತುತ್ತಾಗುತ್ತಿದೆ. ಆದರೆ ಅಷ್ಟಾಗಿ ತಿಳಿಯದ ಸಂಗತಿಯೆಂದರೆ, ಹಲವು ಜೀವಿಗಳು ಸಂರಕ್ಷಿತ ಪ್ರದೇಶಗಳ ಹೊರಗಿರುವ, ಮನುಷ್ಯ-ಪ್ರಾಬಲ್ಯ ಹೆಚ್ಚಾಗೇ ಇರುವ ಕೃಷಿಭೂಮಿಯಲ್ಲಿ ವಾಸಿಸುತ್ತಿರುವುದು. ಅದರಲ್ಲೂ, ಪ್ರಮುಖ ಬೆಳೆಯನ್ನು ವಿವಿಧ ರೀತಿಯ ಮರ-ಗಿಡಗಳ ನಡುವೆಯಲ್ಲೇ ಬೆಳೆವ ಕೃಷಿ ಅರಣ್ಯ ಮತ್ತು ತೋಟಗಳು ಅತಿ ಹೆಚ್ಚು ಜೀವ ವೈವಿಧ್ಯತೆಯನ್ನು ಪೋಷಿಸುತ್ತಿವೆ.
NCBS ಮತ್ತು CWS ವಿಜ್ಞಾನಿಗಳು, ಕಾಫಿ ತೋಟಗಳಲ್ಲಿ ಜೀವವೈವಿಧ್ಯತೆಯ ಪೋಷಣೆಯನ್ನು ಚಿಟ್ಟೆಗಳ ಮೂಲಕ ಅಧ್ಯಯನ ನಡೆಸಿದ್ದಾರೆ. ಭದ್ರಾ ಹುಲಿ ಅಭಯಾರಣ್ಯದ ಹತ್ತಿರ ಇರುವ ೧೨ ಕೃಷಿ ಅರಣ್ಯಗಳಲ್ಲಿ ಚಿಟ್ಟೆಗಳ ಬಗೆಗಳನ್ನು ಈ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ.
ಸಾಮಾನ್ಯವಾಗಿ, ಕಾಫಿಯನ್ನು ಕಾಡುಗಳ ಎತ್ತರದ ಮರಗಳ ಕೆಳಗೆ ನೆರಳಿನಲ್ಲಿ ಬೆಳೆಯಲಾಗುತ್ತದೆ. ಆದರೆ ಇತ್ತೀಚಿಗೆ ರೈತರು ಬೇಗ ಬೆಳೆವ ಸಿಲ್ವರ್ ಓಕ್ (Grivillea robusta) ಮರವನ್ನು ನೆಡುತ್ತಿದ್ದು, ಅದು ಆ ಪ್ರದೇಶದಲ್ಲಿ ಪ್ರಾಕೃತಿಕವಾಗಿ ಬೆಳೆವ ಮರವಲ್ಲ. ಇದರ ಫಲವಾಗಿ ಕೃಷಿ ಅರಣ್ಯಗಳು ಕಾಫಿ, ಸಿಲ್ವರ್ ಓಕ್ ಮತ್ತು ಸ್ಥಳೀಯ ಮರಗಳ ಮಿಶ್ರತಾಣವಾಗಿವೆ. ಸಿಲ್ವರ್ ಓಕ್ ನಕಾರಾತ್ಮಕವಾಗಿ ಪ್ರಭಾವ ಬೀರುತ್ತಿದೆಯೇನೋ ಎಂದುಕೊಂಡೇ, ಚಿಟ್ಟೆಗಳ ವೈವಿಧ್ಯತೆಯ ಮೇಲೆ ಎತ್ತರದ ಮರಗಳ ಹೊದಿಕೆ ಮತ್ತು ಗಿಡಗಳ ಮಿಶ್ರತಳಿಗಳ ಪ್ರಭಾವವನ್ನು ಈ ವಿಜ್ಞಾನಿಗಳು ಪರಿಶೀಲಿಸಿದರು.
ಕೊಳೆತ ಹಣ್ಣುಗಳು, ರಮ್, ಮತ್ತು ಕಬ್ಬಿಣ ಹಾಲಿನ ಜಾಲಗಳನ್ನು ಮಾಡಿ, ಅಧ್ಯಯನ ತಂಡ ಈ ತೋಟಗಳಲ್ಲಿರುವ ೮೬ ವಿವಿಧ ಬಗೆಯ ಚಿಟ್ಟೆಗಳನ್ನು ಗುರುತು ಹಿಡಿದಿದೆ. ನಿರೀಕ್ಷಿಸಿದಂತೆ, ಸ್ಥಳೀಯ ಕಾಡಿಗಿಂತ ತೀರಾ ಭಿನ್ನವಾಗಿರದ ಈ ಪ್ರದೇಶಗಳಿಂದ ಭದ್ರಾ ಹುಲಿ ಅಭಯಾರಣ್ಯದ ಸುತ್ತಮುತ್ತ ಜೀವವೈವಿಧ್ಯತೆ ಹೆಚ್ಚಾಗಿದೆ.
ಕುತೂಹಲಕಾರಿ ಅಂಶವೆಂದರೆ, ಪರದೇಶದ ಸಿಲ್ವರ್ ಓಕ್-ನ ಅಸ್ತಿತ್ವ ಕೂಡ ಚಿಟ್ಟೆಗಳ ವೈವಿಧ್ಯತೆಯ ಮೇಲೆ ಒಟ್ಟಾರೆ ಪರಿಣಾಮ ಬೀರದಿರುವುದು. ಇಷ್ಟಾದರೂ, ಈ ಅಧ್ಯಯನ ತಂಡ ಜಾಗರೂಕವಾಗಿದೆ: ಈ ತೋಟಗಳಲ್ಲಿ ದಟ್ಟವಾದ ಸ್ಥಳೀಯ ಮರಗಳಿರುವುದು ಸಿಲ್ವರ್ ಓಕ್-ನ ಪ್ರಭಾವವನ್ನು ತಾತ್ಕಾಲಿಕವಾಗಿ, ಸದ್ಯಕ್ಕೆ ತೊಡೆದುಹಾಕಿರಬಹುದು. ಆ ಮರದ ಸಂಖ್ಯೆ ಮುಂದೆ ಮತ್ತಷ್ಟು ಹೆಚ್ಚಿದರೆ ಏನಾಗಬಹುದೆಂದು ಕಾದುನೋಡಬೇಕಿದೆ.
ಕಾಫಿ ತೋಟಗಳು ಚಿಟ್ಟೆಗಳಿಗೆ ಸಫಲವಾದ ಆವಾಸಸ್ಥಾನವಾಗಲು ಯೋಗ್ಯವಾಗಿವೆಯೆಂದು ಪ್ರಮಾಣೀಕರಿಸುವ ಮೂಲಕ, ಮನುಷ್ಯ-ಪ್ರಾಬಲ್ಯವಿರುವ ಭೂಭಾಗಗಳು ಸ್ಥಳೀಯ ಜೀವಿಗಳಿಗೆ ಸುಗಮವಾದ ನೆಲೆಯಾಗಬಹುದೆಂಬ ಪ್ರಮುಖ ಮಾಹಿತಿಯನ್ನು ಈ ಅಧ್ಯಯನ ತೋರಿಸಿದೆ. ಅದರಲ್ಲೂ, ಪಶ್ಚಿಮ ಘಟ್ಟಗಳಲ್ಲಿ ಅಪಾರ ಪ್ರಮಾಣದ ಭೂಪ್ರದೇಶಗಳ ಕೃಷಿ ಅರಣ್ಯಗಳು ಅಗಾಧ ಜೀವವೈವಿಧ್ಯತೆಗೆ ಆಶ್ರಯ ನೀಡುತ್ತಿರುವ ಎಲ್ಲಾ ಸಾಧ್ಯತೆಯಿದೆಯೆಂದು ಇದರಿಂದ ತಿಳಿಯುತ್ತದೆ. ಏಕೆ ಕೆಲವು ಜೀವಿಗಳು ತೋಟಗಳನ್ನು ತಮ್ಮ ಆವಾಸಸ್ಥಾನವಾಗಿ ಬಯಸುತ್ತವೆ ಮತ್ತು ಇದು ಋತುಗಳು ಬದಲಾದಂತೆ ಬದಲಾಗುತ್ತಿದೆಯೇ ಎಂದು ಅರಿಯಲು, ಮತ್ತು ಪರಿಸರ ವಿಜ್ಞಾನದ ಸಕ್ರಿಯ ಅಂಶಗಳನ್ನು ಮತ್ತಷ್ಟು ಆಳವಾಗಿ ಅರಿಯಲು, ಈ ಅಧ್ಯಯನ ತಂಡ ಹೆಚ್ಚಿನ ಸಂಶೋಧನೆ ನಡೆಸಬೇಕೆಂದು ಸೂಚಿಸಿದೆ.
ಸಂಶೋಧನಾ ವರದಿ: ಭಾರತದ ಪಶ್ಚಿಮ ಘಟ್ಟಗಳಲ್ಲಿನ ಸಂರಕ್ಷಿತ ಪ್ರದೇಶಗಳ ಸುತ್ತಲಿರುವ ಕಾಫಿ ತೋಟಗಳಲ್ಲಿ ವಯಸ್ಕ ಚಿಟ್ಟೆಗಳ ಸಮುದಾಯಗಳು – ಜೆ. ಡೋಲಿಯಾ, ಎಂ. ಎಸ್. ಡೆವಿ, ಏನ್. ಎ. ಅರವಿಂದ್, ಮತ್ತು ಎ. ಕುಮಾರ್ – Animal Conservation, 2007
ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.