ಮೂಲ ಲೇಖನ: ಮಜ್ಗಾಂವ್ಕರ್, ಐ., ವೈದ್ಯನಾಥನ್, ಎಸ್., ಶ್ರೀವತ್ಸ, ಎ., ಶಿವಕುಮಾರ್, ಎಸ್., ಲಿಮಾಯೆ, ಎಸ್., & ಆತ್ರೇಯ, ವಿ. (2019). ಲ್ಯಾಂಡ್-ಶೇರಿಂಗ್ ಪೊಟೆನ್ಸಿಯಲ್ ಆಫ್ ಲಾರ್ಜ್ ಕಾರ್ನಿವೋರಸ್ ಇನ್ ಹ್ಯೂಮನ್-ಮಾಡಿಫೈಡ್ ಲ್ಯಾಂಡ್ ಸ್ಕೇಪ್ಸ್ ಆಫ್ ವೆಸ್ಟರ್ನ್ ಇಂಡಿಯಾ. ಕಾನ್ಸರ್ವೇಶನ್ ಸೈನ್ಸ್ ಆಂಡ್ ಪ್ರಾಕ್ಸಿಸ್, 1(5), e34.
ಲೇಖಕರು: ಡಾಲ್ಸಿ ಡೇವಿಡ್
ಅನುವಾದ: ಅಭಿಲಾಷಾ ಹೆಗಡೆ
ಮುಖ್ಯಾಂಶಗಳು:
- ಹಲವು ಬಾರಿ ಸಂರಕ್ಷಿತ ಪ್ರದೇಶ ಜಾಲಗಳು (ಪ್ರೊಟೆಕ್ಟೆಡ್ ಏರಿಯಾ ನೆಟ್ವರ್ಕ್) ದೊಡ್ಡ ಆವಾಸಸ್ಥಾನವನ್ನು ಹೊಂದಿರುವ ಪ್ರಾಣಿಪ್ರಭೇದಗಳನ್ನು ಉಳಿಸಿಕೊಳ್ಳಲು ವಿಫಲವಾಗುತ್ತವೆ, ಆದ್ದರಿಂದ ಪ್ರಾಣಿಗಳು ಮಾನವ ಪ್ರಾಬಲ್ಯದ ಭೂದೃಶ್ಯಗಳನ್ನು ಬಳಸಲು ತೊಡಗುತ್ತವೆ; ಅಂತಹ ಜೀವಿಗಳು ಮತ್ತು ಜನರ ನಡುವಿನ ಹೊಂದಾಣಿಕೆಯ ಮತ್ತು ಸಂವಹನದ ಪ್ರಕಾರಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ.
- ಲೇಖಕರು ಪಶ್ಚಿಮ ಮಹಾರಾಷ್ಟ್ರದ ಅರೆ-ಶುಷ್ಕ ಪ್ರದೇಶಗಳಲ್ಲಿ ಮೂರು ದೊಡ್ಡ ಮಾಂಸಾಹಾರಿ ಪ್ರಭೇದಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯನ್ನು ಸೆರೆಹಿಡಿಯಲು, ಅವುಗಳ ವಿತರಣೆಯನ್ನು ಪರಿಶೀಲಿಸಲು ಮತ್ತು ಮಾನವ-ಮಾರ್ಪಾಡಿತ ಭೂಪ್ರದೇಶಗಳಲ್ಲಿ ಅವುಗಳ ಉಪಸ್ಥಿತಿಗೆ ಪ್ರಮುಖ ಕಾರಣಗಳೇನೆಂದು ತಿಳಿಯಲು ಸಂದರ್ಶನದ ಚೌಕಟ್ಟನ್ನು ಬಳಸಿದರು.
- ಮೂರು ದೊಡ್ಡ ಮಾಂಸಾಹಾರಿಗಳಲ್ಲಿ ಚಿರತೆಗಳು, ತೋಳಗಳು ಹಾಗೂ ಕತ್ತೆಕಿರುಬಗಳು, ಕ್ರಮವಾಗಿ ಅಧ್ಯಯನ ಪ್ರದೇಶದ ಶೇಕಡ 57, ಶೇಕಡ 64 ಹಾಗೂ ಶೇಕಡ 75ರಷ್ಟು ದಾಖಲಿಸಲ್ಪಟ್ಟವು.
- ನಿರ್ಮಿತವಾದ ಪ್ರದೇಶಗಳ ವ್ಯಾಪ್ತಿಯು ಎಲ್ಲಾ ಮೂರು ಮಾಂಸಾಹಾರಿಗಳ ಉಪಸ್ಥಿತಿಗೆ ಪ್ರತಿಕೂಲವಾಗಿದ್ದರೂ ಕೆಲವು ವಿಧದ ಕೃಷಿ ಪದ್ಧತಿಗಳಿಂದ ವಿಭಿನ್ನವಾಗಿ ಅವುಗಳಿಗೆ ಅನುಕೂಲಕರವಾಗಿತ್ತು.
- ಈ ಅಧ್ಯಯನವು ಈ ಮೂರು ಮಾಂಸಾಹಾರಿಗಳು ಮಾನವ-ಮಾರ್ಪಾಡಿತ ಭೂಪ್ರದೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ತೋರಿಸುತ್ತದೆ. ಮತ್ತು ಲೇಖಕರು ಪ್ರಸ್ತುತ ಅರಣ್ಯಗಳ ಸಂರಕ್ಷಿತ ಪ್ರದೇಶಗಳ(PA) ಮೇಲಷ್ಟೇ ಕೇಂದ್ರಿಕೃತವಾಗಿರುವ ಸಂರಕ್ಷಣಾ ಯೋಜನೆಗಳಿಗೆ ಅಂತಹ ಸಂಭಾವ್ಯ ಆವಾಸಸ್ಥಾನಗಳನ್ನು ಕೂಡ ಸೇರ್ಪಡೆಗೊಳಿಸಲು ಕರೆ ನೀಡುತ್ತಾರೆ.
ಅರೆ-ಶುಷ್ಕ ಪ್ರದೇಶವು ಕಡಿಮೆ ಮಳೆ ಬೀಳುವ ಹಾಗೂ ಪೊದೆಗಳು ಮತ್ತು ವಿರಳ ಮರಗಳ ಪ್ರಾಬಲ್ಯತೆ ಹೊಂದಿರುವ ರೀತಿಯ ಭೂಪ್ರದೇಶವಾಗಿದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತವು ಈ ಪ್ರದೇಶಗಳನ್ನು ಅವುಗಳ ಆರ್ಥಿಕ ಮೌಲ್ಯದ ಕೊರತೆಯಿದಾಗಿ ಬಂಜರು ಭೂಮಿ(wasteland) ಎಂದು ವರ್ಗೀಕರಿಸಿತ್ತು. ಇದು ಇಂದಿಗೂ ಕೃಷಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಬಳಕೆಗಾಗಿ ಈ ಭೂಮಿಗಳ ತ್ವರಿತಗತಿಯ ಹಾಗೂ ಅವೈಜ್ಞಾನಿಕವಾದ ದೊಡ್ಡ ಪ್ರಮಾಣದ ಪರಿವರ್ತನೆಗೆ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ, ಈ ವಿಶಿಷ್ಟವಾದ ಮಾನವ-ಮಾರ್ಪಾಡಿತ ಭೂಪ್ರದೇಶಗಳು ಕ್ಷಿಪ್ರ ಬದಲಾವಣೆಗಳಿಗೆ ಹೊಂದಿಕೊಳ್ಳುವ ಕಾಡುಪ್ರಾಣಿಗಳಿಗೆ ಸಂಭಾವ್ಯ ವಾಸಸ್ಥಾನಗಳಾಗಿರುವುದರಿಂದ, ಅವುಗಳ ಪರಿಸರ ಪ್ರಾಮುಖ್ಯತೆಯು ಮಹತ್ವ ಪಡೆದಿದೆ.
ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಮೀಸಲು ಅರಣ್ಯಗಳಂತಹ ಸಂರಕ್ಷಿತ ಪ್ರದೇಶಗಳು ಅನೇಕ ವಿಸ್ತೃತ ಶ್ರೇಣಿಯ, ಕಡಿಮೆ-ಸಾಂದ್ರತೆಯ ವನ್ಯಜೀವಿ ಪ್ರಭೇದಗಳನ್ನು ಉಳಿಸಿಕೊಳ್ಳಲಾರವು. ಇಂತಹ ಜೀವಿಗಳು ಹೆಚ್ಚಾಗಿ ಸಂರಕ್ಷಿತ ಪ್ರದೇಶಗಳ ಹೊರಗೆ ಅಸ್ತಿತ್ವದಲ್ಲಿದ್ದು, ಮಾನವ-ಬಳಕೆಯ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದು ವಿವಿಧ ರೀತಿಯ ಸಂಪರ್ಕಗಳಿಗೆ ಕಾರಣವಾಗುತ್ತಿವೆ. ದೊಡ್ಡ ಮಾಂಸಾಹಾರಿಗಳು ಅವುಗಳ ಹೊಂದಾಣಿಕೆ ಸ್ವಭಾವ, ಅಸ್ತಿತ್ವದಲ್ಲಿರುವ ಸಂರಕ್ಷಣಾ ನೀತಿಗಳು, ಮತ್ತು ಭಾರತ ಸೇರಿದಂತೆ ಅನೇಕ ದೇಶಗಳ ಸಮುದಾಯಗಳಲ್ಲಿ ಅವುಗಳ ಬಗೆಗಿನ ಸಹಿಷ್ಣುತೆಯ ಕಾರಣದಿಂದ ಈ ಹಂಚಲ್ಪಟ್ಟ ಸ್ಥಳಗಳಲ್ಲಿ ಉಳಿದುಕೊಂಡಿವೆ. ವನ್ಯಜೀವಿ ಮತ್ತು ಮನುಷ್ಯರ ಮಧ್ಯೆ ಮುಂದುವರಿದ ಸಂಪರ್ಕಗಳು, ಅದರಲ್ಲೂ ನಕಾರಾತ್ಮಕವಾದವುಗಳು, ಸ್ಥಳೀಯ ಸಮುದಾಯಗಳಲ್ಲಿರುವ ಸಹಿಷ್ಣುತೆಯ ನಷ್ಟಕ್ಕೂ ಹಾಗೂ ಕ್ರಮೇಣಾಂತರ ಪ್ರತೀಕಾರಗಳ ಮೂಲಕ ವನ್ಯಜೀವಿಗಳ ಸಂಖ್ಯೆಯ ಕುಸಿತಕ್ಕೂ ಕಾರಣವಾಗಬಹುದು. ಐತಿಹಾಸಿಕವಾಗಿ ಮನುಷ್ಯ ಮತ್ತು ದೊಡ್ಡ ಮಾಂಸಾಹಾರಿಗಳು ಸ್ಥಳಗಳನ್ನು ಹಂಚಿಕೊಂಡಿದ್ದರೂ, ಹೆಚ್ಚಿನ ನಿರ್ವಹಣೆ ಮತ್ತು ಸಂಶೋಧನೆಯ ಪ್ರಯತ್ನಗಳು ಸಂರಕ್ಷಿತ ಪ್ರದೇಶಗಳ ಒಳಗೆ ವಾಸಿಸುವ ಪ್ರಾಣಿಗಳ ಸಂಖ್ಯೆಯನ್ನು ಮಾತ್ರ ಗುರಿಯಾಗಿಸಿಕೊಂಡಿವೆ.
2019ರಲ್ಲಿ ಪ್ರಕಟವಾದ ಪ್ರಸಕ್ತ ಅಧ್ಯಯನವನ್ನು, ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್-ನ ಇರಾವತಿ ಮಜ್ಗಾಂವ್ಕರ್-ರವರು ವಿವಿಧ ಸಂಸ್ಥೆಗಳ ಇತರ ಸಂಶೋಧನಾಕಾರರ ಸಹಯೋಗದೊಂದಿಗೆ ಮುನ್ನಡೆಸಿದರು. ಸಂಶೋಧನಾಕಾರರು, ಹೆಚ್ಚು ಜನಸಾಂದ್ರತೆಯುಳ್ಳ ಮಾನವ-ನಿಬಿಡ ಅರೆ-ಶುಷ್ಕ ಭೂಪ್ರದೇಶದಲ್ಲಿ ಮೂರು ದೊಡ್ಡ ಮಾಂಸಾಹಾರಿಗಳಾದ ಚಿರತೆ (Panthera pardus), ತೋಳ (Canis lupus pallipes) ಹಾಗೂ ಪಟ್ಟೆ ಕಿರುಬ (Hyaena hyaena)ಗಳ ಉಲ್ಲೇಖಗಳ ಮಾದರಿಗಳನ್ನು ಹಾಗೂ ಅಸ್ತಿತ್ವಕ್ಕೆ ಕಾರಣವಾದ ಅಂಶಗಳನ್ನು ತನಿಖಿಸಿದರು. ಪಶ್ಚಿಮ ಮಹಾರಾಷ್ಟ್ರದ ಏಳು ಜಿಲ್ಲೆಗಳಾದ ನಾಸಿಕ್, ಅಹಮದ್‌ನಗರ, ಪುಣೆ, ಸತಾರಾ, ಸಾಂಗ್ಲಿ, ಸೊಲ್ಲಾಪುರ ಮತ್ತು ಕೊಲ್ಹಾಪುರಗಳಲ್ಲಿ ದೊಡ್ಡ ಮಾಂಸಾಹಾರಿ ಪ್ರಾಣಿಗಳ ಹಂಚಿಕೆಯ ಮೌಲ್ಯಮಾಪನವನ್ನು ಮಾಡಲಾಯಿತು. ತಮ್ಮ ಆಡಳಿತ ಘಟಕದಲ್ಲಿ ಎಲ್ಲಾ ಮೂರು ಮಾಂಸಾಹಾರಿಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯನ್ನು ದಾಖಲಿಸಲು ಪ್ರಮುಖ ಮಾಹಿತಿದಾರರಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಸಂದರ್ಶಿಸುವ ಮೂಲಕ ಇದನ್ನು ನಡೆಸಲಾಯಿತು. ಅಧ್ಯಯನ ಪ್ರದೇಶದಾದ್ಯಂತ 305 ತಾಣಗಳಲ್ಲಿ ಮಾದರಿಗಳನ್ನು ಪೂರ್ಣಗೊಳಿಸಲು 2015ರ ಜನವರಿಯಿಂದ 2015ರ ಜುಲೈವರೆಗೆ ಸಂದರ್ಶನಗಳನ್ನು ನಡೆಸಲಾಯಿತು. ಸಂದರ್ಶನಕ್ಕೆ ಪ್ರತಿಕ್ರಿಯಿಸಿದವರಲ್ಲಿ (ಅರಣ್ಯ ಇಲಾಖೆ ಸಿಬ್ಬಂದಿ) ಕಳೆದ ವರ್ಷದಲ್ಲಿ ಆಯಾ ಜಾತಿಯ (ಸತ್ತ/ಬದುಕಿರುವ) ಪ್ರಾಣಿಗಳನ್ನು ಪ್ರತ್ಯಕ್ಷವಾಗಿ ನೋಡಿದವರ ಸಂದರ್ಶನವನ್ನು ಮಾತ್ರ ಪರಿಗಣಿಸಲಾಯಿತು. ಹೀಗೆ ಸಂಗ್ರಹಿಸಲಾದ ಮಾಹಿತಿಯನ್ನು ಮಾಂಸಾಹಾರಿಗಳ ವಿತರಣೆಯ ನಮೂನೆಗಳನ್ನು ಪರಿಶೀಲಿಸಲು ಆಕ್ಯುಪೆನ್ಸಿ ಮಾಡೆಲ್ ಫ್ರೇಮ್ ವರ್ಕ್-ನ್ನು ಬಳಸಿ ವಿಶ್ಲೇಷಿಸಲಾಯಿತು.
179 ಸ್ಥಳಗಳಲ್ಲಿ ಕತ್ತೆಕಿರುಬ, 161 ಸ್ಥಳಗಳಲ್ಲಿ ತೋಳ ಹಾಗೂ 150 ಸ್ಥಳಗಳಲ್ಲಿ ಚಿರತೆಯ ಉಪಸ್ಥಿತಿಯು ದಾಖಲಿಸಲ್ಪಟ್ಟಿದೆ. 89,000 ಚದರ ಕಿಲೋಮೀಟರ್ ವ್ಯಾಪಿಸಿರುವ ಅಧ್ಯಯನ ಪ್ರದೇಶದಾದ್ಯಂತ, ಪ್ರಸ್ತುತ ಕೇವಲ ಶೇಕಡ 2.6 ಪ್ರದೇಶವು ಸಂರಕ್ಷಿತವಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಅಧ್ಯಯನಕ್ಕೊಳಗಾದ ಎಲ್ಲಾ ಮೂರು ಮಾಂಸಾಹಾರಿಗಳು, ಒಂದು ಚದರ ಕಿಲೋಮೀಟರ್ಗೆ 1,169 ಜನರಷ್ಟು ಹೆಚ್ಚಾಗಿರುವ ಮಾನವ ಸಾಂದ್ರತೆಯನ್ನು ಹೊಂದಿರುವ ಶೇಕಡ 25ರಷ್ಟು ಅಧ್ಯಯನ ಪ್ರದೇಶದಲ್ಲಿ ಸಹಬಾಳ್ವೆಯ ಹೆಚ್ಚಿನ ಅವಕಾಶವನ್ನು ಹೊಂದಿದ್ದವು. ಹಿಂದಿನ ಸಂಶೋಧನೆಗಳಲ್ಲಿ ಚಿರತೆಯು ನಗರ ಭೂಪ್ರದೇಶದ ಕೆಲವು ಭಾಗಗಳಲ್ಲಿ ವಾಸಿಸಲು ಹೊಂದಿಕೊಂಡಿದೆ ಎಂಬುದನ್ನು ಗಮನಿಸಲಾಗಿತ್ತು, ಆದರೆ ಈ ಭೂಪ್ರದೇಶದಲ್ಲಿ ಎಲ್ಲಾ ಮೂರು ದೊಡ್ಡ ಮಾಂಸಾಹಾರಿಗಳು ಮಾನವನ ಉಪಸ್ಥಿತಿ ಕಡಿಮೆ ಇರುವ ಪ್ರದೇಶಗಳಿಗೆ ಆದ್ಯತೆ ನೀಡುವುದನ್ನು ಗಮನಿಸಲಾಯಿತು.
ನೈಸರ್ಗಿಕವಾಗಿ ಬೇಟೆ ಕಡಿಮೆ ಇರುವ ಅಥವಾ ಲಭ್ಯವೇ ಇಲ್ಲದ ಪ್ರದೇಶಗಳಲ್ಲಿ, ಈ ಪ್ರಭೇದಗಳು ತಮ್ಮ ಉಳಿವಿಗಾಗಿ ಹೆಚ್ಚಾಗಿ ಸಾಕು ಪ್ರಾಣಿಗಳು ಮತ್ತು ಜಾನುವಾರುಗಳ ಮೇಲೆ ಅವಲಂಬಿತವಾಗಿವೆ. ಅಧ್ಯಯನವು ಕತ್ತೆಕಿರುಬ ಮತ್ತು ಸಾಕುನಾಯಿಗಳ ಇರುವಿಕೆಯ ನಡುವಿನ ಒಂದು ಕುತೂಹಲಕಾರಿ ಸಂಬಂಧವನ್ನು ತೋರಿಸುತ್ತದೆ, ಅದು ಸೂಚಿಸುವುದೇನೆಂದರೆ ನಾಯಿಗಳನ್ನು ಆಕರ್ಷಿಸುವ ತ್ಯಾಜ್ಯಗಳ ಮೇಲೆ ಕತ್ತೆಕಿರುಬಗಳು ಅವಲಂಬಿತವಾಗಿರುವುದು. ಕೃಷಿ ಭೂಮಿ ಬಳಕೆಯ ಆದ್ಯತೆಗೆ ಸಂಬಂಧಿಸಿದಂತೆ, ವರ್ಷವಿಡೀ ಸಾಗುವಳಿಯಲ್ಲಿರುವ ಪ್ರದೇಶಗಳು ಚಿರತೆಗಳಿಂದ ಆದ್ಯತೆಗೊಳಪಟ್ಟಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಋತುಮಾನಕ್ಕೆ ಅನುಕೂಲಕರವಾಗಿ ಬೆಳೆ ಬೆಳೆಯುವ ಪ್ರದೇಶಗಳು ತೋಳಗಳಿಂದ ಆದ್ಯತೆಗೊಳಪಟ್ಟಿವೆ. ಕತ್ತೆಕಿರುಬಗಳು ಯಾವುದೇ ರೀತಿಯ ನಿರ್ದಿಷ್ಟ ಕೃಷಿ ಭೂಮಿ ಬಳಕೆಗೆ ಆದ್ಯತೆ ನೀಡದಿದ್ದರೂ ಕಡಿಮೆ ಸಸ್ಯವರ್ಗಗಳಿರುವ ಒಣ ಭೂಮಿಗಳಿಂದ ದೂರವಿದ್ದವು. ಇಂತಹ ಜ್ಞಾನವು, ಎಲ್ಲಿ ಸರ್ಕಾರಿ ಅನುದಾನಿತ ಕ್ಷಿಪ್ರ ನಗರೀಕರಣದಿಂದ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಸ್ಥಳಗಳ ಪರಿವರ್ತನೆಗಳಿಂದ ವಾಸಸ್ಥಾನದ ಬದಲಾವಣೆಯಾಗುವ ಸನ್ನಿವೇಶಗಳಲ್ಲಿ, ಈ ಮೂರು ಮಾಂಸಾಹಾರಿ ಜೀವಿಗಳ ನಡುವೆ ವಾಸಸ್ಥಾನದ ಆದ್ಯತೆಯ ಬದಲಾವಣೆಗಳನ್ನು ಊಹಿಸಲು ಬಹಳ ಉಪಯುಕ್ತವಾಗಿದೆ.
ಇದರೊಂದಿಗೆ ಸಂರಕ್ಷಣೆ ಮತ್ತು ನಿರ್ವಹಣೆಯ ಯೋಜನೆ ರೂಪಿಸುವಾಗ ಇಂತಹ ಅರೆ-ಶುಷ್ಕ ಪ್ರದೇಶಗಳನ್ನು ಯೋಜನೆಯಲ್ಲಿ ಒಳಗೊಡಿಸಲು ಸಂಶೋಧಕರು ಕರೆ ನೀಡುತ್ತಾರೆ. ಭವಿಷ್ಯದಲ್ಲಿ ಇಂತಹ ಹಂಚಿಕೆಯ ಸ್ಥಳಗಳ ನಿರಂತರ ಅಸ್ತಿತ್ವಕ್ಕಾಗಿ ಹೊಸ ನಿರ್ವಹಣಾ ತಂತ್ರಗಳನ್ನು ರಚಿಸುವಾಗ ಹಳೆಯ ಹಾಗೂ ನಿರರ್ಥಕ ವಿಧಾನಗಳನ್ನು ಅನುಸರಿಸುವ ಬದಲು, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅಂಶಗಳನ್ನೂ ಪರಿಗಣಿಸುವುದರ ಮಹತ್ವವನ್ನು ಅವರು ಒತ್ತಿ ಹೇಳುತ್ತಾರೆ. ಪ್ರಸ್ತುತ ಅಧ್ಯಯನವು ಈ ಹಂಚಿಕೆಯಾದ ಸ್ಥಳಗಳಲ್ಲಿ ಜನರು ಮತ್ತು ಪರಭಕ್ಷಕಗಳ ನಡುವಿನ ಕ್ರಿಯಾಶೀಲ ಸಂಬಂಧವನ್ನು ಒತ್ತಿಹೇಳುತ್ತದೆ. ಆದರೆ ಈ ಸಂಬಂಧಗಳಲ್ಲಿ ಭೂಮಿಯ ಬಳಕೆಯ ಬದಲಾವಣೆಯಿಂದಾಗುವ ಪರಿಣಾಮ, ಜನರ ಜೀವನ ಶೈಲಿ ಮತ್ತು ಜಾನುವಾರುಗಳ ಬೇಟೆಯಿಂದ ಸಮುದಾಯದ ಸಹಿಷ್ಣುತೆಯ ಮೇಲೆ ಆಗುವ ಪರಿಣಾಮಗಳಂತಹ ಅಂಶಗಳು ಇನ್ನೂ ವಿಶ್ಲೇಷಣೆಗೊಳಪಡಬೇಕಾಗಿದೆ.
ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಮುಖ್ಯಪದಗಳು: ಮಾಂಸಾಹಾರಿಗಳು, ಮಾನವ-ನಿರ್ಮಿತ ಭೂಪ್ರದೇಶ, ಕತ್ತೆಕಿರುಬ, ಭಾರತ, ಚಿರತೆ, ತೋಳ, ಹಂಚಿಕೆಯಾದ ಸ್ಥಳಗಳು, ಅರೆ-ಶುಷ್ಕ ಪ್ರದೇಶ