ಲೇಖಕರು: ವಿನ್ನಿ ಜೈನ್
ಅನುವಾದ: ಸೌರಭಾ ರಾವ್
ಈ ಲೇಖನ ನಮ್ಮ ಸಂಸ್ಥೆಯ ವಿಜ್ಞಾನಿಗಳು ನಡೆಸಿರುವ ಇತ್ತೀಚಿನ ಅಧ್ಯಯನಗಳ ಸರಣಿಯಲ್ಲಿ ಮೊದಲನೆಯದು.
ಭೂಮಿಯ ಮೇಲ್ಮೈ ಪರ್ವತ ಶ್ರೇಣಿಗಳಿಂದ, ಅಗಾಧ ಸಾಗರಗಳಿಂದ, ಆಳವಾದ ಕಣಿವೆಗಳಿಂದ, ರಭಸವಾಗಿ ಹರಿಯುವ ನದಿಗಳಿಂದ ಕೂಡಿದ್ದು, ಎಷ್ಟೋ ಪ್ರಾಣಿಗಳ ಸಂಚಾರಕ್ಕೆ ನೈಸರ್ಗಿಕವಾಗಿಯೇ ಅಡ್ಡಿಯಾಗಿವೆ. ಮನುಷ್ಯರಾದ ನಮಗೆ ಈ ಭೌಗೋಳಿಕ ವಿವರಗಳು ಈಗ ಕೇವಲ ಸಣ್ಣ ಅನನುಕೂಲಗಳು ಮಾತ್ರ, ಏಕೆಂದರೆ ನಾವು ರಸ್ತೆ, ರೈಲು, ಮತ್ತು ವಿಮಾನಗಳನ್ನು ಒಳಗೊಂಡ ದೊಡ್ಡ ಸಂಚಾರ ವ್ಯವಸ್ಥೆಯನ್ನು ಆವಿಷ್ಕಾರ ಮಾಡಿಕೊಂಡಿದ್ದೇವೆ. ಕಾಲ್ನಡಿಗೆಯಂಥ ದೈಹಿಕ ತ್ರಾಸಗಳ ಬದಲಿಗೆ ನಾವು ಟ್ರಾಫಿಕ್-ನಲ್ಲಿ, ವಿಮಾನ ನಿಲ್ದಾಣಗಳ ಪಂಕ್ತಿಗಳಲ್ಲಿ ಸಿಕ್ಕಿಕೊಳ್ಳುತ್ತೇವೆ. ಆದರೆ, ಭೂಮಿಯನ್ನು ನಮ್ಮ ಕೆಲಸಗಳಿಗೆ ಅನುಕೂಲವಾಗುವಂತೆ ನಡೆಯಿಸಿಕೊಳ್ಳುತ್ತಿರುವ ನಾವು ಬೇರೆ ಪ್ರಾಣಿಗಳ ಸಂಚಾರಕ್ಕೆ ಎಷ್ಟರ ಮಟ್ಟಿಗೆ ತೊಡಕನ್ನುಂಟು ಮಾಡುತ್ತಿದ್ದೇವೆ?
ಸಸ್ಯರಾಶಿ ಮತ್ತು ಆವಾಸಸ್ಥಾನಗಳಲ್ಲಿ ಋತುಕಾಲಿಕವಾಗಿ ಆಗುವ ಬದಲಾವಣೆಗಳಿಂದ ವಿಸ್ತಾರವಾದ ಆವಾಸಸ್ಥಾನದ ಅಗತ್ಯವಿರುವ ಆನೆ ಮತ್ತು ಹುಲಿಯಂತಹ ಪ್ರಾಣಿಗಳು ಹೆಚ್ಚಾಗಿ ಸಂಚರಿಸುತ್ತವೆ. ಭೂತಕಾಲದಲ್ಲಿ ಅವುಗಳಿಗೆ ಕೇವಲ ನೈಸರ್ಗಿಕ ಅಡೆತಡೆಗಳಿದ್ದವು, ಇಂದು ಅವುಗಳ ಮಾರ್ಗಗಳಿಗೆ ರಸ್ತೆ, ಆಣೆಕಟ್ಟೆ, ವಿದ್ಯುತ್ ಪ್ರಸರಣ ತಂತಿಗಳು ಮತ್ತು ಮಾನವ ವಸತಿಗಳು ಅಡಚಣೆಯಾಗಿವೆ. ವನ್ಯಜೀವಿಗಳ ನೈಸರ್ಗಿಕ ಸಂಚಾರಕ್ಕೆ ಹೀಗೆ ಮನುಷ್ಯರಿಂದ ಆಗಿರುವ ಬದಲಾವಣೆಗಳು ಜೀವವೈವಿಧ್ಯತೆಯ ಮೇಲೆ ದೀರ್ಘಕಾಲದ ಪರಿಣಾಮಗಳನ್ನುಂಟು ಮಾಡುತ್ತವೆ. ಆವಾಸಸ್ಥಾನಗಳ ಇಂತಹ ವಿಭಾಗೀಕರಣದಿಂದಾಗಿ, ಪ್ರಾಕೃತಿಕ ಪ್ರಕ್ರಿಯೆಗಳಾದ ಬೀಜ ಪ್ರಸರಣ (ಸೀಡ್ ಡಿಸ್ಪರ್ಸಲ್) ಮತ್ತು ವಂಶವಾಹಿಯ ಹರಿವು (ಜೀನ್ ಫ್ಲೋ)ಗಳಿಗೆ ಅಡಚಣೆ ಉಂಟುಮಾಡಿದಂತಾಗುತ್ತದೆ. ಇದರಿಂದ ಎಬೋಲಾ ವೈರಸ್ ರೋಗ, ಕೋವಿಡ್-೧೯ರಂತಹ ರೋಗಗಳ ಹರಡುವಿಕೆ ಮತ್ತು ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾಗುತ್ತವೆ.
ಭಾರತದಲ್ಲಿ ಮನುಷ್ಯರು ಮಾಡುವ ಬದಲಾವಣೆಗಳಿಂದ ದೊಡ್ಡ ಸಸ್ತನಿಗಳ ಸಂಚಾರದ ಮೇಲಾಗುವ ಪರಿವರ್ತೆನೆಗಳ ಬಗ್ಗೆ ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್; ಫೌಂಡೇಶನ್ ಆಫ್ ಎಕಲಾಜಿಕಲ್ ರಿಸರ್ಚ್, ಅಡ್ವೊಕಸಿ, ಅಂಡ್ ಲರ್ನಿಂಗ್ (FERAL); ಮತ್ತು ಕೊಲಂಬಿಯಾ ಯೂನಿವರ್ಸಿಟಿಯ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಆನೆ, ಕಾಡೆಮ್ಮೆ, ಚಿರತೆ, ಕಡವೆ ಮತ್ತು ಕರಡಿಗಳ (ಐದು ಪ್ರಾಣಿಗಳ) ಸಂಚಾರ ಮತ್ತು ಹರಡುವಿಕೆಯನ್ನೂ, ಮಧ್ಯ ಭಾರತದಲ್ಲಿ ಕಾಡೆಮ್ಮೆ, ಚಿರತೆ, ಕಡವೆ ಮತ್ತು ಕರಡಿಗಳ (ನಾಲ್ಕು ಪ್ರಾಣಿಗಳ) ಸಂಚಾರ ಮತ್ತು ಹರಡುವಿಕೆಯನ್ನೂ ವಿಜ್ಞಾನಿಗಳು ಸಿಮ್ಯುಲೇಟ್ ಮಾಡಿ ಅಧ್ಯಯಿಸಿದ್ದಾರೆ. ಮನುಷ್ಯರ ಭೂಪ್ರದೇಶಗಳ ಬಳಕೆ, ಮೂಲಭೂತ ಸೌಕರ್ಯಗಳು ಮತ್ತು ಜನಸಂಖ್ಯೆಯಿಂದ ಹೆಚ್ಚು ತಡೆಯಿದ್ದ ಪ್ರದೇಶಗಳಲ್ಲಿ ಪ್ರತಿಯೊಂದು ಪ್ರಾಣಿಯ ಸಂಚಾರ ಹೇಗೆ ಕಡಿಮೆಯಾಗಿದೆಯೆಂದೂ, ಕಡಿಮೆ ತಡೆಯಿದ್ದ ಪ್ರದೇಶಗಳಲ್ಲಿ ಪ್ರತಿಯೊಂದು ಪ್ರಾಣಿಯ ಸಂಚಾರ ಹೇಗೆ ಹೆಚ್ಚಾಗಿದೆಯೆಂದೂ ಕಂಡುಕೊಂಡಿದ್ದಾರೆ.
ಪಶ್ಚಿಮ ಘಟ್ಟಗಳು ಮತ್ತು ಮಧ್ಯಭಾರತದಲ್ಲಿ ವನ್ಯಜೀವಿಗಳ ಸಂಚಾರದ ಮೇಲೆ ಮನುಷ್ಯರಿಂದ ಭೂಪ್ರದೇಶಗಳ ಬಳಕೆ, ಮೂಲಭೂತ ಸೌಕರ್ಯಗಳು ಮತ್ತು ಜನಸಂಖ್ಯೆಯಿಂದಾಗುತ್ತಿರುವ ಪರಿಣಾಮಗಳನ್ನು ವಿಜ್ಞಾನಿಗಳು ಈ ಅಧ್ಯಯನದಲ್ಲಿ ಪರಿಶೀಲಿಸಿದರು. ಮನುಷ್ಯರ ಚಟುವಟಿಕೆಯಿಲ್ಲದ ನೈಸರ್ಗಿಕ ಪ್ರದೇಶಗಳಲ್ಲಿ ಮತ್ತು ಮನುಷ್ಯರು ವಾಸಿಸುವ ಪ್ರದೇಶಗಳಿಗೆ ತಾಗಿಕೊಂಡಿರುವ ಅರಣ್ಯಪ್ರದೇಶಗಳಲ್ಲಿ ಮಾತ್ರ ಪ್ರಾಣಿಗಳ ತಡೆರಹಿತ ಸಂಚಾರ ಕಂಡುಬಂದಿದೆ. ಕಾಡುಪ್ರಾಣಿಗಳ ಸಂಚಾರಕ್ಕೆ ಹೋಲಿಕೆಯ ದೃಷ್ಟಿಯಿಂದ ಅಡೆತಡೆಯಿಲ್ಲದಿದ್ದರೂ, ಬಹಳಷ್ಟು ಪ್ರದೇಶಗಳನ್ನು ನಮ್ಮ ಬಳಕೆ ಮತ್ತು ಮೂಲಭೂತ ಸೌಕರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದೂ ಅಧ್ಯಯನದಿಂದ ತಿಳಿದುಬಂದಿದೆ. ಇದರಿಂದಾಗಿ, ಅಧ್ಯಯನದ ಭಾಗವಾಗಿರುವ ಪ್ರಾಣಿಗಳಿಗೆ ಸಂಚರಿಸಲು ಮನುಷ್ಯರು ಬಳಸದ, ಅಡಚಣೆಯಿಲ್ಲದೆ ನಿರಂತರತೆ ಇರುವ ಭೂಪ್ರದೇಶಗಳ ತೀವ್ರ ಕೊರತೆಯಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಈ ಅಧ್ಯಯನದ ಆಧಾರದ ಮೇಲೆ ರಚಿಸಲಾದ ನಕ್ಷೆಯಿಂದ ಬಹಳಷ್ಟು ಪ್ರಾಣಿಗಳ ಚಲನೆ, ಸಂಚಾರಕ್ಕೆ ಹೆಚ್ಚು ಸ್ವಾತಂತ್ರ ಕಲ್ಪಿಸಲು ಯೋಗ್ಯವಾದ ಪ್ರದೇಶಗಳನ್ನು ಗುರುತಿಸಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ 20-55% ಮತ್ತು ಮಧ್ಯ ಭಾರತದಲ್ಲಿ 50-70%ರಷ್ಟು ನೈಸರ್ಗಿಕ ಭೂಪ್ರದೇಶದಲ್ಲಿ ಮಾತ್ರ ಪ್ರಾಣಿಗಳ ತಡೆರಹಿತ ಚಲನೆಗೆ ಅವಕಾಶವಿದೆ. ಹೀಗಾಗಿ, ನೈಸರ್ಗಿಕ ಪ್ರದೇಶಗಳ ಹೊರಗೂ ಸಾಕಷ್ಟು ಸಂಚಾರವನ್ನು ಕಾಪಾಡಿಕೊಳ್ಳಲು ಆ ಪ್ರದೇಶಗಳ ಬೃಹತ್ ಪಾಲನ್ನು ರಕ್ಷಿಸುವುದು ಅತ್ಯಗತ್ಯ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಪ್ರಾಣಿಗಳ ತಡೆರಹಿತ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರದೇಶಗಳನ್ನು ಮನುಷ್ಯರ ಚಟುವಟಿಕೆಗಳಿಂದ ಮುಕ್ತಗೊಳಿಸಿ ರಕ್ಷಿಸಬೇಕು ಎಂದು ವಿಜ್ಞಾನಿಗಳು ಅಧ್ಯಯನದ ಮೂಲಕ ಒತ್ತಿ ಹೇಳುತ್ತಾರೆ. ಪ್ರಾಣಿಗಳ ಸಂಚಾರಕ್ಕೆ ತಡೆಯಾಗುವ ಪ್ರದೇಶಗಳಲ್ಲಿ ಭೂಮಿಯ ಪುನಸ್ಸ್ವಾಧೀನ ಅಥವಾ ಮನುಷ್ಯ-ವನ್ಯಜೀವಿ ನಡುವೆ ಸಂಪರ್ಕ ಕಡಿಮೆ ಮಾಡುವ ಮೂಲಕ ಇಂತಹ ಪ್ರದೇಶಗಳ ನಡುವೆ ಸಂಪರ್ಕ ಹೆಚ್ಚಿಸಬೇಕು. ಅಥವಾ ಎತ್ತರದ ರಸ್ತೆಗಳು, ಭೂಸೇತುವೆ, ಮೇಲ್ಸೇತುವೆ, ಗ್ಲೈಡರ್ ಪೋಸ್ಟ್-ಗಳನ್ನು ಕಟ್ಟುವ ಮೂಲಕ ಸಂಪರ್ಕವನ್ನು ಹೆಚ್ಚಿಸಬಹುದು.
ಪಶ್ಚಿಮ ಘಟ್ಟಗಳು ಮತ್ತು ಮಧ್ಯಭಾರತದಲ್ಲಿ ಕಾಡುಪ್ರಾಣಿಗಳ ಸಂಚಾರಕ್ಕೆ ಭೂಪ್ರದೇಶಗಳ ವ್ಯಾಪ್ಯತೆಯನ್ನು ವೈಜ್ಞಾನಿಕವಾಗಿ ಅಂದಾಜು ಮಾಡಿರುವ ಮೊದಲ ಅಧ್ಯಯನ ಇದು. ಈ ಅಧ್ಯಯನದ ವಿಧಾನವನ್ನು ಕೇವಲ ಪಶ್ಚಿಮ ಘಟ್ಟಗಳು ಮತ್ತು ಮಧ್ಯ ಭಾರತದಲ್ಲಲ್ಲದೇ, ದೊಡ್ಡ ಸಸ್ತನಿಗಳ ಚಲನೆ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದಿರುವ ಪ್ರದೇಶಗಳಲ್ಲಿ ಕೂಡಾ ಬಳಸಬಹುದು. ಅಧ್ಯಯನದ ಸಂಪನ್ಮೂಲಗಳಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ ಮುಂಬರುವ ಮೂಲಭೂತ ಸೌಕರ್ಯ ಯೋಜನೆಗಳನ್ನು ರೂಪಿಸಬಹುದು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಿಂದಾಗಿ ಬೇರೆ ಪ್ರದೇಶಗಳಲ್ಲೂ ಇಂತಹ ಅಧ್ಯಯನಗಳನ್ನು ನಡೆಸಬೇಕು ಎಂದೂ, ಇದರಿಂದ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಮತ್ತಷ್ಟು ತುರ್ತಿನಿಂದ ಕೆಲಸ ಮಾಡಬೇಕೆಂದೂ ವಿಜ್ಞಾನಿಗಳು ಒತ್ತಿ ಹೇಳುತ್ತಾರೆ. ಇಲ್ಲದಿದ್ದರೆ, ಸಂಚಾರಕ್ಕಾಗಿ ವಿಸ್ತಾರವಾದ ನೈಸರ್ಗಿಕ ಪ್ರದೇಶದ ಅಗತ್ಯವಿರುವ ಕಾಡುಪ್ರಾಣಿಗಳು ನಮ್ಮ ಸಂರಕ್ಷಿತ ಪ್ರದೇಶಗಳ ಹೊರಗೆ ಹಾಗಿರಲಿ, ನಮ್ಮ ನೈಸರ್ಗಿಕ ಪರಂಪರೆಯಿಂದ ಪೂರ್ತಿಯಾಗಿ ಕಣ್ಮರೆಯಾಗುವ ಸಾಧ್ಯತೆ ಇದೆ.
ಮೂಲ ಸಂಶೋಧನಾ ವರದಿ: ನ್ಯಾವಿಗೇಟಿಂಗ್ ಪೇವ್ಡ್ ಪ್ಯಾರಡೈಸ್: ಎವ್ಯಾಲ್ಯುಏಟಿಂಗ್ ಲ್ಯಾಂಡ್ಸ್ಕೇಪ್ ಪರ್ಮೆಯಬಿಲಿಟಿ ಟು ಮೂವ್ಮೆಂಟ್ ಫಾರ್ ಲಾರ್ಜ್ ಮ್ಯಾಮಲ್ಸ್ ಇನ್ ಟೂ ಕಾನ್ಸರ್ವೇಷನ್ ಪ್ರಯಾರಿಟಿ ಲ್ಯಾಂಡ್ಸ್ಕೇಪ್ಸ್ ಇನ್ ಇಂಡಿಯಾ – ಅನೀಷಾ ಜಯದೇವನ್, ರಜತ್ ನಾಯಕ್, ಡಾ।। ಕೃತಿ ಕೆ. ಕಾರಂತ್, ಜಗದೀಶ್ ಕೃಷ್ಣಸ್ವಾಮಿ, ಡಾ।। ರೂಥ್ ಡಿಫ್ರೈಸ್, ಡಾ।। ಕೆ. ಉಲ್ಲಾಸ ಕಾರಂತ ಮತ್ತಿ ಶ್ರೀನಿವಾಸ್ ವೈದ್ಯನಾಥನ್ – ಬಯಲಾಜಿಕಲ್ ಕಾನ್ಸರ್ವೇಷನ್, ೨೦೨೦
ಮೂಲ ಸಂಶೋಧನಾ ಪ್ರಕಟಣೆಯನ್ನು PDF ಫಾರ್ಮ್ಯಾಟ್-ನಲ್ಲಿ ಇಲ್ಲಿ ಓದಬಹುದು.
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.