ಲೇಖಕರು: ಮಿಶೆಲ್ ಲೂಯಿಜ್ಹ್
ಅನುವಾದ: ಸೌರಭಾ ರಾವ್

ಈ ಲೇಖನ ಭಾರತದಲ್ಲಿ ಮಾನವ-ವನ್ಯಜೀವಿ ಹೊಂದಾಣಿಕೆ ಎಂಬ ಸರಣಿಯಲ್ಲಿ ಮೂರನೆಯದು.

ವನ್ಯಜೀವಿಗಳ ರಕ್ಷಣೆಯ ಕೆಲಸ ಅದರದ್ದೇ ಆದ ಬೆಲೆ ತೆರುತ್ತದೆ. ‘ಮಾನವ-ವನ್ಯಜೀವಿ ಸಂಘರ್ಷ’, ಸಂರಕ್ಷಣಾ ಸಾಹಿತ್ಯದಲ್ಲಿ ಪದೇಪದೇ ಇಣುಕುವ ನುಡಿಗಟ್ಟು, ಪ್ರಪಂಚದಾದ್ಯಂತ ಸರ್ಕಾರಗಳಿಗೆ, ಸಂರಕ್ಷಣಾವಾದಿಗಳಿಗೆ ಮತ್ತು ವಿಜ್ಞಾನಿಗಳಿಗೆ ದಿನೇ ದಿನೇ ಹೆಚ್ಚುತ್ತಿರುವ ಕಳವಳಕಾರಿ ವಿಷಯಗಳಲ್ಲೊಂದು. ಕಳಕಳಿಯ ಹೊರತಾಗಿಯೂ, ಮಾನವ-ವನ್ಯಜೀವಿ ಸಂಘರ್ಷದ ಸುತ್ತ ಹೆಣೆದಿರುವ ಕಥೆಗಳು ಅಭಿಪ್ರಾಯ ಭೇದಗಳನ್ನು ಹುಟ್ಟುಹಾಕುತ್ತಲೇ ಇವೆ. ಅಭಯಾರಣ್ಯಗಳ ಸುತ್ತಮುತ್ತಲೇ ವಾಸಿಸುವ ವ್ಯವಸಾಯ ಸಮುದಾಯಗಳು ಆಗಾಗ ಬೆಳೆ ಹಾನಿ ಮತ್ತು ಜಾನುವಾರು ನಷ್ಟ ಅನುಭವಿಸುವುದರಿಂದ, ದಕ್ಷಿಣ ಭಾರತದಲ್ಲಿ ಈ ಸಂಘರ್ಷ ಮತ್ತಷ್ಟು ಹೆಚ್ಚು.

ವಾಸ್ತವವಾಗಿ, ‘ಮಾನವ-ವನ್ಯಜೀವಿ ಸಂಘರ್ಷ’ ಎಂಬ ನುಡಿಗಟ್ಟು ತಪ್ಪು ಹೆಸರಿನ ಪ್ರಯೋಗ ಎಂದು ಅಧ್ಯಯನಗಳು ಸೂಚಿಸಿವೆ, ಏಕೆಂದರೆ ಸಮಾಜದಲ್ಲಿರುವ ಕೆಲವು ಅತ್ಯಂತ ಮುಖ್ಯವಾದ ಸಮಸ್ಯೆಗಳ ಮೇಲೆ ಇದು ಪರದೆ ಎಳೆಯುತ್ತದೆ. ಭಾರತದ ರಾಜ್ಯಗಳಲ್ಲಿ ಅಭಯಾರಣ್ಯಗಳ ನಿರ್ವಹಣೆ ಮತ್ತು ಅಡಗಿರುವ ಆರ್ಥಿಕ ಶಕ್ತಿಗಳನ್ನು ವರದಿಗಳು ಹೇಗೆ ಅಲಕ್ಷ್ಯ ಮಾಡುತ್ತವೆ ಎಂದು ಇತ್ತೀಚಿಗೆ ಪ್ರಕಟವಾದ ಯೂನಿವರ್ಸಿಟಿ ಆಫ್ ಶೆಫ್ಫೀಲ್ಡ್ -ನ ಡಾ।। ಜೇರೆಡ್ ಮಾರ್ಗ್ಯುಲೀಸ್ ಮತ್ತು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್-ನ ಡಾ।। ಕೃತಿ ಕೆ. ಕಾರಂತ ಅವರ ಅಧ್ಯಯನವೊಂದು ತೋರಿಸಿಕೊಟ್ಟಿದೆ. ಮಾನವ-ನಿಸರ್ಗ ಅನುಭವಗಳನ್ನು ರೂಪಿಸುವ ಸಾಮಾಜಿಕ ಮತ್ತು ರಾಜಕೀಯ ಅಂಶಗಳ ಮೇಲೆ ಕೇಂದ್ರೀಕೃತವಾದ ರಾಜಕೀಯ ಪರಿಸರ ವಿಜ್ಞಾನದ ಚೌಕಟ್ಟನ್ನು ಲೇಖಕರು ಬಳಸಿದ್ದಾರೆ. ಹುಲಿ ಮತ್ತು ಆನೆಗಳ ಸಂಖ್ಯೆ ಹೋಲಿಕೆಯ ದೃಷ್ಟಿಯಿಂದ ಹೆಚ್ಚಾಗಿ ಇರುವ ಕರ್ನಾಟಕದ ಬಂಡೀಪುರ ಅಭಯಾರಣ್ಯದ ಸುತ್ತ ಇರುವ ಹಳ್ಳಿಗಳಲ್ಲಿ ಕಾಡುಪ್ರಾಣಿಗಳ ಬಗ್ಗೆ ಇರುವ ಸಹಿಷ್ಣುತೆಯನ್ನು ಈ ಅಧ್ಯಯನ ಪರಿಶೀಲಿಸಿದೆ.

ಅನೌಪಚಾರಿಕ ಸಂದರ್ಶನಗಳು, ಹಳ್ಳಿಗಳ ಹಿರಿಯರ ಜೊತೆಗಿನ ಸಂಭಾಷಣೆಗಳು, ಜಾನುವಾರು ಮತ್ತು ಜನರ ಗಣತಿ, ಮತ್ತು ಪ್ರಾಣಿಜಾತಿಗಳ ನಿರ್ವಹಣಾ ಯೋಜನೆಗಳು, ಹೀಗೆ ವಿಜ್ಞಾನಿಗಳು ವಿಸ್ತಾರವಾದ ಮಾಹಿತಿ ಸಂಗ್ರಹ ಮಾಡಿದರು. ಸಂಘರ್ಷದ ಬಗ್ಗೆ ಅರಣ್ಯ ಇಲಾಖೆಯ ಗ್ರಹಿಕೆಗಳಿಗೂ ಮತ್ತು ಹಳ್ಳಿಯ ಜನರ ವಾಸ್ತವ ಅನುಭವಗಳಿಗೂ ವ್ಯತ್ಯಾಸವಿರುವುದನ್ನು ಅಧ್ಯಯನ ತೋರಿಸಿದೆ. ಹೆಚ್ಚುತ್ತಿರುವ ಅಭಿವೃದ್ಧಿ ಕೆಲಸಗಳು ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಸಹಿಷ್ಣುತೆ ಕಡಿಮೆಯಾಗಿರುವುದಕ್ಕೆ ಕಾರಣ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದರೆ, ಹಳ್ಳಿಗಳ ಜನ ನಿರ್ವಹಣಾ ಕಾರ್ಯಭಾರದ ಬಗ್ಗೆ ಹತಾಶೆ ವ್ಯಕ್ತಪಡಿಸಿದರು.

ಇಂತಹ ಹತಾಶೆಗಳ ಹಿಂದಿನ ಕಥೆಗಳು ಸಂಕೀರ್ಣವಾದವು. ಆರ್ಥಿಕ ಹಿನ್ನೆಲೆಯಲ್ಲಿ, ಹಿಂದೆ ಜಾನುವಾರುಗಳ ಸಗಣಿಯನ್ನು ರಾಸಾಯನಿಕ ಗೊಬ್ಬರವಾಗಿ ಮಾರಾಟವಾಗುತ್ತಿದ್ದ ಪ್ರದೇಶಗಳಲ್ಲಿ ಈಗ ಜಾನುವಾರು ಪಾಲನೆ ಮಾಡುವ ರೈತರು ಮೇಲೆ ಕಾಫಿ ಉದ್ಯಮ ನೇರ ಪರಿಣಾಮ ಬೀರುತ್ತಿದೆ. ೧೯೯೦ರ ದಶಕದಲ್ಲಿ ಸಗಣಿ ಗೊಬ್ಬರಕ್ಕೆ ಬೇಡಿಕೆ ಕಡಿಮೆಯಾಗಿ ಕಾಫಿ ಬೆಲೆ ಬಹಳವಾಗಿ ಏರಿದಾಗ ರೈತರು ತಮ್ಮ ಜಾನುವಾರುಗಳನ್ನು ಮೇಯುವುದಕ್ಕಾಗಿ ಅಭಯಾರಣ್ಯಗಳ ಒಳಗೆ ಕರೆದೊಯ್ಯುತ್ತಿದ್ದರು. ಇದರಿಂದ ಕೆಲವರು ಜಾನುವಾರು ನಷ್ಟ ಅನುಭವಿಸಿದರು ನಿಜ, ಆದರೆ ಆ ಪರಿಸ್ಥಿತಿಯಲ್ಲಿ ರೈತರ ಈ ನಿರ್ಧಾರ ನಿರೀಕ್ಷಿಸಿದ್ದೇ ಆಗಿತ್ತು. ಇಂದು, ಕಾಫಿ ಬೆಲೆ ಏರದೇ ಹೆಚ್ಚುಕಡಿಮೆ ಇದ್ದಷ್ಟೇ ಇದೆ, ಮತ್ತು ಕೆಲಸಗಾರರ ಕೆಲಸಕ್ಕೆ ಬೆಲೆ ಏರಿದೆ. ಇದರಿಂದ ಕಡೆಗೆ ಸಗಣಿ ಗೊಬ್ಬರದ ಮಾರುಕಟ್ಟೆ ಉಳಿಯಬಲ್ಲ ಸಂಭವವೇ ಇಲ್ಲದಾಯಿತು. ಅರಣ್ಯಾಧಿಕಾರಿಗಳ ಶಿಸ್ತಿನ ಕ್ರಮಗಳೂ ಇದಕ್ಕೆ ಸೇರಿದ್ದರಿಂದ, ರೈತರು ಸಗಣಿ ಗೊಬ್ಬರವನ್ನು ಬಿಟ್ಟು ಹೆಚ್ಚು ಹಾಲು ಉತ್ಪಾದನೆ ಮಾಡುವ ಆದರೆ ದುಬಾರಿಯಾದ ಯೂರೋಪಿಯನ್ ಜಾನುವಾರು ತಳಿಗಳ ಕಡೆ ಮುಖ ಮಾಡುತ್ತಿದ್ದಾರೆ.

ಈ ಆರ್ಥಿಕ ಬದಲಾವಣೆಯ ಫಲಿತಾಂಶವೇನು? ಬೇಟೆಪ್ರಾಣಿಗಳು ಈಗ ಹಳ್ಳಿಗಳ ಒಳಗೇ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ, ಮತ್ತು ಇದಕ್ಕೆ ತಕ್ಕಂತೆ ಜನರಲ್ಲಿ ಸಹಿಷ್ಣುತೆಯೂ ಕಡಿಮೆಯಾಗುತ್ತಿದೆ. ಒಂದು ಸಾಮಾಜಿಕ ಒಪ್ಪಂದದ ಉಲ್ಲಂಘನೆಯಾಗಿರುವಂತೆ, ಈ ರೀತಿಯ ವನ್ಯಜೀವಿಗಳ ಜೊತೆಗಿನ ಸೆಣಸಾಟ ಅವುಗಳ ಬಗ್ಗೆ ಮುಂಚೆಯಿದ್ದ ಮನಸ್ಥಿತಿಯನ್ನು ಬದಲಾಯಿಸಿದೆ. ಅಧ್ಯಯನದ ಲೇಖಕರು ಸರಿಯಾಗಿ ವರ್ಣಿಸಿರುವಂತೆ, “ಮಾನವ-ವನ್ಯಜೀವಿ ಮುಖಾಮುಖಿಯಾಗುವ ಕ್ಷೇತ್ರ ಬದಲಾಗಿದೆ.”

ಎಲ್ಲಕ್ಕಿಂತ ಮುಖ್ಯವಾಗಿ ಈ ಅಧ್ಯಯನ ಒತ್ತಿ ಹೇಳುತ್ತಿರುವ ಅಂಶವೆಂದರೆ ನಾವು ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ನಮ್ಮ ಗ್ರಹಿಕೆಗಳನ್ನು ಬದಲಾಯಿಸಿಕೊಳ್ಳುವ ತುರ್ತು ಅಗತ್ಯ. ವ್ಯಾಪಕವಾಗಿ ನಂಬಲಾಗಿರುವ ಕಾಡುಪ್ರಾಣಿಗಳ ಬಗ್ಗೆ ಅಸಹಿಷ್ಣುತೆಯ ಹಿಂದಿನ  ಕಾರಣಗಳು, ಆರ್ಥಿಕ ಸಂಕಟಗಳ ನಿಜವಾದ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರಿಂದ ನಮ್ಮನ್ನು ವಿಚಲಿತರಾಗುವಂತೆ ಮಾಡಬಹುದು, ಹೀಗಾಗಿ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ.

ರಾಜಕೀಯ ಪರಿಸರ ವಿಜ್ಞಾನದ ಒಟ್ಟಾರೆ ಚೌಕಟ್ಟು ಮಾನವ-ವನ್ಯಜೀವಿ ಸಂಘರ್ಷವನ್ನು ಭೂಪ್ರದೇಶ ವ್ಯಾಪ್ತಿ, ರಾಜಕೀಯ ಮತ್ತು ಆರ್ಥಿಕ ಶಕ್ತಿಗಳ ಹಿನ್ನೆಲೆಯಲ್ಲಿ ಹೊಂದಿಸಿ ನೋಡಿದೆ. ಈ ಅರಿವಿನ ಆಧಾರದ ಮೇಲೆ, ಅಭಯಾರಣ್ಯಗಳ ನಿರ್ವಹಣೆಗೆ ಹೆಚ್ಚು ಬಂಡವಾಳ ಹೂಡುವುದಕ್ಕಿಂತ ಜಾನುವಾರು ಮೂಲಭೂತ ಸೌಕರ್ಯದ ಮೇಲೆ ಹೂಡಬೇಕು ಎಂದು ವಿಜ್ಞಾನಿಗಳು ಸಲಹೆ ನೀಡುತ್ತಾರೆ. ರಾಜಕೀಯ ಪರಿಸರ ವಿಜ್ಞಾನ ಸಂರಕ್ಷಣಾ ನಿರ್ವಹಣೆಗೂ ಕೊಡುಗೆ ನೀಡಿ, ನ್ಯಾಯ ಒದಗಿಸುವುದರ ಮೇಲೆ ವಿಸ್ತಾರವಾದ ದೃಷ್ಟಿಯನ್ನು ಹೊಂದಲು ಪ್ರೇರೇಪಿಸುತ್ತದೆ ಎಂದೂ ಅವರು ನಂಬುತ್ತಾರೆ. ಸಂರಕ್ಷಣೆಯನ್ನು ಹೇಗೆ ಅರ್ಥೈಸಿಕೊಂಡು ಅದರ ಬಗ್ಗೆ ಕೆಲಸಗಳ ನಿರ್ವಹಣೆಯಾಗುತ್ತಿದೆ ಎಂಬ ನಮ್ಮ ಗ್ರಹಿಕೆಯನ್ನು ಮತ್ತಷ್ಟು ಉತ್ತಮಗೊಳಿಸುವುದಕ್ಕಾಗಿ ಭಾರತದ ರಾಷ್ಟ್ರೀಯ ಹಾಗೂ ರಾಜ್ಯಗಳ ರಾಜಕೀಯ ವ್ಯವಸ್ಥೆಗಳ ಮೇಲೆ ಮತ್ತಷ್ಟು ಕೂಲಂಕಷವಾಗಿ ಅಧ್ಯಯನ ಮಾಡಬೇಕೆಂದೂ ಸೂಚಿಸಲಾಗಿದೆ.

ಮೂಲ ಸಂಶೋಧನಾ ವರದಿದ ಪ್ರೊಡಕ್ಷನ್ ಆಫ್ ಹ್ಯೂಮನ್-ವೈಲ್ಡ್ ಲೈಫ್ ಕಾನ್ಫ್ಲಿಕ್ಟ್ : ಅ ಪೊಲಿಟಿಕಲ್ ಅನಿಮಲ್ ಜಿಯಾಗ್ರಫಿ ಆಫ್ ಏನ್ಕೌಂಟರ್
– ಜೇರೆಡ್ ಡಿ. ಮಾರ್ಗ್ಯುಲೀಸ್, ಕೃತಿ ಕೆ. ಕಾರಂತ – ಜಿಯೋಫೋರಮ್, ೨೦೧೮

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.