ಮಾನವ-ವನ್ಯಜೀವಿ ಸಂಘರ್ಷದ ಮೇಲ್ವಿಚಾರಣೆ ಮತ್ತು ನಿರ್ವಹಣೆ – ವೈಲ್ಡ್ ಸೇವೆ

ಲೇಖಕರು: ಡಾ।। ಕೃತಿ ಕೆ. ಕಾರಂತ ಮತ್ತು ಅನುಭವ ವನಮಮಾಲೈ
ಅನುವಾದ: ಸೌರಭಾ ರಾವ್

ಈ ಲೇಖನ ಭಾರತದಲ್ಲಿ ಮಾನವ-ವನ್ಯಜೀವಿ ಹೊಂದಾಣಿಕೆ ಎಂಬ ಸರಣಿಯಲ್ಲಿ ಎರಡನೆಯದು.

ಕೃಷಿ ಹಾಗೂ ಕೈಗಾರಿಕಾ ಅಗತ್ಯಗಳಿಗಾಗಿ ದೊಡ್ಡ ಪ್ರಮಾಣದ ಭೂಪ್ರದೇಶ ಪರಿವರ್ತನೆ ಗ್ರಾಮೀಣ ಸಮುದಾಯಗಳನ್ನು ವನ್ಯಜೀವಿಗಳ ಜೊತೆ ನೇರ ಸಂಪರ್ಕಕ್ಕೆ ಬರುವಂತೆ ಮಾಡಿದೆ. ಅದರಲ್ಲೂ, ವಿಭಜಿತ ಅರಣ್ಯ ಪ್ರದೇಶಗಳ ಸುತ್ತಲಿನ ಗ್ರಾಮೀಣ ಸಮುದಾಯಗಳಲ್ಲಿ ಮಾನವ-ವನ್ಯಜೀವಿ ಸಂಪರ್ಕಗಳು ನಿತ್ಯದ ಘಟನೆಗಳು. ಬಹಳಷ್ಟು ಕಾಡುಪ್ರಾಣಿಗಳು ಸಂರಕ್ಷಿತ ಪ್ರದೇಶಗಳ ಹೊರಗಿನ ಪ್ರದೇಶಗಳನ್ನೂ ಬಳಸುತ್ತವೆ, ಮತ್ತು ಅವುಗಳ ಉಳಿವಿಗಾಗಿ ವಿಸ್ತಾರವಾದ ಭೂಪ್ರದೇಶಗಳಲ್ಲಿ ಸರಾಗ ಸಂಚಾರ ಅಗತ್ಯ. ಮಾನವ-ವನ್ಯಜೀವಿ ಸಂಪರ್ಕಗಳಿಂದ ಅನೇಕ ಮಹತ್ವದ ಪ್ರಭಾವಗಳಾಗುತ್ತವೆ – ವನ್ಯಜೀವಿ ಪ್ರವಾಸೋದ್ಯಮ, ವನ್ಯಜೀವಿ ಶಿಕ್ಷಣ, ಮತ್ತು ಇದರಿಂದ ಪರಿಸರ ವ್ಯವಸ್ಥೆಯ ಸೌಕರ್ಯಗಳನ್ನು ಒದಗಿಸುತ್ತದೆ. ಇದರ ಜೊತೆಗೇ, ನಕಾರಾತ್ಮಕ ಸಂಪರ್ಕಗಳಿಂದ, ಜನರ ಜೀವನೋಪಾಯದ ನಷ್ಟ, ಆಸ್ತಿ ಹಾನಿ, ಒಮ್ಮೊಮ್ಮೆ ಮನುಷ್ಯರ ಮೇಲೆ ದಾಳಿ ಮತ್ತು ಸಾವು ಸಂಭವಿಸುತ್ತವೆ, ಅಥವಾ ಇವೆಲ್ಲದರಿಂದ ವನ್ಯಜೀವಿಗಳಿಗೆ ಹಾನಿಯಾಗುವುದನ್ನೂ ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳೆನ್ನಬಹುದು. ಭಾರತದಾದ್ಯಂತ ರಾಜ್ಯಗಳು ಈ ಸಂಘರ್ಷದ ಘಟನೆಗಳ ಮೇಲ್ವಿಚಾರಣೆ ನಡೆಸಲು ಕಾರ್ಯನೀತಿಗಳನ್ನು ರೂಪಿಸಿವೆ, ಇದರಲ್ಲಿ ಬಹು ವ್ಯಾಪಕವಾದದ್ದು ನಷ್ಟವಾದವರಿಗೆ ಪರಿಹಾರಧನವಾಗಿ ಆರ್ಥಿಕ ನೆರವು ನೀಡುವುದು.

ನಮ್ಮ ಹಿಂದಿನ ಸಂಶೋಧನೆಗಳು, ಭಾರತ ಪ್ರತಿ ವರ್ಷ ೮೦,೦೦೦ ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳನ್ನು ದಾಖಲು ಮಾಡುತ್ತದೆಯೆಂದು ತೋರಿಸಿಕೊಟ್ಟಿದೆ. ಇದರಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡುವ ರಾಜ್ಯ ಕರ್ನಾಟಕವಾಗಿದ್ದು, ಪರಿಹಾರಧನದ ಒದಗಿಸುವ ಮೊತ್ತದಲ್ಲೂ ಅಗ್ರ ಸ್ಥಾನ ಪಡೆದಿದೆ. ಆದರೆ, ಅಸಮರ್ಪಕ ಕಾರ್ಯನೀತಿಗಳು ಮತ್ತು ಕಾರ್ಯರೂಪದಲ್ಲಿರುವ ತೊಂದರೆಗಳಿಂದಾಗಿ ಗ್ರಾಮೀಣ ಸಮುದಾಯಗಳಲ್ಲಿ ಪದೇಪದೇ ಅಸಮಾಧಾನ ಉಂಟಾಗುತ್ತದೆ. ವಿದ್ಯುನ್ಮರಣ, ವಿಷದಿಂದ ಪ್ರಾಣಿಗಳ ಮರಣ, ಹುಲಿ, ಚಿರತೆ, ಮತ್ತು ಆನೆಗಳಂತಹ ಸಂಘರ್ಷಕ್ಕೆ ಆಗಾಗ ತುತ್ತಾಗುವ ಪ್ರಾಣಿಗಳ ಮೇಲೆ ಹಿಂಸೆ, ಹೀಗೆ ಈ ಅಸಹನೆಯಿಂದ ಉಂಟಾಗುವ ಘಟನೆಗಳಿಗೇ ಮಾಧ್ಯಮಗಳು ಹೆಚ್ಚಾಗಿ ಒಟ್ಟು ನೀಡುತ್ತವೆ. ನಷ್ಟ ಅನುಭವಿಸುವ ಜನರಿಂದ ಪ್ರತೀಕಾರದ ಘಟನೆಗಳನ್ನು ಕಡಿಮೆ ಮಾಡಲು ಅದನ್ನು ಭರಿಸಲು ಬೇಕಾದ ಆರ್ಥಿಕ ಸಹಾಯ ಸುಲಭವಾಗಿ ಮತ್ತು ವಿಳಂಬ ಮಾಡದೇ ದೊರೆಯುವಂತೆ ಮಾಡಬೇಕು. ವ್ಯಾವಹಾರಿಕ ಖರ್ಚು, ಅಧಿಕಾರಶಾಹಿ ಪ್ರಕ್ರಿಯೆಗಳ ಸಂಕೀರ್ಣತೆ ಮತ್ತು ವ್ಯವಸ್ಥೆಯ ಸವಾಲುಗಳನ್ನು ಹೋಗಲಾಡಿಸಿ, ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವ ಗುರಿಯತ್ತ ಮತ್ತು ಅಪಾಯಕ್ಕೆ ಸುಲಭವಾಗಿ ತುತ್ತಾಗುವವರಿಗೆ ಸರ್ಕಾರದಿಂದ ಬೆಂಬಲ ಸಿಗುವ ಕಾರ್ಯಯೋಜನೆಗಳಿಂದ ಸಮುದಾಯಗಳಲ್ಲಿ ಹೆಚ್ಚಿದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬಹುದು.

ಅಂತರರಾಷ್ಟ್ರೀಯ ನಿಯತಕಾಲಿಕೆಯಾದ ‘ಫ್ರಾಂಟಿಯರ್ಸ್ ಇನ್ ಈಕಾಲಜಿ ಅಂಡ್ ಎವಲ್ಯೂಷನ್’ನಲ್ಲಿ ಪ್ರಕಟವಾಗಿರುವ CWSನ ಇತ್ತೀಚಿನ ಅಧ್ಯಯನ, ಜುಲೈ ೨೦೧೫ರಿಂದ ಜೂನ್ ೨೦೧೯ರ ನಡುವೆ ವೈಲ್ಡ್  ಸೇವೆ ಯೋಜನೆಯ ಕಾರ್ಯರೂಪ, ವಿನ್ಯಾಸ, ಮತ್ತು ಪ್ರಭಾವಗಳನ್ನು ವಿವರಿಸಿದೆ. ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳ ಸುತ್ತ ೧೩,೦೦ಕ್ಕೂ ಹೆಚ್ಚು ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳನ್ನು ಯೋಜನೆ ದಾಖಲಿಸಲು ಸಹಾಯ ಮಾಡಿತು, ಮತ್ತು ಇದರಲ್ಲೂ ಸುಮಾರು ಶೇ. ೯೪%ರಷ್ಟು ಪ್ರಕರಣಗಳು ಆನೆಗಳಿಗೆ ಸಂಬಂಧಿಸಿದವಾಗಿದ್ದವು. ಅಷ್ಟು ಪ್ರಕರಣಗಳಲ್ಲಿ ೧೨,೯೭೮ ಬೆಳೆ ಹಾನಿಯದ್ದಾಗಿದ್ದು, ೭೮೨ ಜಾನುವಾರು ನಷ್ಟಕ್ಕೆ ಸಂಬಂಧಿಸಿವೆ, ಮತ್ತು ೪೮ ಪ್ರಕರಣಗಳು ಮನುಷ್ಯರ ಮೇಲಿನ ದಾಳಿ ಮತ್ತು ಸಾವಿಗೆ ಸಂಬಂಧಿಸಿದೆ.

ಸರಳದ ಸಾರ್ವಜನಿಕ ಪ್ರಚಾರದ ಮೂಲಕ ವೈಲ್ಡ್  ಸೇವೆ ಟೋಲ್-ಫ್ರೀ ಸಹಾಯವಾಣಿಯನ್ನು ಸುಮಾರು ೨೧೦೦ ಚದುರ ಕಿಲೋಮೀಟರ್ ವ್ಯಾಪ್ತಿಪ್ರದೇಶದ ೬೦೦ ಹಳ್ಳಿಗಳಿಗೆ ತಲುಪಿಸಲಾಯಿತು. ಶೇ. ೫೧%ರಷ್ಟು ಕಡಿಮೆ ಸಾಕ್ಷರತೆ ಇರುವ ಈ ಪ್ರದೇಶದಲ್ಲಿ, ಸಂವಹನ ಮತ್ತು ತಂತ್ರಜ್ಞಾನವನ್ನು ಎಲ್ಲರೂ ಬಳಸಲು ಹೇಗೆ ಸಾಧ್ಯ ಎಂದು ತೋರಿಸುವುದಕ್ಕೆ ಜನರು ಸಕ್ರಿಯವಾಗಿ ಪಾಲ್ಗೊಳ್ಳುವುದು ಬಹುಮುಖ್ಯವಾಗಿತ್ತು. ವೈಲ್ಡ್  ಸೇವೆ ಸಿಬ್ಬಂದಿಯನ್ನಾಗಿ ಸ್ಥಳೀಯ ಸಮುದಾಯಗಳಿಂದಲೇ ಆಯ್ಕೆಮಾಡಿ ಅವರನ್ನು ದೀರ್ಘಾವಧಿಗೆ ಉತ್ತಮ ಗುಣಮಟ್ಟದ ಮಾಹಿತಿ ಕಲೆಹಾಕಲು ಮತ್ತು ಸಾಮರ್ಥ್ಯ ಬೆಳೆಸಲು ತರಬೇತಿ ನೀಡಲಾಯಿತು. ಘಟನೆಗಳ ದಾಖಲೆಯನ್ನು ವೈಲ್ಡ್  ಸೇವೆ ಮಾಡಿದರೆ, ಪರಿಹಾರಧನದ ಪರಿಷ್ಕರಣೆ ಮತ್ತು ಬಟವಾಡೆಯನ್ನು ಕರ್ನಾಟಕ ಅರಣ್ಯ ಇಲಾಖೆ ನಿಯಂತ್ರಿಸುತ್ತಿತ್ತು. ಸರ್ಕಾರದ ಕಾರ್ಯಭಾರವಾದ್ದರಿಂದ ಯೋಜನೆಗೆ ಪ್ರತಿಯೊಂದು ಪರಿಹಾರಧನ ಪ್ರಕರಣದ ಬೆಳವಣಿಗೆಯನ್ನು ಸಮರ್ಥವಾಗಿ ಗುರುತಿಸಲಾಗುತ್ತಿರಲಿಲ್ಲ. ಹೀಗಿದ್ದರೂ, ಕನಿಷ್ಠ ೩,೮೧೯ ಪ್ರಕರಣಗಳಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಪರಿಹಾರಧನ ದೊರೆಯಿತೆಂದು ಯೋಜನೆ ದಾಖಲು ಮಾಡಿತು. ಹೀಗೆ ವೈಲ್ಡ್  ಸೇವೆಯ ದೀರ್ಘಾವಧಿಯ ಮತ್ತು ಪ್ರಚಲಿತ ನಡೆಯುತ್ತಿರುವ ಮಾಹಿತಿ ಸಂಗ್ರಹ ಮಾನವ-ವನ್ಯಜೀವಿ ಸಂಘರ್ಷವನ್ನು ಎದುರಿಸುವ ತೀರಾ ದುರ್ಬಲವಾದ ಕುಟುಂಬಗಳನ್ನು ಮತ್ತು ಹಳ್ಳಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಯಿತು. ಇದರಿಂದ ಯೋಜನೆ, ಜಾನುವಾರುಗಳನ್ನು ಪದೇ ಪದೇ ಬೇಟೆಪ್ರಾಣಿಗಳಿಗೆ ಬಲಿಯಾಗುವ ಸಂಭವದಿಂದ ಸುರಕ್ಷಿತವಾಗಿಟ್ಟುಕೊಳ್ಳಬಹುದಾದ ೪೮ ಕೊಟ್ಟಿಗೆಗಳನ್ನು ಕಟ್ಟಿಕೊಡಲು ಸಹಾಯ ಮಾಡಿತು.

ಸರ್ಕಾರದ ಕಾರ್ಯಯೋಜನೆಗಳು ಮತ್ತು ಜನರ ನಡುವೆ ಇದ್ದ ಅಂತರವನ್ನು ಕಡಿಮೆ ಮಾಡಲು ವೈಲ್ಡ್  ಸೇವೆ ಸಫಲವಾಗಿದೆ ಎಂದು ಲೇಖಕರು ಹೇಳುತ್ತಾರೆ. ಆದರೂ, ದೇಶದಲ್ಲಿ ಮಾನವ ಸಮುದಾಯಗಳು ಹಾಗೂ ವನ್ಯಜೀವಿಗಳು ದೀರ್ಘಾವಧಿಯಲ್ಲಿ ಸಹಬಾಳ್ವೆ ನಡೆಸಲು ಬೇರೆ ಬೇರೆ ಅಂಶಗಳನ್ನು ಸಮರ್ಥವಾಗಿ ಪರಿಗಣಿಸಬೇಕಿದೆ ಎಂದೂ ತಿಳಿಸುತ್ತಾರೆ. ಮುಕ್ತವಾಗಿ ಎಲ್ಲರಿಗೂ ಲಭ್ಯವಿರುವ (ಓಪನ್ ಸೋರ್ಸ್) ತಂತ್ರಜ್ಞಾನ ಮತ್ತು ಮೊಬೈಲ್ ಮಾಹಿತಿ ಸಂಗ್ರಹದ ಬಳಕೆ ಪ್ರಕ್ರಿಯೆಯನ್ನು ಅಗ್ಗವಾಗಿಯೂ, ಪಾರದರ್ಶಕವಾಗಿಯೂ ಮಾತು ಎಲ್ಲರಿಗೂ ದಕ್ಕುವಂತೆಯೂ ಮಾಡಿದೆ ಎಂದು ವರದಿಯಲ್ಲಿ ಹೇಳಿದ್ದಾರೆ. ವೈಲ್ಡ್  ಸೇವೆಯ ಮಾದರಿಯನ್ನು ಒಂದು ಸಂರಕ್ಷಣಾ ಮಧ್ಯವರ್ತಿಯಾಗಿ ವಿಸ್ತಾರವಾದ ಸಂದರ್ಭಗಳಿಗೆ, ಮತ್ತು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಜಗತ್ತಿನ ಬೇರೆ ಬೇರೆ ಸ್ಥಳಗಳಿಗೂ ಅಳವಡಿಸಿಕೊಳ್ಳಬಹುದು ಎಂದು ಲೇಖಕರು ನಂಬಿದ್ದಾರೆ. ಇದರ ಜೊತೆಗೇ, ಸದ್ಯಕ್ಕೆ ಜಾರಿಯಿರುವ ಕಾರ್ಯನೀತಿಯಲ್ಲಿನ ಲೋಪದೋಷಗಳನ್ನು ಗುರುತಿಸಿ ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಕಾಯ್ದೆಯನ್ನು ಮತ್ತಷ್ಟು ಸಮರ್ಥಗೊಳಿಸಲು, ವ್ಯಾಪಕಗೊಳಿಸಲು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸಂಸ್ಥೆಯ ಸಹಭಾಗಿತ್ವದಲ್ಲಿ ವೈಲ್ಡ್  ಸೇವೆ ಪ್ರಯತ್ನಿಸುತ್ತಿದೆ.

ಮೂಲ ಸಂಶೋಧನಾ ವರದಿ: ವೈಲ್ಡ್  ಸೇವೆ: ಅ ನಾವೆಲ್ ಕಾನ್ಸರ್ವೇಷನ್ ಇಂಟೆರ್ವೆನ್ಶನ್ ಟು ಮಾನಿಟರ್ ಅಂಡ್ ಅಡ್ರೆಸ್ ಹ್ಯೂಮನ್-ವೈಲ್ಡ್ ಲೈಫ್ ಕಾನ್ಫ್ಲಿಕ್ಟ್  – ಕೃತಿ ಕೆ. ಕಾರಂತ ಮತ್ತು ಅನುಭವ ವನಮಮಾಲೈ, ಫ್ರಾಂಟಿಯರ್ಸ್ ಇನ್ ಈಕಾಲಜಿ ಅಂಡ್ ಎವಲ್ಯೂಷನ್ (Article 198, Volume 8 – June 2020; doi: 10.3389/fevo.2020.00198)

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು. 

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.