ಮಾಧ್ಯಮಗಳಲ್ಲಿ ಚಿರತೆ ಎಂಬ ನಮ್ಮ ಬ್ಲಾಗ್ ಸರಣಿಯಲ್ಲಿ ಇದು ಎರಡನೆಯ ಸಂಶೋಧನಾ ವರದಿ.

ಲೇಖಕರು: ವಿನ್ನಿ ಜೈನ್, ಸಲೋನಿ ಭಾಟಿಯಾ, ಮತ್ತು ಡಾ. ಕೃತಿ ಕೆ. ಕಾರಂತ್

ಅನುವಾದ: ಸೌರಭಾ ರಾವ್

ಚಿರತೆ ವಿರಳವಾಗಿ ಕಾಣಸಿಗುವ, ಸ್ಥಿತಿಸ್ಥಾಪಕತ್ವವುಳ್ಳ, ಭವ್ಯ ಪ್ರಾಣಿ. ಚಿರತೆ ಎಂದೊಡನೆಯೇ ದಟ್ಟ ಅರಣ್ಯಗಳು, ವನ್ಯಜೀವಿ ಅಭಯಾರಣ್ಯಗಳು, ಮತ್ತು ಅಲ್ಲಿ ಚಿರತೆಯಂಥ ಮಾಂಸಾಹಾರಿ ಪ್ರಾಣಿಗಳನ್ನು ನೋಡಲು ಉಸಿರು ಬಿಗಿಹಿಡಿದು ಕಾಯುವ ಸಫಾರಿ-ಪ್ರವಾಸಿಗರ ಚಿತ್ರ ಕಣ್ಮುಂದೆ ಬರುತ್ತದೆ. ಒಂದು ಗಮನಾರ್ಹ ಅಂಶವೆಂದರೆ, ಚಿರತೆ ಮತ್ತು ಬೇಟೆಯಾಡುವ ಪ್ರಾಣಿಗಳಾದ ಹುಲಿ, ತೋಳ, ಕರಡಿ, ಮತ್ತಿತರ ಜೀವಿಗಳು ಆಗಾಗ ಮನುಷ್ಯರ ನಡುವೆಯೂ ಜೀವಿಸುವುದು, ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಸಿರುವ ಸಂಶೋಧನೆಗಳಿಂದ ತಿಳಿದುಬಂದಿದೆ. ಕಾಡುಪ್ರಾಣಿಗಳು ಮತ್ತು ಮನುಷ್ಯರ ನಡುವೆ ನಾವು ಸಾಮಾನ್ಯವಾಗಿ ಭೌಗೋಳಿಕ ಪ್ರತ್ಯೇಕತೆ ಕಲ್ಪಿಸಿಕೊಳ್ಳುತ್ತೇವೆ. ಆದರೆ ಇದು ನಿಜವೇ?

 

ಡಾ. ವಿದ್ಯಾ ಆತ್ರೇಯ ಅವರ ನೇತೃತ್ವದಲ್ಲಿ ‘ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್’ನ ಇತರ ಸಂಶೋಧಕರು, ಕರ್ನಾಟಕ ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ಎಲ್ಲೆಲ್ಲಿ ಹೇಗೆ ಕಂಡುಬಂದಿದೆ ಎಂದು ಒಂದು ವಿಶಿಷ್ಟ ಆಧಾರದ ಮೇಲೆ ಅಧ್ಯಯನ ನಡೆಸಿದ್ದಾರೆ – ಅದೆಂದರೆ, ಮಾಧ್ಯಮ ವರದಿಗಳು.

 

ಆತ್ರೇಯ ಮತ್ತು ಅವರ ತಂಡ, ಚಿರತೆಗೆ ಸಂಬಂಧಪಟ್ಟ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಿಕೆಗಳ ವರದಿಗಳನ್ನು ಸಂಗ್ರಹಿಸಿ, ಅದರ ಆಧಾರದ ಮೇಲೆ ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಅವು ಕಂಡುಬರುತ್ತದೆಂದು ಗುರುತಿಸಿದ್ದಾರೆ. ಆದರೆ ಪತ್ರಿಕೆಗಳು, ಚಿರತೆ ಕಂಡ ಕೆಲವು ಮುಖ್ಯ ಘಟನೆಗಳನ್ನು ವರದಿ ಮಾಡುವ ವಸ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ತಂಡ ಇಂತಹ ಅಪೂರ್ಣ ಮಾಹಿತಿಗೆ ತಕ್ಕ ವಿಶ್ಲೇಷಣಾತ್ಮಕ ವಿಧಾನವನ್ನೇ ಬಳಸಿದೆ. ಚಿರತೆ ಕಾಣಿಸಿದ ವರದಿಗಳು, ಚಿರತೆ ದಾಳಿ ವರದಿಗಳು ಮತ್ತು ಚಿರತೆಗಳ ಕಳ್ಳಬೇಟೆಯಂಥ ಘಟನೆಗಳ ವರದಿಗಳ ಆಧಾರದ ಮೇಲೆ, ರಾಜ್ಯದಲ್ಲಿ ಚಿರತೆಗಳಿರುವ ವಿವಿಧ ಜಾಗಗಳನ್ನು ಗುರುತಿಸಿದ್ದಾರೆ.

 

ಈ ಅಧ್ಯಯನದಿಂದ ಕಂಡುಬಂದಿರುವ ಆಶ್ಚರ್ಯಕರ ಸಂಗತಿಯೆಂದರೆ, ವನ್ಯಜೀವಿ ಅಭಯಾರಣ್ಯಗಳ ಹೊರಗೇ ರಾಜ್ಯದ ಸುಮಾರು ಅರ್ಧದಷ್ಟು  (೪೭%ರಷ್ಟು) ಭೂಪ್ರದೇಶದಲ್ಲಿ ಚಿರತೆಗಳು ವಾಸವಾಗಿರುವುದು. ಇದು, ಚಿರತೆಗಳು ತಮ್ಮ ‘ಆವಾಸಸ್ಥಾನ’ವಾದ ಕಾಡಿನಿಂದ ‘ದಾರಿತಪ್ಪಿ ಹೊರಬರುತ್ತವೆ’ ಎಂಬ ಜನಪ್ರಿಯ ನಂಬಿಕೆಯನ್ನು ಅಲ್ಲಗೆಳೆಯುತ್ತದೆ; ವಾಸ್ತವವಾಗಿ, ಅವು ಎಷ್ಟೋ ಜಾಗಗಳಲ್ಲಿ ಜನರ ವಾಸಸ್ಥಾನಗಳ ಜೊತೆಯೇ ಬದುಕುತ್ತಿವೆ.

ಹೀಗೆ ಚಿರತೆಗಳು ಮನುಷ್ಯರಿಗೆ ಸಮೀಪವಾದಾಗ ಕಠಿಣ ಪರಿಸ್ಥಿತಿಗಳು ಎದುರಾಗುತ್ತವೆ. ಇಂಥ ನೇರ ಸಂಪರ್ಕದಿಂದ ಅವು ಮನುಷ್ಯರು ಮತ್ತು ಮನುಷ್ಯರ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಬಹುದು, ಇಲ್ಲ ಸ್ವತಃ ಅವೇ ಮನುಷ್ಯರಿಂದ ಕಳ್ಳಬೇಟೆಗೆ, ರಸ್ತೆ ಅಪಘಾತಗಳಿಗೆ ಅಥವಾ ಪ್ರತೀಕಾರದ ವಧೆಗೆ ಒಳಗಾಗಬಹುದು. ಕುತೂಹಲಕಾರಿಯಾಗಿ, ಈ ಅಧ್ಯಯನದಿಂದ ತಿಳಿದ ಮತ್ತೊಂದು ಮುಖ್ಯ ಅಂಶವೆಂದರೆ, ರಾಜ್ಯದಲ್ಲಿ ಚಿರತೆ ಮತ್ತು ಮನುಷ್ಯರು ಎದುರಾದ ಸಂದರ್ಭಗಳಿದ್ದರೂ, ಸಂಘರ್ಷದ ಉದಾಹರಣೆಗಳು ಹೋಲಿಕೆಯ ದೃಷ್ಟಿಯಿಂದ ಕಡಿಮೆಯಿರುವುದು.

 

ಚಿರತೆಗಳು ಮನುಷ್ಯರನ್ನು ಸಂಧಿಸುವ ಸಂದರ್ಭಗಳ ಬಗ್ಗೆ ಮಾಧ್ಯಮಗಳ ತನಿಖೆ ಮತ್ತು ಜನರ ಒತ್ತಡದ ಫಲವಾಗಿ, ಸಂಬಂಧಪಟ್ಟ ಇಲಾಖೆಯವರು ಆ ಪ್ರಾಣಿಯನ್ನು ಬಂಧಿಸಿ ಪುನರ್ವಸತಿ ಕಲ್ಪಿಸುತ್ತಾರೆ. ಆದರೆ, ಈ ಅಧ್ಯಯನದಿಂದ ತಿಳಿದುಬಂದಿರುವುದೇನೆಂದರೆ, ಪುನರ್ವಸತಿಗಾಗಿ ಚಿರತೆಗಳ ಬಂಧನದ ಸಂಖ್ಯೆಯ ಶೇಕಡಾ ೪೦ರಷ್ಟು ಸಲ ಯಾವುದೇ ಘರ್ಷಣೆ, ಹಾನಿಯಿಲ್ಲದಿದ್ದರೂ, ಮನುಷ್ಯರು ಅವುಗಳನ್ನು ಕೇವಲ ನೋಡಿರುವ ಕಾರಣದಿಂದಲೇ, ಅನಗತ್ಯವಾಗಿ ಆಗಿರುವುದು. ಈ ನಡುವೆ, ಯಾವ ಜಿಲ್ಲೆಗಳಿಂದ ಚಿರತೆಗಳನ್ನು ಒಯ್ದು ಮತ್ತೆಲ್ಲೋ ಮರುಸ್ಥಾಪಿಸಲಾಗಿತ್ತೋ, ಆ ಜಿಲ್ಲೆಗಳಲ್ಲಿ ಬೇರೆ ಚಿರತೆ ದಾಳಿಗಳ ಸಂಖ್ಯೆ ಕಡಿಮೆಯಾಗದಿರುವುದು. ಚಿರತೆಗಳನ್ನು ಬಂಧಿಸಿ ಬೇರೆಡೆ ಒಯ್ಯುತ್ತಿರುವುದೇ ಅವುಗಳನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಮಾಡಿ, ದಾಳಿಗಳ ಸಂಖ್ಯೆ ಹೆಚ್ಚುತ್ತಿರಬಹುದೆಂದು ಈ ಸಂಶೋಧಕರು ಒತ್ತಿ ಹೇಳಿದ್ದಾರೆ.

 

ಈ ಸಂಶೋಧನೆಯ ಬಹುತೇಕ ಎಲ್ಲ ಅಂಶಗಳು, ಮಾಂಸಾಹಾರಿ ಪ್ರಾಣಿಗಳ ನಿರ್ವಹಣೆಯನ್ನು ಮತ್ತಷ್ಟು ಸುಧಾರಿಸುವತ್ತ ಮತ್ತಷ್ಟು ಅರಿವು ಮೂಡಿಸಿವೆ. ಪ್ರಚಲಿತವಿರುವ ವನ್ಯಜೀವಿ ನಿರ್ವಹಣೆ ಪದ್ಧತಿಗಳು ಚಿರತೆಗಳು ಮಾನವ-ಪ್ರಬಲವಾಗಿರುವ ಪ್ರದೇಶಗಳಲ್ಲಿನ ಚಿರತೆ ಸಂಖ್ಯೆಯನ್ನು ಪರೋಗನಿಸಿಲ್ಲ. ಮನುಷ್ಯ ಮತ್ತು ಪ್ರಾಣಿಗಳು ಸಹಬಾಳ್ವೆ ನಡೆಸುವತ್ತ ಜನರನ್ನು ಪ್ರೇರೇಪಿಸುವುದಕ್ಕೆ ಜನರಲ್ಲಿ ಪ್ರಾಣಿಗಳ ಬಗ್ಗೆ ಸಹಿಷ್ಣುತೆ ಮೂಡಿಸುವ, ಪ್ರಾಣಿಗಳ ಆವಾಸಸ್ಥಾನ ಹೆಚ್ಚಿಸುವ, ಮತ್ತು ಪ್ರಾಣಿಗಳನ್ನು ಬೇರೆಡೆ ಸಾಗಿಸುವಂತಹ ಪ್ರತಿಕ್ರಿಯೆ ಕ್ರಮಗಳ ಬದಲು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕ್ರಮಗಳ ಅಗತ್ಯ ಹೆಚ್ಚಾಗಿದೆಯೆಂದು ಆತ್ರೇಯ ಮತ್ತು ತಂಡ ಸೂಚಿಸಿದೆ.

 

ಗಮನ ಸೆಳೆವ ಮಾಹಿತಿ: ದೊಡ್ಡ ಪ್ರಮಾಣದ ಮಾಹಿತಿ ಸಂಗ್ರಹಿಸಲು ಎಷ್ಟೋ ಸಲ ಮಾಧ್ಯಮ ವರದಿಗಳ ಮೊರೆಹೋಗುವುದರಿಂದ ಸಮಯ ಮತ್ತು ಶ್ರಮ ಎರಡನ್ನೂ ಉಳಿಸಬಹುದು. ಈ ಸಂಶೋಧಕರ ತಂಡ ಇಡೀ ಕರ್ನಾಟಕವನ್ನು ಕಾಲ್ನಡಿಗೆಯಲ್ಲಿ ಸಮೀಕ್ಷೆ ನಡೆಸುವ ಬದಲು ಅಂತರ್ಜಾಲದ ಸಹಾಯದಿಂದ ಎಷ್ಟೋ ಪಾಲು ಕಡಿಮೆ ಸಮಯದಲ್ಲೇ ಸಮರ್ಥವಾದ ಅಧ್ಯಯನ ನಡೆಸಿದೆ. 

 

ಸಂಶೋಧನಾ ವರದಿ: ಸುದ್ದಿಯಲ್ಲಿ ಗುರುತಾಗಿ: ಮಾಧ್ಯಮಗಳ ವರದಿಗಳನ್ನು ಬಳಸಿ ಅಭಯಾರಣ್ಯಗಳ ಹೊರಗೆ ಚಿರತೆಗಳಿರುವ ಜಾಗಗಳು, ದಾಳಿ, ಮತ್ತು ಅವುಗಳ ನಿರ್ವಹಣಾ ಪದ್ಧತಿಗಳ ಪರಿಶೀಲನೆ – ವಿದ್ಯಾ ಆತ್ರೇಯ, ಅರ್ಜುನ್ ಶ್ರೀವತ್ಸ, ಮಾಹಿ ಪುರಿ, ಕೃತಿ ಕೆ. ಕಾರಂತ್, ಏನ್. ಸಾಂಬ ಕುಮಾರ್, ಕೆ. ಉಲ್ಲಾಸ ಕಾರಂತ – PLOS One, 2015

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.