ಮೂಲ ಲೇಖಕರು: ಕೆ. ಉಲ್ಲಾಸ ಕಾರಂತ ಹಾಗೂ ಕೃತಿ ಕೆ. ಕಾರಂತ್
ಸಾರಾಂಶ: ಲೂಕ್ರೇಷಿಯಾ ಆಗಿಲಾರ್
ಅನುವಾದ: ಸೌರಭಾ ರಾವ್
ಈ ಲೇಖನ, ಪರಿಸರ ಪ್ರವಾಸೋದ್ಯಮ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ಎರಡನೆಯದು.
ಮೂಲತಃ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಪ್ರಕಟವಾದ ಈ ಲೇಖನದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಚರ್ಚೆಯೊಂದಕ್ಕೆ ಲೇಖಕರು ತಮ್ಮ ಸಲಹೆ ನೀಡಿದ್ದಾರೆ – ಹುಲಿ ಅಭಯಾರಣ್ಯಗಳಲ್ಲಿ ಹುಲಿ ಪ್ರವಾಸೋದ್ಯಮವನ್ನು ನಿಷೇಧಿಸಬೇಕೇ? ಹುಲಿಗಳು ಹಾಗೂ ಪ್ರವಾಸೋದ್ಯಮದ ಬಗ್ಗೆ ತಮ್ಮ ಒಟ್ಟಾರೆ ಪರಿಣತಿಯ ಆಧಾರದ ಮೇಲೆ, ಅಭಯಾರಣ್ಯಗಳಲ್ಲಿರುವ ವನ್ಯಜೀವಿಗಳು ಮತ್ತು ಸುತ್ತ ವಾಸಿಸುವ ಜನ, ಇಬ್ಬರಿಗೂ ಅನುಕೂಲವಾಗುವಂತಹ ಹುಲಿ ಪ್ರವಾಸೋದ್ಯಮದ ಯೋಜನೆಯೊಂದನ್ನು ಪ್ರಸ್ತಾಪಿಸಿದ್ದಾರೆ.
ಸಂರಕ್ಷಣೆ ಮತ್ತು ಬಂಡವಾಳಶಾಹಿ ಆಗಾಗ ಮುಖಾಮುಖಿಯಾಗುತ್ತವೆ. ಸಮಾಜ ಅಭಿವೃದ್ಧಿಯೆಡೆಗೆ ನಡೆದಾಗೆಲ್ಲಾ ಸಂರಕ್ಷಣಾ ಕೆಲಸಗಳು ವಾಣಿಜ್ಯ ಬೇಡಿಕೆಗಳ ಮುಂದೆ ಸೋಲುತ್ತವೆ. ಅರಣ್ಯನಾಶದಂತಹ ತೊಂದರೆಗಳು ಪರಿಸರ ಹಾನಿ ಮಾಡುತ್ತಿರುವುದು ಸ್ಪಷ್ಟವಾಗಿದೆ. ಆದರೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಮಾತ್ರ ಸಂರಕ್ಷಣಾವಾದಿಗಳಲ್ಲೇ ಭಿನ್ನಾಭಿಪ್ರಾಯಗಳಿವೆ. ಹಾಗಾದರೆ ಪರಿಸರ ಪ್ರವಾಸೋದ್ಯಮ ಸಂರಕ್ಷಣೆಗೆ ಪೂರಕವೋ, ಹಾನಿಕಾರಕವೋ?
ಈ ಲೇಖನದಲ್ಲಿ, ಈ ಪ್ರಶ್ನೆಯನ್ನು ಕೆ. ಉಲ್ಲಾಸ ಕಾರಂತ ಹಾಗೂ ಕೃತಿ ಕೆ. ಕಾರಂತ್ ಭಾರತದ ಹಿನ್ನೆಲೆಯಲ್ಲಿ ಅವಲೋಕಿಸಿದ್ದಾರೆ. ಅವರ ಪ್ರಕಾರ, ಸರ್ವೋಚ್ಚ ನ್ಯಾಯಾಲಯ ಹುಲಿ ಪ್ರವಾಸೋದ್ಯಮದಂತಹ ಚಟುವಟಿಕೆಗಳ ಮೇಲೆ ಮಧ್ಯಕಾಲೀನ ಆಜ್ಞೆ ನೀಡಿದಾಗಿನಿಂದ ಈ ಚರ್ಚೆ ಮತ್ತಷ್ಟು ಕಾವೇರಿದೆ. ಪ್ರವಾಸೋದ್ಯಮದ ಪರವಾಗಿರುವವರು, ಹುಲಿ ಸಂರಕ್ಷಣೆಗೆ ಜನರ ಬೆಂಬಲದ ಅವಶ್ಯಕತೆಯಿದ್ದು ಈ ನಿಷೇಧಾಜ್ಞೆಯಿಂದ ಹುಲಿಗಳ ನಾಶವಾಗುತ್ತದೆಂದು ವಾದಿಸುತ್ತಾರೆ. ಲೇಖಕರು ಈ ವಾದದಲ್ಲಿನ ಕೆಲವು ದೋಷಗಳನ್ನು ಎತ್ತಿ ಹಿಡಿದಿದ್ದಾರೆ. ಮೊದಲನೆಯದಾಗಿ, ಮಧ್ಯಕಾಲೀನ ಆಜ್ಞೆ ಪೂರ್ಣ ನಿಷೇಧಾಜ್ಞೆ ಅಲ್ಲ; ಪರಿಸರ ಪ್ರವಾಸೋದ್ಯಮ ಹೇಗೂ ಹುಲಿ ಅಭಯಾರಣ್ಯಗಳ ‘ಬಫರ್’ ವಲಯಗಳಲ್ಲಿ ಮತ್ತು ಇತರ ಎಲ್ಲಾ ವನ್ಯಜೀವಿ ಅಭಯಾರಣ್ಯಗಳಲ್ಲಿ ಮುಂದುವರೆದಿದೆ. ಎರಡನೆಯದಾಗಿ, ಹುಲಿ ಪ್ರವಾಸೋದ್ಯಮ ಹುಲಿ ಸಂರಕ್ಷಣೆ ಅಲ್ಲ. ಏಕೆಂದರೆ ಹುಲಿಗಳನ್ನು ನೋಡಬೇಕಾದರೆ ತೆರೆದ ಆವಾಸ್ಥಾನಗಳ ಮತ್ತು ಅಲ್ಲಿ ವಾಸವಿರುವ ಪ್ರಾಣಿಗಳನ್ನು ಮುಖಾಮುಖಿಯಾಗುವ ಅಗತ್ಯವಿರುತ್ತದೆ. ಹುಲಿ ಪ್ರವಾಸೋದ್ಯಮ ಕೆಲವು ಪ್ರಖ್ಯಾತ ಅಭಯಾರಣ್ಯಗಳಲ್ಲಿ ನಡೆಯುತ್ತದೆ, ಹೀಗಾಗಿ ಹುಲಿಗಳ ಆವಾಸಸ್ಥಳ “ಸಂರಕ್ಷಣೆ”ಯಾಗುವುದಿಲ್ಲ. ಕಡೆಯದಾಗಿ, ೧೯೭೦ರ ದಶಕದಲ್ಲಿ ನಡೆದ ಹುಲಿ ಸಂಖ್ಯೆಯ ಪುನಃಸ್ಥಾಪನೆ ಆದದ್ದು ಪ್ರವಾಸೋದ್ಯಮದಿಂದಲ್ಲ, ಆದರೆ ಜನಗಳ ಬೆಂಬಲ, ಸರ್ಕಾರದ ಕೆಲಸ ಮತ್ತು ನೈಸರ್ಗಿಕ ರಾಷ್ಟ್ರೀಯತೆಯ ಒಟ್ಟು ಪರಿಶ್ರಮದಿಂದ.
ಪ್ರವಾಸೋದ್ಯಮದ ವಿರೋಧಿಗಳು ನ್ಯಾಯಾಲಯದ ಆಜ್ಞೆಯನ್ನು ಹೊಗಳುತ್ತಾರೆ. ಹುಲಿ ಸಂರಕ್ಷಣೆಗೆ ಅತಿ ದೊಡ್ಡ ಅಪಾಯವಿರುವುದು ಪ್ರವಾಸೋದ್ಯಮದಿಂದ ಮತ್ತು ಇದರಿಂದ ಧನಿಕರು ಸ್ಥಳೀಯ ಜನರ ಭೂಮಿಯನ್ನು ಕೊಂಡುಕೊಳ್ಳುವಂತೆ ಅವಕಾಶ ಮಾಡಿಕೊಡುತ್ತದೆಂದು ಅವರು ವಾದಿಸುತ್ತಾರೆ. ಹುಲಿ ಪ್ರವಾಸೋದ್ಯಮದ ಸದ್ಯದ ಮಾದರಿ ಬದಲಾಗಬೇಕು, ಅಭಯಾರಣ್ಯಗಳಲ್ಲಿ ಗಲಭೆ ಕಡಿಮೆ ಮಾಡಿ, ಸ್ಥಳೀಯ ಆರ್ಥಿಕ ಪರಿಸ್ಥಿತಿ ಮುಂದುವರೆಯುವಂತೆ ಮಾಡಿ, ಮತ್ತು ಧನಿಕರಲ್ಲದವರಿಗೂ ಪ್ರವೇಶ ದೊರೆಯುವಂತೆ ಮಾಡಬೇಕು. ಆದರೂ, ಪ್ರವಾಸೋದ್ಯಮದ ವಿರೋಧಿಗಳು ಸೂಚಿಸುವ ಎರಡೂ ಆಯ್ಕೆಗಳು – ನಿಷೇಧಾಜ್ಞೆ ಅಥವಾ ಪ್ರವಾಸೋದ್ಯಮವನ್ನು ರಾಷ್ಟ್ರೀಕರಿಸುವುದು – ಸುಲಭವಾಗಿ ಸಾಧ್ಯವಾಗುವಂಥವುಗಳಲ್ಲ.
ದೀರ್ಘಾವಧಿಯಲ್ಲಿ, ವನ್ಯಜೀವಿ ರಕ್ಷಣೆಯಿಂದ ಸಂರಕ್ಷಣಾ ಕೆಲಸ ಮತ್ತು ಪ್ರವಾಸೋದ್ಯಮ ಎರಡೂ ಅನುಕೂಲವಾಗಬಹುದು. ಹಾಗಾಗಿ, ದೇಶದಾದ್ಯಂತ ಶಾಸಕರು ಸಂರಕ್ಷಣೆಗೆ ಪೂರಕವಾಗಿಲ್ಲದಿರುವುದರಿಂದ, ಕಾರಂತ ಮತ್ತು ಕಾರಂತರು ಹುಲಿಗಳ ಪ್ರವಾಸೋದ್ಯಮದ ಹೊಸ ಮಾದರಿಯೊಂದನ್ನು ಸೂಚಿಸಿದ್ದಾರೆ. ಈ ‘ಟೈಗರ್ ಹ್ಯಾಬಿಟ್ಯಾಟ್ ಎಕ್ಸ್ಪ್ಯಾನ್ಷನ್ ಮಾಡೆಲ್’ (THEM) ಹುಲಿಗಳ ಆವಾಸಸ್ಥಾನಗಳನ್ನು ಅಭಯಾರಣ್ಯಗಳ ತುದಿಗೆ ತಾಗಿಕೊಂಡಿರುವ ಖಾಸಗಿ ಕೃಷಿ ಜಮೀನುಗಳಿಗೆ ವಿಸ್ತರಿಸುವುದಕ್ಕೆ ಪ್ರವಾಸೋದ್ಯಮವನ್ನು ಬಳಸಿಕೊಳ್ಳುತ್ತದೆ. ಖಾಸಗಿ ಸಂಸ್ಥೆಗಳು ಖಾಸಗಿ ನೆಲವನ್ನು ದುಬಾರಿ ಪ್ರವಾಸೋದ್ಯಮಕ್ಕೆ ಬಳಸಿಕೊಂಡರೂ, ಸಾರ್ವಜನಿಕ ಪರಿಸರ ಪ್ರದೇಶಗಳು ಕೈಗೆಟುಕುವ ದರದಲ್ಲಿ ಪ್ರವಾಸೋದ್ಯಮ ನಡೆಸಬಹುದು. ಹೀಗೆ ಕೃಷಿಗಿಂತಲೂ ಹೆಚ್ಚು ಲಾಭದಾಯಕವಾದ ಬದಲಿ ವ್ಯವಸ್ಥೆ ಮಾಡಿಕೊಂಡು ಜಾಮೀನು ಹೊಂದಿದ ಜನರು ಪ್ರವಾಸೋದ್ಯಮ ಹಾಗೂ ಸಂರಕ್ಷಣೆ, ಎರಡಕ್ಕೂ ಪರಸ್ಪರ ಲಾಭದಾಯಕವಾಗುವಂತೆ ಮಾಡಬಹುದು.
ಭಾರತದಂತಹ ದೇಶದಲ್ಲಿ ಇಂತಹ ವ್ಯವಸ್ಥೆಯನ್ನು ಜಾರಿಗೊಳಿಸುವುದು ಬಹಳ ಕಷ್ಟವಾದರೂ, ಜನರಲ್ಲಿ ಸ್ವಾಭಾವಿಕವಾಗಿ ಬಂದಿರುವ ವನ್ಯಜೀವಿಗಳ ಬಗೆಗಿನ ತಾಳ್ಮೆ, ಸಹಿಷ್ಣುತೆಯ ಆಧಾರದ ಮೇಲೆ, ಮತ್ತು ಈಗ ನಡೆಯುತ್ತಿರುವ ಜನಸಂಖ್ಯಾ-ವಿಜ್ಞಾನದ ಬದಲಾವಣೆಯ ಆಧಾರದ ಮೇಲೆ THEM ಸಫಲವಾಗಲು ಸಾಧ್ಯವಿದೆ. ಅಲ್ಪಾವಧಿ ಲಾಭವನ್ನು ಮೀರಿ ಪ್ರವಾಸೋದ್ಯಮ ಆಲೋಚಿಸಲು ಮತ್ತು ಆ ಲಾಭ ತರುವ ವನ್ಯಜೀವಿಗಳಿಗೆ ಕೊಡುಗೆ ನೀಡಲು ಇನ್ನಾದರೂ ಮುಂದಾಗಬೇಕು.
ಮೂಲ ಸಂಶೋಧನಾ ವರದಿ: ಮನೆಯಂಗಳದಲ್ಲಿ ಹುಲಿ – ದುಬಾರಿ ಪ್ರವಾಸೋದ್ಯಮದಿಂದ ವನ್ಯಜೀವಿಗಳಿಗೆ ಅನುಕೂಲವಿದೆಯೇ? – ಕೆ. ಉಲ್ಲಾಸ ಕಾರಂತ, ಕೃತಿ ಕೆ. ಕಾರಂತ್ – Economic and Political Weekly, 2012
ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.