ಲೇಖಕರು: ವಿನ್ನಿ ಜೈನ್
ಅನುವಾದ: ಸೌರಭಾ ರಾವ್

ಈ ಲೇಖನ, ನಮ್ಮ ಇತ್ತೀಚಿನ ಸಂಶೋಧನೆಗಳ ವಿಜ್ಞಾನ-ಲೇಖನ ಸರಣಿಯಲ್ಲಿ ಮೊದಲನೆಯದು.

ಸಹಸ್ರಾರು ವರ್ಷಗಳಿಂದ ಭಾರತದ ನೈಸರ್ಗಿಕ ಆವಾಸಸ್ಥಳಗಳಲ್ಲಿ ದೊಡ್ಡ ಮಾಂಸಾಹಾರಿ ಪ್ರಾಣಿಗಳಾದ ಚಿರತೆ, ತೋಳ, ಮತ್ತು ಕರಡಿಗಳು ಬಹುಮುಖ್ಯ ಪ್ರಾಕೃತಿಕ ಪಾತ್ರ ವಹಿಸುತ್ತಾ ಬಂದಿವೆ. ಮನುಷ್ಯರ ಅಸ್ತಿತ್ವಕ್ಕಿಂತ ಮುಂಚೆ ಬಹಳಷ್ಟು ಮಾಂಸಾಹಾರಿ ಪ್ರಾಣಿಗಳು ಭಾರತ ಉಪಖಂಡದ ದಟ್ಟ ಕಾಡುಗಳಲ್ಲಿ, ಗುಡ್ಡ-ಪರ್ವತಗಳಲ್ಲಿ, ಮತ್ತು ಮರುಭೂಮಿಯಲ್ಲಿ ಸಮೃದ್ಧವಾಗಿದ್ದವು. ನಮ್ಮ ಕಲ್ಪನೆ ಮತ್ತು ಸಂಸ್ಕೃತಿಯಲ್ಲಿ ಅವುಗಳನ್ನು ಹಾನಿ ಉಂಟುಮಾಡುವ ಪ್ರಾಣಿಗಳು ಎಂದು ಪರಿಗಣಿಸಿದ್ದರೂ, ನಮ್ಮ ಭೂಮಿಯ ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಅವುಗಳ ಪಾತ್ರ ಅತ್ಯಂತ ಮಹತ್ವದ್ದು. ಬಲಿಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುತ್ತಾ, ಬೇರೆ ಬೇರೆ ಜೀವಿಗಳನ್ನು ಪೋಷಿಸುವ ನಿಸರ್ಗದ ಸ್ವಾಸ್ಥ್ಯವನ್ನು ಈ ಮಾಂಸಾಹಾರಿ ಪ್ರಾಣಿಗಳು ಕಾಪಾಡುತ್ತವೆ.

ವಿಷಾದಕರ ಸಂಗತಿಯೆಂದರೆ, ಹಿಂದೆ ಇದ್ದ ಎಷ್ಟೋ ದೊಡ್ಡ ದೊಡ್ಡ ಆವಾಸಸ್ಥಳಗಳಿಂದ ಈ ಮಾಂಸಾಹಾರಿ ಪ್ರಾಣಿಗಳು ಕಣ್ಮರೆಯಾಗಿವೆ. ಈಗ ಕೇವಲ ಸಣ್ಣ, ಪ್ರತ್ಯೇಕ ತುಂಡು ನೆಲಗಳಲ್ಲಿ ಮಾತ್ರ ಬೀಡುಬಿಟ್ಟಿವೆ. ಇಂತಹ ಪ್ರಭಾವಶಾಲಿಯಾದ ಆದರೆ ಮರೆಯಾಗುತ್ತಿರುವ ಮಾಂಸಾಹಾರಿ ಪ್ರಾಣಿಗಳಲ್ಲಿ, ಮಾನವ-ಪ್ರಧಾನ ಪ್ರದೇಶಗಳಿಗೂ ಒಗ್ಗಿಕೊಂಡಿರುವ ಭಾರತದ ಚಿರತೆಯೂ ಒಂದು. ಇದೂ ತನ್ನ ಐತಿಹಾಸಿಕ ಆವಾಸಸ್ಥಳದ ವಿಸ್ತಾರದಲ್ಲಿ ಬಹಳಷ್ಟು ಕಡೆಗಳಿಂದ ಕಣ್ಮರೆಯಾಗಿದೆ.

ಕೆಲವು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮನುಷ್ಯರ ಜೊತೆಗೇ ಆಗಾಗ ಕಾಣಿಸಿಕೊಳ್ಳುವುದರಿಂದ ಚಿರತೆಗಳ ಸಂಖ್ಯೆ ದೊಡ್ಡದಿರಬಹುದು ಎಂಬ ಗ್ರಹಿಕೆಯಿದೆ. ಆದರೆ ಚಿರತೆಗಳ ಸಂಖ್ಯೆಯನ್ನು ನಿಖರವಾಗಿ ಎಣಿಸಲು ಸಾಕಷ್ಟು ಪರಿಸರವಿಜ್ಞಾನ ಮಾಹಿತಿ ಕಲೆಹಾಕುವುದು ದೊಡ್ಡ ಸವಾಲಾಗಿರುವುದರಿಂದ ಇದನ್ನು ದೃಢಪಡಿಸುವುದು ಕಷ್ಟ.

ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್ (CWS India) ಮತ್ತು ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ವಿಜ್ಞಾನಿಗಳು ಭಾರತ ಉಪಖಂಡದ ವಿವಿಧ ಆವಾಸಸ್ಥಳಗಳಿಂದ ಚಿರತೆಗಳ ಮಲದ ಮಾದರಿಗಳನ್ನು ಕಲೆಹಾಕಿ ‘ಡಿಎನ್ಎ’ಯನ್ನು ಪರಿಶೀಲಿಸಿ ಅವುಗಳ ಆನುವಂಶಿಕ ವೈವಿಧ್ಯತೆ, ಸಂಖ್ಯೆಯ ವಿನ್ಯಾಸಗಳು, ಜನಾಂಗಸ್ಥಿತಿಯ ಇತಿಹಾಸ, ಮತ್ತು ಸ್ಥಳೀಯ ಅವನತಿಯ ಸಂಭಾವ್ಯತೆಗಳನ್ನು ಅಧ್ಯಯಿಸಿದ್ದಾರೆ. 

ಈ ಅಧ್ಯಯನದಿಂದ, ನಾಲ್ಕು ವಿವಿಧ ಬಗೆಯ ಚಿರತೆ ಉಪ-ಸಂಖ್ಯೆ ತಿಳಿದುಬಂದಿದೆ – ಇವು ಪಶ್ಚಿಮ ಘಟ್ಟಗಳು, ಡೆಕ್ಕನ್ ಪ್ರಸ್ಥಭೂಮಿ-ಅರೆ ಶುಷ್ಕ ಪ್ರದೇಶ, ಉತ್ತರ ಭಾರತದ ಗುಡ್ಡಗಾಡು ಶಿವಾಲಿಕ್ ಪ್ರದೇಶ ಮತ್ತು ತೆರಾಯ್ ಪ್ರದೇಶದ ಸಮತಟ್ಟಾದ ಭಾಗಗಳಿಗೆ ತಾಳೆಯಾಗುತ್ತವೆ, ಮತ್ತು ಇವುಗಳ ನಡುವೆ ಆನುವಂಶಿಕವಾಗಿ ಬಹಳ ವ್ಯತ್ಯಾಸವಿದೆ. ಮಲದ ಡಿಏನ್ಎಯಿಂದ ತಿಳಿದಿಬಂದಿರುವುದೇನೆಂದರೆ ಡೆಕ್ಕನ್, ಶಿವಾಲಿಕ್, ಮತ್ತು ತೆರಾಯ್ ಚಿರತೆಗಳ ಸಂಖ್ಯೆಯಲ್ಲಿ ಕ್ರಮವಾಗಿ 90%, 90%, ಮತ್ತು 88%, ಮತ್ತು ಪಶ್ಚಿಮ ಘಟ್ಟಗಳ ಚಿರತೆಗಳ ಸಂಖ್ಯೆಯಲ್ಲಿ 75%ರಷ್ಟು ಇಳಿಕೆಯಾಗಿರುವುದು.

‘ಆಕ್ಯುಪೆನ್ಸಿ ಅಪ್ರೋಚ್’ ಬಳಸಿ, ಉತ್ತರ ಭಾರತದಲ್ಲಿ ಅತಿ ಕಡಿಮೆ ಚಿರತೆಗಳು ಕಂಡುಬಂದರೂ, ಒಟ್ಟಾರೆಯಾಗಿ ಭಾರತದಲ್ಲಿ ಅವುಗಳ ಇರುವು ವಿಸ್ತಾರವಾಗಿ ಹರಡಿದೆ ಎಂದು ಸಂಶೋಧಕರು ಪರಿಶೀಲಿಸಿದ್ದಾರೆ. ಸಂರಕ್ಷಿತ ಪ್ರದೇಶಗಳಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿರುವುದಲ್ಲದೇ, ಜನರ ಸಂಸ್ಕೃತಿಯಲ್ಲಿ ಅವುಗಳ ಬಗ್ಗೆ ಅತೀ ಹೆಚ್ಚು ಸಹಿಷ್ಣುತೆ ಇರುವ ಕಡೆ, ಮತ್ತು ಜನದಟ್ಟಣೆ ಕಡಿಮೆ ಇರುವ ಪ್ರದೇಶಗಳಲ್ಲೂ ಚಿರತೆಗಳು ಕಂಡುಬರುತ್ತವೆ.

ಹಲವು ಅಧ್ಯಯನಗಳ ಫಲಿತಾಂಶಕ್ಕಿಂತ ತೀರಾ ಭಿನ್ನವಾಗಿ ಈ ಅಧ್ಯಯನದ ನಿಖರ ಫಲಿತಾಂಶ, ಏಷ್ಯಾದಲ್ಲಿ ಚಿರತೆಗಳ ಸಂಖ್ಯೆ ಸ್ಥಿರವಾಗಿಲ್ಲ ಮತ್ತು ಏರಿಕೆಯೂ ಆಗುತ್ತಿಲ್ಲ ಎಂದು ತೋರಿಸಿಕೊಟ್ಟಿದೆ. ಕುತೂಹಲಕಾರಿಯಾಗಿ, ಈ ಇಳಿಮುಖ ಇತ್ತೀಚಿನದ್ದಾಗಿದ್ದು, ಅಧ್ಯಯನದ ಪ್ರಕಾರ 120-200 ವರ್ಷಗಳ ಹಿಂದಿನಿಂದ ಶುರುವಾಗಿರುವುದು. ಕಳೆದ ಒಂದು ಶತಮಾನದಲ್ಲಿ ಹೆಚ್ಚಾಗಿರುವ ಮಾನವ-ಚಿರತೆ ಸಂಘರ್ಷ, ಕಳ್ಳಬೇಟೆ, ಭಾರಿಪ್ರಮಾಣದಲ್ಲಿ ಭೂದೃಶ್ಯ ಪರಿವರ್ತನೆ ಮತ್ತು ವಿಭಾಗೀಕರಣ ಇದಕ್ಕೆ ಕಾರಣ ಎಂದು ಸಂಶೋಧಕರು ನಂಬಿದ್ದಾರೆ.

ಪ್ರಸ್ತುತ ಚಿರತೆಗಳು IUCN ಪಟ್ಟಿಯಲ್ಲಿ ‘ವಲ್ನರಬಲ್’ (Vulnerable) ಸ್ಥಾನ ಪಡೆದಿವೆ. ಈ ಅಧ್ಯಯನದ ಆಧಾರದ ಮೇಲೆ, ಸಂಶೋಧಕರು ಚಿರತೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸೂಚಿಸಿದ್ದಾರೆ. ಹೀಗಾಗಿ ಚಿರತೆಯ ಸಂರಕ್ಷಣೆಗೆ ತುರ್ತು ಗಮನ ನೀಡಬೇಕಾಗಿದೆ. ಅದರಲ್ಲೂ ಭಾರತದಲ್ಲಿ ಅವುಗಳ ಸ್ಥಾನವನ್ನು ಮರುಪರಿಶೀಲಿಸಬೇಕಿದೆ.

ಮೂಲ ಸಂಶೋಧನಾ ವರದಿ: ಆನುವಂಶಿಕ ವಿಶ್ಲೇಷಣೆಗಳಿಂದ ಚಿರತೆಗಳ ಸಂಖ್ಯೆಯ ವಿನ್ಯಾಸ ಮತ್ತು ಇತ್ತೀಚಿನ ಇಳಿಕೆಯ ಕ್ರಮದ ಬಯಲುಸುಪ್ರಿಯಾ ಭಟ್, ಸುವಂಕರ್ ಬಿಸ್ವಾಸ್, ಡಾ. ಕೃತಿ ಕೆ. ಕಾರಂತ್, ಡಾ. ಬಿವಷ್ ಪಾಂಡವ್ ಮತ್ತು ಡಾ. ಸಾಮ್ರಾಟ್ ಮೊಂಡೊಳ್ ಪೀಯರ್ ಜೆ (PeerJ), 1995

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು. 

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.