ಲೇಖಕರು: ವಿನ್ನಿ ಜೈನ್
ಅನುವಾದ: ಸೌರಭಾ ರಾವ್
ಈ ಲೇಖನ, ಭೂದೃಶ್ಯ ಸಂಪರ್ಕ ಎಂಬ ವಿಜ್ಞಾನ-ಲೇಖನ ಸರಣಿಯಲ್ಲಿ ಎರಡನೆಯದು.
ನಮ್ಮ ಭೂಮಿಯ ಮೇಲೆ ೮ ಮಿಲಿಯನ್-ಗಿಂತಲೂ ಹೆಚ್ಚು ಸಸ್ಯಗಳು, ಪ್ರಾಣಿಗಳು, ಬ್ಯಾಕ್ಟೀರಿಯಾ, ಮತ್ತು ಅಣಬೆ ಜಾತಿಗಳಿವೆ. ಹುಲ್ಲುಗಾವಲು, ಅರಣ್ಯ, ಗುಹೆ, ಮತ್ತು ಸಮುದ್ರಗಳಂತಹ ವಿಭಿನ್ನ ಪರಿಸರಗಳಿಗೆ ಜೀವಿಗಳು ಹೊಂದಿಕೊಳ್ಳುವುದು ಇಷ್ಟು ಹೇರಳವಾದ ವೈವಿಧ್ಯತೆಗೆ ಇರುವ ಕಾರಣಗಳಲ್ಲೊಂದು. ಇದರಲ್ಲಿ ಎಷ್ಟೋ ಆವಾಸಸ್ಥಾನಗಳು ಒಂದರಿಂದ ಒಂದು ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿವೆ. ಆಸ್ಟ್ರೇಲಿಯಾದ ಕಾಂಗರೂಗಳು ಹಿಮಾಲಯದ ಹಿಮಚಿರತೆಗಳನ್ನು ಮುಖಾಮುಖಿಯಾಗುವುದಿಲ್ಲ. ಮೀನುಗಳು ಹಲವುಬಾರಿ ಒಂದೇ ಕೆರೆ ಅಥವಾ ಕೊಳಕ್ಕೆ ಸೀಮಿತಗೊಂಡಿರುತ್ತವೆ. ಸಂಚಾರಕ್ಕೆ ಅಥವಾ ಹರಡುವಿಕೆಗೆ ಹೀಗೆ ಅಡ್ಡಿಯಾಗುವ ಅಂಶಗಳು ಭೂಮಿಯ ಪರಿಸರ ವ್ಯವಸ್ಥೆಗಳು ಮತ್ತು ಜೀವವೈವಿಧ್ಯತೆಗಳನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಮನುಷ್ಯರ ಸಂಖ್ಯೆ ಬೆಳೆಯುತ್ತಿದ್ದಷ್ಟೂ ನಾವು ನಮ್ಮ ಸುತ್ತಮುತ್ತಲ ಪರಿಸರವನ್ನು ಬದಲಿಸುವುದು ಮಾತ್ರವಲ್ಲದೇ ಬೇರೆ ಪ್ರಾಣಿಗಳ ಮತ್ತು ಸಸ್ಯಗಳ ಸಂಚಾರ, ಹರಡುವಿಕೆಯ ಸ್ವರೂಪಗಳನ್ನೂ ಬದಲಿಸುತ್ತವೆ. ಉದಾಹರಣೆಗೆ, ಏಷ್ಯಾದ ಆನೆಗಳು ಹಿಂದೆ ಪರಸ್ಪರ ಸಂಪರ್ಕವಿದ್ದ ಭಾರತದ ಅರಣ್ಯಗಳಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಿರಬಹುದು, ಆದರೆ ಇಂದು ಇಂತಹ ಮಾರ್ಗಗಳಲ್ಲಿ ಮನುಷ್ಯರ ವಾಸಸ್ಥಳ ಮತ್ತು ಮೂಲಭೂತ ಸೌಕರ್ಯಗಳು ಆನೆಗಳಿಗೆ ಹೆಚ್ಚು ಹೆಚ್ಚು ಅಡಚಣೆ ಒಡ್ಡುತ್ತಿವೆ. ಇದು ಪ್ರಾಕೃತಿಕ ಪ್ರಕ್ರಿಯೆಗಳಿಗೆ ತೀವ್ರವಾದ ತೊಂದರೆ ಒಡ್ಡುವುದಲ್ಲದೇ ಜೀವವೈವಿಧ್ಯತೆಯ ಸ್ವರೂಪಗಳನ್ನೂ ಮಾರ್ಪಾಡು ಮಾಡುತ್ತವೆ.
ಇತ್ತೀಚೆಗೆ ‘ಲ್ಯಾಂಡ್ ಯೂಸ್ ಪಾಲಿಸಿ’ಯಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಫೌಂಡೇಶನ್ ಆಫ್ ಎಕಲಾಜಿಕಲ್ ರಿಸರ್ಚ್, ಅಡ್ವೊಕಸಿ, ಅಂಡ್ ಲರ್ನಿಂಗ್ (FERAL), ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್, ಯೂನಿವರ್ಸಿಟಿ ಆಫ್ ಗೋಟಿಂಗನ್, ಮತ್ತು ಕೊಲಂಬಿಯಾ ಯೂನಿವರ್ಸಿಟಿಯ ವಿಜ್ಞಾನಿಗಳು, ಭಾರತದ ಕಾಡುಗಳ ಸಂಪರ್ಕದ ಮೇಲೆ ಮೂಲಭೂತ ಸೌಕರ್ಯಗಳ ಪ್ರಭಾವವನ್ನು ಪರಿಶೀಲಿಸಿದ್ದಾರೆ. ಪ್ರಸ್ತುತ ಇರುವ ಅರಣ್ಯ ಪ್ರದೇಶಗಳು ಮತ್ತು ರಸ್ತೆ, ಕಾಲುವೆ, ರೈಲು, ಮತ್ತು ವಿದ್ಯುತ್ ಪ್ರಸರಣ ತಂತಿಗಳಂತಹ ಮೂಲಭೂತ ಸೌಕರ್ಯಗಳ ಪ್ರಾದೇಶಿಕ ದತ್ತಾಂಶಗಳನ್ನು ಕಲೆಹಾಕಿ ವಿಶ್ಲೇಷಿಸಿದರು.
ಮೂಲಭೂತ ಸೌಕರ್ಯಗಳ ಪ್ರಭಾವವನ್ನು ಅಧ್ಯಯಿಸಲು, ಸದ್ಯಕ್ಕೆ ಇರುವ ವಿಭಜಿತ ಅರಣ್ಯ ಪ್ರದೇಶಗಳು ಮತ್ತು ಯಾವ ಮೂಲಭೂತ ಸೌಕರ್ಯಗಳೂ ಇರದ ಅರಣ್ಯ ಪ್ರದೇಶದ ಅನುಕರಣೆಯ ನಡುವೆ ಹೋಲಿಕೆ ಮಾಡಿದರು. ಇದರಿಂದ ತಿಳಿದುಬಂದಿದ್ದೇನೆಂದರೆ, ಅತ್ಯಂತ ಸಾಮಾನ್ಯವಾಗಿ ಕಾಡುಗಳನ್ನು ಭೇದಿಸಿರುವುದು ರಸ್ತೆಗಳು (ಹೆದ್ದಾರಿ ಮತ್ತು ಜಿಲ್ಲಾವಾರು ರಸ್ತೆಗಳು) ಮತ್ತು ಹೈ ಟೆನ್ಶನ್ ವಿದ್ಯುತ್ ಪ್ರಸರಣ ತಂತಿಗಳು. ಮೂಲಭೂತ ಸೌಕರ್ಯಗಳಿಂದ ಅರಣ್ಯ ವಿಭಜನೆಯನ್ನು ಶೇ. ೬ರಷ್ಟು ಹೆಚ್ಚಿದೆ, ಮತ್ತು ದೊಡ್ಡ ಅರಣ್ಯ ಪ್ರದೇಶಗಳಲ್ಲಿ ಶೇ. ೭೧.೫ರಷ್ಟು ಇಳಿಕೆಯಾಗಿದೆ. ಮಧ್ಯಭಾರತದಲ್ಲಿ ದೊಡ್ಡ ಅರಣ್ಯ ಪ್ರದೇಶಗಳಿದ್ದು, ಅವು ಪ್ರತ್ಯೇಕವಾಗಿಯೂ ಇವೆ. ಆದರೆ ಪಶ್ಚಿಮ ಘಟ್ಟಗಳಲ್ಲಿ, ಸಣ್ಣ ಅರಣ್ಯ ಪ್ರದೇಶಗಳ ಸಂಖ್ಯೆ ಹೆಚ್ಚಿದೆ.
ಹೀಗೆ ದೊಡ್ಡ ಅರಣ್ಯ ಪ್ರದೇಶಗಳು ವಿಭಜಿತಗೊಂಡು ಪ್ರತ್ಯೇಕಗೊಳ್ಳುವುದರಿಂದ ಜೀವವೈವಿಧ್ಯತೆಗೆ ನಷ್ಟವಾಗುತ್ತದೆ. ಈ ಚಿಕ್ಕ ಪ್ರದೇಶಗಳು ಕಡಿಮೆ ಜೀವಜಾತಿಗಳನ್ನು ಹೊರೆಯಲು ಮಾತ್ರ ಶಕ್ತಿ ಹೊಂದಿದ್ದು, ತಮ್ಮ ನಿವಾಸಿ ವನ್ಯಜೀವಿಗಳ ಅವನತಿಯ ಸಾಧ್ಯತೆ ಜಾಸ್ತಿಯಾಗುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಮತ್ತು ರೋಗಗಳ ಪ್ರಸರಣ ಜಾಸ್ತಿಯಾಗುತ್ತದೆ, ಮತ್ತು ಇವೆರಡರಿಂದಲೂ ಮನುಷ್ಯರಿಗೆ ಅಪಾಯವಿದೆ.
ವಿಭಜಿತ ಅರಣ್ಯ ಪ್ರದೇಶಗಳನ್ನು ಮೂರು ರೀತಿಯಾಗಿ ವಿಂಗಡಿಸಿ ವಿಭಜನೆಯನ್ನು ಅಳತೆ ಮಾಡಿದ್ದಾರೆ – ದೊಡ್ಡ ಮತ್ತು ತುಂಡಾಗದ ಅರಣ್ಯಗಳಿಂದ ಸಣ್ಣ ಮತ್ತು ಅಂತರವುಳ್ಳ ಪ್ರದೇಶಗಳು. “ಸೈನ್ಸ್ ಫಾರ್ ನೇಚರ್ ಅಂಡ್ ಪೀಪಲ್ ಪಾರ್ಟ್ನರ್ಶಿಪ್ (https://snappartnership.net/) ಸಹಯೋಗದಲ್ಲಿ ನಡೆಸುತ್ತಿರುವ ಅಧ್ಯಯನ ಸರಣಿಯಲ್ಲಿ ಇದು ಮೊದಲನೆಯದು. ನಮ್ಮ ಸಂಶೋಧನೆಯ ಫಲಿತಾಂಶಗಳು ಚಿಂತೆಗೀಡುಮಾಡುವಂತಹವು – ಭಾರತದ ಬಹುತೇಕ ಅರಣ್ಯಪ್ರದೇಶಗಳು ಮೂಲಸೌಕರ್ಯಗಳ ಪ್ರಭಾವದಿಂದ ಚಿಕ್ಕ ಚಿಕ್ಕ ಕಾಡುಪ್ರದೇಶಗಳಾಗಿ ವಿಭಜನೆಗೊಂಡು ಕಾಡುಪ್ರಾಣಿಗಳ ಚಲನೆಗೆ ತೊಡಕು ಉಂಟುಮಾಡಿ, ಜೀವವೈವಿಧ್ಯತೆ ಸಂರಕ್ಷಣೆಗೆ ಸವಾಲಾಗಿದೆ. ಅಷ್ಟೇ ಅಲ್ಲ, ಇಂತಹ ಛಿದ್ರಗೊಂಡ ವಿಭಜಿತ ಪ್ರತ್ಯೇಕ ಕಾಡುಗಳೇ ಈಗ ನಾವು ಎದುರಿಸುತ್ತಿರುವ ಕೋವಿಡ್-19 ಪಿಡುಗುಗಳಂತಹ ರೋಗಗಳು ಶುರುವಾಗಿ, ಕಾಡುಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸಂಪರ್ಕ ಹೆಚ್ಚಿ ಮತ್ತಷ್ಟು ಹರಡುವಂತಾಗುತ್ತದೆ. ನಾವು ಪಶ್ಚಿಮ ಘಟ್ಟ ಮತ್ತು ಮಧ್ಯ ಭಾರತದಲ್ಲಿ ನಡೆಸಿರುವ ವಿಶ್ಲೇಷಣೆಗಳನ್ನು ಭಾರತದ ಇತರ ಅತ್ಯಮೂಲ್ಯ ಪ್ರಾಕೃತಿಕ ಪ್ರದೇಶಗಳಲ್ಲೂ ನಡೆಸುವ ತುರ್ತು ಅಗತ್ಯವಿದೆ,” ಎನ್ನುತ್ತಾರೆ ‘ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್’ನ ಮುಖ್ಯ ಸಂರಕ್ಷಣಾ ವಿಜ್ಞಾನಿ ಡಾ।। ಕೃತಿ ಕೆ. ಕಾರಂತ್.
ಭವಿಷ್ಯದಲ್ಲಿ ರೂಪಿಸುವ ಮೂಲಸೌಕರ್ಯ ಯೋಜನೆಗಳನ್ನು ‘ಎಲ್ಲಿ’ ಮತ್ತು ‘ಹೇಗೆ’ ಕಾರ್ಯಗತಗೊಳಿಸಿದರೆ ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಳ ನಡುವೆ ಸಮತೋಲನ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಬೇಕಾದ ಅತ್ಯಗತ್ಯ ಮಾಹಿತಿಯನ್ನು ಈ ಅಧ್ಯಯನದ ನೀಡುತ್ತದೆ. ಈ ಸೂಚನೆಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ, ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೂ ಸಹಾಯ ಮಾಡುತ್ತವೆ ಎಂದು ಈ ವಿಜ್ಞಾನಿಗಳು ನಂಬಿದ್ದಾರೆ. ಅಧ್ಯಯನದ ಫಲಿತಾಂಶ ಕಾರ್ಯನೀತಿ, ಯೋಜಕರು, ಸ್ಥಳೀಯ ವಿಜ್ಞಾನಿಗಳು, ಸಂರಕ್ಷಣಾವಾದಿಗಳು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು, ಎಲ್ಲರಿಗೂ ಜಾಲತಾಣದಲ್ಲಿ ಲಭ್ಯವಿದ್ದು, ಮುಂದೆ ಬರುವ ಯೋಜನೆಗಳು ವಿಭಜಿತ ಅರಣ್ಯಪ್ರದೇಶಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂದು ಕಲ್ಪಿಸಿಕೊಳ್ಳಲು ಸಹಾಯಮಾಡುತ್ತದೆ.
ಅಧ್ಯಯನದ ಫಲಿತಾಂಶಗಳು ಸಾರ್ವಜನಿಕವಾಗಿ ಈ ಜಾಲತಾಣದಲ್ಲಿ ಲಭಿಸುತ್ತದೆ.
ಮೂಲ ಸಂಶೋಧನಾ ವರದಿ: ಬಿಟ್ಸ್ ಅಂಡ್ ಪೀಸಸ್: ಫಾರೆಸ್ಟ್ ಫ್ರಾಗ್ಮೆಂಟೇಶನ್ ಬೈ ಲೀನಿಯರ್ ಇಂಟ್ರೂಷನ್ಸ್ ಇನ್ ಇಂಡಿಯಾ – ರಜತ್ ನಾಯಕ್, ಡಾ।। ಕೃತಿ ಕೆ. ಕಾರಂತ್, ಡಾ।।ತ್ರಿಶ್ನಾ ದತ್ತ, ಡಾ।। ರೂಥ್ ಡೆಫ್ರೈಸ್, ಡಾ।। ಕೆ. ಉಲ್ಲಾಸ ಕಾರಂತ ಮತ್ತು ಶ್ರೀನಿವಾಸ ವೈದ್ಯನಾಥನ್ – Land Use Policy, ೨೦೨೦
ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.