ಲೇಖಕರು: ಅಭೀಷ್ಠ ರಾವ್
ಅನುವಾದ: ಸೌರಭಾ ರಾವ್

ಈ ಲೇಖನ, ಭೂದೃಶ್ಯ ಸಂಪರ್ಕ ಎಂಬ ವಿಜ್ಞಾನ-ಲೇಖನ ಸರಣಿಯಲ್ಲಿ ಮೊದಲನೆಯದು.

ಪ್ರಪಂಚದ ಅತ್ಯಂತ ಪ್ರಭಾವಶಾಲಿ ಪ್ರಾಣಿಗಳಲ್ಲಿ ಹುಲಿ ಕೂಡಾ ಒಂದು. ಐತಿಹಾಸಿಕವಾಗಿ ಹುಲಿಗಳು ನಮ್ಮ ಸಂಸ್ಕೃತಿ, ಪುರಾಣ ಕಥೆಗಳು, ಮತ್ತು ದಂತಕಥೆಗಳಲ್ಲಿ ಹಾಸುಹೊಕ್ಕಾಗಿವೆ. ದೊಡ್ಡ ಮಾರ್ಜಾಲಗಳಲ್ಲಿ ಅತಿ ದೊಡ್ಡದಾದ ಮತ್ತು ಸರಾಸರಿ ಮನುಷ್ಯನ ಗಾತ್ರಕ್ಕಿಂತ ಸುಮಾರು ಐದು ಪಟ್ಟು ದೊಡ್ಡ ಗಾತ್ರವುಳ್ಳ ಈ ಬೇಟೆಪ್ರಾಣಿಯನ್ನು ಮನುಷ್ಯರು ಮೆಚ್ಚುವುದರಲ್ಲಿ, ಒಮ್ಮೊಮ್ಮೆ ಭಯಮಿಶ್ರಿತ ಗೌರವ ತೋರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಆದರೆ ಮನುಷ್ಯರ ಕಳ್ಳ ಬೇಟೆ ಮತ್ತು ಆವಾಸಸ್ಥಳಗಳ ಅತಿಕ್ರಮಣದಿಂದ ಕಳೆದ ಎರಡು ಶತಮಾನಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ. ಹಿಂದೆ ಉತ್ತರದಲ್ಲಿ ರಷ್ಯಾದಿಂದ ಹಿಡಿದು ದಕ್ಷಿಣದಲ್ಲಿ ಜಾವಾ ದ್ವೀಪಗಳವರೆಗೂ ಹರಡಿದ್ದ ಹುಲಿಗಳ ವಿಸ್ತಾರವಾದ ಆವಾಸಸ್ಥಳಗಳಲ್ಲಿ ಈಗ ಶೇ. ೭%ಗಿಂತಲೂ ಕಡಿಮೆ ಉಳಿದಿದೆ.

ಇಂದು, ಪ್ರಪಂಚದ ಶೇ. ೭೦%ರಷ್ಟು ಕಾಡುಹುಲಿಗಳು, ಮನುಷ್ಯರ ನೆಲೆಗಳೇ ಸುತ್ತುವರೆದಿರುವ ಭಾರತದ ವಿಭಜಿತ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿವೆ. ಹುಲಿಗಳ ಭವಿಷ್ಯ ಕೇವಲ ಅವುಗಳ ಸಂಖ್ಯೆ ಹೆಚ್ಚುವುದರ ಮೇಲೆ ಮಾತ್ರವಲ್ಲ, ವಿಭಜಿತ ಅರಣ್ಯ ಪ್ರದೇಶಗಳ ನಡುವೆ ಅವುಗಳು ಆನುವಂಶಿಕವಾಗಿ ಸಂಬಂಧ ಹೊಂದುವುದರ ಮೇಲೆ ಅವಲಂಬಿಸಿದೆ.

 ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್, ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್, ಫೌಂಡೇಶನ್ ಫಾರ್ ಈಕಲಾಜಿಕಲ್ ರಿಸರ್ಚ್, ಅಡ್ವೊಕಸಿ ಅಂಡ್ ಲರ್ನಿಂಗ್, ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್  ಮ್ಯಾನೇಜ್ಮೆಂಟ್-ನ ವಿಜ್ಞಾನಿಗಳು, ಮಧ್ಯ ಭಾರತದ ಆರು ಅಭಯಾರಣ್ಯಗಳಲ್ಲಿ ಇರುವ ಹುಲಿಗಳ ಸಂಖ್ಯೆಯ ನಡುವಿನ ಸಂಬಂಧವನ್ನು ಪರಿಶೀಲಿಸಿದ್ದಾರೆ. ಹುಲಿಗಳ ಮಲದ ಮೇಲೆ ಆನುವಂಶಿಕ ವಿಶ್ಲೇಷಣೆ (ಜೆನೆಟಿಕ್ ಅನಾಲಿಸಿಸ್) ನಡೆಸಿ, ಮೇಲ್ಘಾಟ್ ಹುಲಿ ಅಭಯಾರಣ್ಯ, ಪೇನ್ಚ್  ಹುಲಿ ಅಭಯಾರಣ್ಯ, ನಾಗ್ಝಿರಾ ಹುಲಿ ಅಭಯಾರಣ್ಯ, ತಾಡೋಬಾ-ಅಂಧಾರಿ ಹುಲಿ ಅಭಯಾರಣ್ಯ, ಕಾನ್ಹಾ ಹುಲಿ ಅಭಯಾರಣ್ಯ ಮತ್ತು ನಾಗಾರ್ಜುನಸಾಗರ್-ಶ್ರೀಶೈಲಂ ಹುಲಿ ಅಭಯಾರಣ್ಯಗಳ ೫೫ ಪ್ರತ್ಯೇಕ ಹುಲಿಗಳ (ಇಡೀ ಹುಲಿ ಸಂಖ್ಯೆಯ ಶೇ. ೩೦%ರಷ್ಟು) ಪ್ರಸರಣ/ಚದುರುವ ಪ್ರಕ್ರಿಯೆ ಮತ್ತು ಅವುಗಳ ಇರುವಿಕೆಯ ಮೇಲೆ ಭೂಪ್ರದೇಶದ ಮೂಲತತ್ವಗಳ ಪ್ರಭಾವವನ್ನು ವಿಜ್ಞಾನಿಗಳು ಪರಿಶೀಲಿಸಿದ್ದಾರೆ. 

ಈ ಅಧ್ಯಯನದಿಂದ ಹುಲಿಗಳ ಮೂರು ಪ್ರತ್ಯೇಕ ಆನುವಂಶಿಕ ಗುಂಪುಗಳಿರುವುದು ತಿಳಿದುಬಂದಿದೆ. ಈ ಸಂಖ್ಯೆಗಳ ನಡುವೆ ಇರುವ ಸಂಬಂಧ, ಹುಲಿಗಳು ಬಹಳ ಹಿಂದಿನಿಂದ ಈ ಅಭಯಾರಣ್ಯಗಳ ನಡುವೆ ತಮ್ಮ ತಮ್ಮ ಕ್ಷೇತ್ರ ಸ್ಥಾಪಿಸಲು ವಲಸೆ ನಡೆಸುತ್ತವೆ ಎಂಬ ಅಂಶವನ್ನು ಬೆಂಬಲಿಸುತ್ತದೆ. ಇದರಿಂದ ಅವುಗಳ ಆನುವಂಶಿಕ ಸಂಬಂಧ ವೈವಿಧ್ಯವಾಗಿದೆ. ಆನುವಂಶಿಕ ವಿಶ್ಲೇಷಣೆಯಿಂದ, ಒಂದು ಅಥವಾ ಎರಡು ತಲೆಮಾರುಗಳಲ್ಲಿ, ಒಂದು ಹುಲಿ, ಸಂರಕ್ಷಿತ ಪ್ರದೇಶವಾದ ತನ್ನ ಹುಟ್ಟಿನ ಜಾಗದಿಂದ ಸುಮಾರು ೬೯೦ ಕಿಲೋಮೀಟರ್ ದೂರ ಕ್ರಮಿಸಿ ತನ್ನ ಕ್ಷೇತ್ರ ಸ್ಥಾಪಿಸಿರುವುದು ದೃಢಪಟ್ಟಿದೆ.

ಭೂಪ್ರದೇಶದ ಲಕ್ಷಣಗಳನ್ನು ಹುಲಿಗಳ ಸಂಪರ್ಕದ ಜೊತೆ ಹೋಲಿಸಿದಾಗ ತಿಳಿದುಬಂದಿದ್ದೇನೆಂದರೆ, ಮನುಷ್ಯರ ವಾಸಸ್ಥಳಗಳಿರುವ ಮತ್ತು ರಸ್ತೆಗಳ ಇರುವಿಕೆ, ಹುಲಿಗಳ ಸಂಪರ್ಕದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ವಾಸ್ತವವಾಗಿ, ಹೆಚ್ಚುತ್ತಿರುವ ಜನಸಂಖ್ಯೆಯ ಸಾಂದ್ರತೆ, ಹುಲಿಗಳ ಆನುವಂಶಿಕ ಪ್ರಸರಣಕ್ಕೆ ಹಾನಿಕರ ಎಂದು ತೋರಿಸಿಕೊಟ್ಟಿರುವ ಮೊದಲ ಅಧ್ಯಯನಗಳಲ್ಲಿ ಇದೂ ಒಂದು.

ಹುಲಿಗಳ ಸಂಪರ್ಕದ ಜೊತೆ ಆವಾಸಸ್ಥಳವನ್ನು ಹೋಲಿಸಿದಾಗ, ಈ ಅಧ್ಯಯನದ ಫಲಿತಾಂಶಗಳು, ಹೆಚ್ಚು ಸಂಖ್ಯಾ ಸಾಂದ್ರತೆ ಇರುವ ಹುಲಿಗಳು ಅತ್ಯುನ್ನತ ಆವಾಸಸ್ಥಳಗಳ ನಡುವೆ ವಲಸೆ ಮಾಡುವ, ಮತ್ತು ಸಂಪರ್ಕ ಕಾಯ್ದುಕೊಳ್ಳುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅಂಶವನ್ನು ಬೆಂಬಲಿಸಿವೆ. ಹಾಗೆಯೇ, ಕಡಿಮೆ ಸಂಖ್ಯಾಸಾಂದ್ರತೆ ಇರುವ ಆವಾಸಸ್ಥಳಗಳ ಹುಲಿಗಳು ಉನ್ನತ ಆವಾಸಸ್ಥಾನಗಳನ್ನು ಅರಸಿ ತಮ್ಮ ಹುಟ್ಟಿನ ಸ್ಥಳದಿಂದ ವಲಸೆ ಹೋಗುತ್ತವೆ.

ಸ್ಥಳೀಯ ಹುಲಿಗಳ ಸಮೃದ್ಧಿ ಮುಖ್ಯವಾದರೂ, ಬೇರೆ ಬೇರೆ ಪ್ರದೇಶಗಳ ಹುಲಿಗಳ ನಡುವೆ ಸಂಪರ್ಕ ಇಲ್ಲದಿದ್ದರೆ ಸಂರಕ್ಷಣಾ ತಂತ್ರಗಳು ಅಸಮರ್ಪಕ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ. ಹುಲಿಗಳ ಸಂಖ್ಯೆಯ ಗಾತ್ರವನ್ನು ಹೆಚ್ಚಿಸಲು ಸಂರಕ್ಷಿತ ಪ್ರದೇಶಗಳ ನಡುವೆ ಸಂಪರ್ಕ ಇರಬೇಕಾದ ಅಗತ್ಯ ಇದೆಯೆಂದು ಅಧ್ಯಯನಕಾರರು ಒತ್ತಿಹೇಳಿದ್ದಾರೆ. ಯಾವುದೇ ರೀತಿಯ ಅತಿಕ್ರಮಣವಿಲ್ಲದ ಆನುವಂಶಿಕ ವಿಶ್ಲೇಷಣೆಗಳ ಬಳಕೆ, ಕ್ಯಾಮೆರಾ ಟ್ರ್ಯಾಪಿಂಗ್ ಮತ್ತು ರೇಡಿಯೋ-ಟೆಲಿಮಿಟ್ರಿ ಜೊತೆ ಪೂರಕವಾಗಿ ಹುಲಿಗಳ ಸಂಖ್ಯೆಗಳ ಬಗ್ಗೆ ಒಳನೋಟ ನೀಡಲು ಈ ಅಧ್ಯಯನದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

 

ಮೂಲ ಸಂಶೋಧನಾ ವರದಿ: ಮಧ್ಯ ಭಾರತದ ಮನುಷ್ಯ-ಪ್ರಭಾವೀ ಪ್ರದೇಶಗಳ ಬಳಿ ಇರುವ ಅರಣ್ಯ ವ್ಯಾಪ್ತಿಗಳಲ್ಲಿ ಹುಲಿಗಳ (ಪ್ಯಾಂಥೇರಾ ಟೈಗ್ರಿಸ್) ಸಂಖ್ಯೆಗಳ ನಡುವಿನ ಸಂಪರ್ಕ – ಆದಿತ್ಯ ಜೋಶಿ, ಶ್ರೀನಿವಾಸ್ ವೈದ್ಯನಾಥನ್, ಸಾಮ್ರಾಟ್ ಮೊಂಡೋಲ್, ಅದ್ವೈತ್ ಎಡ್ಗಾಂವ್ಕರ್, ಮತ್ತು ಉಮಾ ರಾಮಕೃಷ್ಣನ್ – PLOS One, ೨೦೧೩

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು. 

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.