ಮೂಲ ಲೇಖಕರು: ಕೃತಿ ಕೆ. ಕಾರಂತ್, ಶಿವಾಂಗಿ ಜೈನ್ ಮತ್ತು ಡಿನ್ಸಿ ಮರಿಯಮ್
ಸಾರಾಂಶ: ಲೂಕ್ರೇಷಿಯಾ ಆಗಿಲಾರ್
ಅನುವಾದ: ಸೌರಭಾ ರಾವ್
ಈ ಲೇಖನ, ಪರಿಸರ ಪ್ರವಾಸೋದ್ಯಮ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ಮೂರನೆಯದು.
ಹುಲಿಗಳು ಪ್ರವಾಸದ ಬಹು ಪ್ರಖ್ಯಾತ ಆಕರ್ಷಣೆಗಳಲ್ಲೊಂದು. ಹುಲಿ ಅಭಯಾರಣ್ಯಗಳಿಗೆ ಬರುವ ಜನರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಬಿರುಸಾಗಿ ಏರಿದೆ. ಈ ಸಂಶೋಧನಾ ಲೇಖನದಲ್ಲಿ, ಒಂದು ದಶಕದುದ್ದಕ್ಕೂ ಇದ್ದ ಹುಲಿ ಪ್ರವಾಸೋದ್ಯಮದ ಪ್ರವೃತ್ತಿಗಳನ್ನು ಅಧ್ಯಯಿಸಿ, ಪ್ರವಾಸೋದ್ಯಮವು ಹುಲಿ ಸಂರಕ್ಷಣೆಗೆ ತೊಡಕಾಗದೆಯೇ ಹೇಗೆ ಪೂರಕವಾಗಬಹುದು ಎಂದು CWS ವಿಜ್ಞಾನಿಗಳು ವಿಚಾರ ಮಾಡಿದ್ದಾರೆ.
ದೇಶದ ಸಮೃದ್ಧ ನೈಸರ್ಗಿಕ ಬಳುವಳಿ ಮತ್ತು ಪ್ರವಾಸದ ಅನುಭವಗಳ ಮೇಲೆ ಹೆಚ್ಚುತ್ತಿರುವ ಹಣಹೂಡಿಕೆಯಿಂದಾಗಿ ವನ್ಯಜೀವಿ ಸಂಬಂಧಿತ ಪ್ರವಾಸೋದ್ಯಮ ಚುರುಕಾಗಿ ಬೆಳೆದಿದೆ. ಇದರಿಂದ ಒಂದು ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ: ಇಂಥ ಪ್ರವಾಸೋದ್ಯಮದಿಂದ ಆರ್ಥಿಕವಾಗಿ ಮತ್ತು ಸಂರಕ್ಷಣೆಗೆ ಪೂರಕವಾಗಿ ಅನುಕೂಲಗಳಾದರೂ, ಸರಿಯಾಗಿ ಕಾಯಿದೆಗಳನ್ನು ಮಾಡದಿದ್ದರೆ ಸ್ಥಳೀಯ ಜೀವವೈವಿಧ್ಯತೆ ಮತ್ತು ಸಮುದಾಯಗಳಿಗೆ ಅಪಾಯವಾಗುವ ಸಂಭವವೂ ಇದೆ. ಹೀಗಿದ್ದರೂ, ತ್ವರಿತವಾಗಿ ವ್ಯಾಪಕವಾಗುತ್ತಿರುವ ವನ್ಯಜೀವಿ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಕೆಲವೇ ಕೆಲವು ಶೋಧನೆಗಳು ನಡೆದಿವೆ.
ಈ ಅಂತರವನ್ನು ಭರ್ತಿಮಾಡಲು, ಹುಲಿ ಪ್ರವಾಸೋದ್ಯಮವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕೃತಿ ಕೆ. ಕಾರಂತ್, ಶಿವಾಂಗಿ ಜೈನ್ ಮತ್ತು ಡಿನ್ಸಿ ಮರಿಯಮ್ ಭಾರತದ ವನ್ಯಜೀವಿ ಪ್ರವಾಸೋದ್ಯಮದ ಧೋರಣೆಗಳನ್ನು ಪರಿಶೀಲಿಸಿದ್ದಾರೆ. ಭಾರತದ ೬೦೦ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿ ಅಭಯಾರಣ್ಯಗಳ ಸಂಖ್ಯೆ ಕೇವಲ ೪೯ ಇದ್ದರೂ, ೨೦೧೪ರಿಂದ ೨೦೧೫ರ ಸಾಲಿನಲ್ಲಿ ಈ ಅಭಯಾರಣ್ಯಗಳಿಗೇ ವನ್ಯಜೀವಿ ಪ್ರವಾಸೋದ್ಯಮಕ್ಕೆ ಬಂದ ಮೂರನೇ ಒಂದು ಭಾಗದಷ್ಟು ಜನ ಭೇಟಿ ನೀಡಿದ್ದಾರೆ.
೨೦೦೫ ಮತ್ತು ೨೦೧೫ರ ನಡುವಿನ ದಶಕದಲ್ಲಿ ವನ್ಯಜೀವಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿಕೊಟ್ಟ ಜನರ ಸಂಖ್ಯೆಯ ಸರಾಸರಿ ಹಿಂದೆಂದಿಗಿಂತಲೂ ಎರಡರಷ್ಟಿದೆ. ಹೀಗಿದ್ದರೂ, ಎಲ್ಲಾ ಪ್ರದೇಶಗಳ ನಡುವೆ ಈ ಸಂಖ್ಯೆಯ ಏರಿಕೆ ಸಮನಾಗಿಲ್ಲ. ೨೦೧೪ ಮತ್ತು ೨೦೧೫ರ ನಡುವೆ ಆಂಧ್ರ ಪ್ರದೇಶದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಒಂದು ಮಿಲಿಯನ್-ಗಿಂತಲೂ ಹೆಚ್ಚು ಜನ ಭೇಟಿ ನೀಡಿದ್ದರೂ, ಎಷ್ಟೋ ವನ್ಯಜೀವಿ ಧಾಮಗಳಿಗೆ ಯಾರೂ ಭೇಟಿ ನೀಡಿಲ್ಲ. ಕೆಲವು ಪ್ರದೇಶಗಳಲ್ಲಿ ಬರುವ ಜನರ ಸಂಖ್ಯೆ ಹಿಂದಿಗಿಂತ ಕಡಿಮೆಯಾದದ್ದೂ ಇದೆ.
ಆರ್ಥಿಕವಾಗಿಯೂ ಮತ್ತು ಭೌತಿಕವಾಗಿಯೂ ಈ ವನ್ಯಜೀವಿ ಪ್ರದೇಶಗಳಿಗೆ ಪ್ರವೇಶ ಸಾಧ್ಯತೆ ಸಾಕಷ್ಟು ವಿಭಿನ್ನವಾಗಿದೆ. ಈ ಪ್ರದೇಶಗಳಿಂದ ಹತ್ತಿರದ ನಗರ ಕೇಂದ್ರಗಳಿಗೆ ಇರುವ ಅಂತರವನ್ನು ಈ ಸಂಶೋಧಕರು ಅಭ್ಯಸಿಸಿದಾಗ ಅವುಗಳ ನಡುವಿನ ದೊಡ್ಡ ಹರಹು, ನಗರಗಳಿಂದ ೧.೫ ಕಿಲೋಮೀಟರಿನಷ್ಟು ಹತ್ತಿರದಿಂದ ಹಿಡಿದು ೮೧೯ ಕಿಲೋಮೀಟರಿನಷ್ಟು ದೂರ. ಪ್ರವೇಶಶುಲ್ಕವೂ ಈ ಪ್ರದೇಶಗಳ ನಡುವೆ ವಿಭಿನ್ನವಾಗಿವೆ. ಸಾಮಾನ್ಯವಾಗಿ ಹುಲಿ ಅಭಯಾರಣ್ಯಗಳು ಇತರ ಸಂರಕ್ಷಿತ ಪ್ರದೇಶಗಳಿಗಿಂತ ಹೆಚ್ಚು ಶುಲ್ಕ ವಿಧಿಸುತ್ತವೆ ಮತ್ತು ವಿದೇಶೀಯರು ದೇಶೀಯ ಪ್ರವಾಸಿಗರಿಗಿಂತ ಹೆಚ್ಚು ಪ್ರವೇಶ ಶುಲ್ಕ ನೀಡುತ್ತಾರೆ.
ಭಾರತದ ವನ್ಯಜೀವಿ ಪ್ರವಾಸೋದ್ಯಮದ ಧೋರಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧಕರು ಕೆಲವು ಎಚ್ಚರಿಕೆಗಳು ಮತ್ತು ಸಲಹೆಗಳನ್ನು ಸೂಚಿಸಿದ್ದಾರೆ. ಹೆಚ್ಚಾಗುತ್ತಿರುವ ಪ್ರವಾಸೋದ್ಯಮ ಸಂಚಾರ ಮತ್ತು ಸೌಕರ್ಯಗಳಿಂದಾಗುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸರಿಯಾದ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ವನ್ಯಜೀವಿ ಪ್ರವಾಸಿಗರಲ್ಲಿ ದೇಶೀಯರೇ ಹೆಚ್ಚು ಸಂಖ್ಯೆಯಲ್ಲಿರುವುದರಿಂದ, ವನ್ಯಜೀವಿ ಪ್ರವಾಸೋದ್ಯಮದ ಮೂಲಕ ಸಂರಕ್ಷಣೆಗೆ ಪೂರಕವಾಗುವಂತೆ ಭಾರತೀಯರಲ್ಲಿ ಜಾಗೃತಿ ಮೂಡಿಸಬಹುದು. ಆದರೆ, ದುಬಾರಿ ಪ್ರವೇಶ ಶುಲ್ಕ ಮತ್ತು ಕನಿಷ್ಠ ಆರ್ಥಿಕ ಲಾಭಗಳಿಂದ ಸ್ಥಳೀಯ ಸಮುದಾಯಗಳು ಅಸಮಾಧಾನಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಹುಲಿ ಅಭಯಾರಣ್ಯಗಳು ಹೆಚ್ಚಿನ ಪ್ರಮಾಣದ ಪ್ರವಾಸಿಗರನ್ನು ಆಕರ್ಷಿಸುವುದರಿಂದ, ಅವುಗಳಿಂದ ಬರುವ ಆದಾಯವನ್ನು ಇತರ ಕಡಿಮೆ ಜನಪ್ರಿಯ ಅಭಯಾರಣ್ಯಗಳಿಗೆ ಸಂರಕ್ಷಣಾ ಪ್ರಯತ್ನಗಳಿಗೆ ಸಮನಾಗಿ ಹಂಚಬಹುದು. ಕಡೆಯದಾಗಿ, ವನ್ಯಜೀವಿ ಪ್ರವಾಸೋದ್ಯಮದ ದೀರ್ಘಕಾಲಿಕ ಧೋರಣೆ, ಪ್ರವೃತ್ತಿಗಳನ್ನು ಅದರ ಭವಿಷ್ಯವನ್ನು ಪರಿಶೀಲಿಸಲು, ಮಾಹಿತಿ ಮತ್ತು ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕೆಂದು ಸಂಶೋಧಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರೇರೇಪಿಸಿದ್ದಾರೆ.
ಮೂಲ ಸಂಶೋಧನಾ ವರದಿ: ಭಾರತದ ವನ್ಯಜೀವಿ ಮತ್ತು ಹುಲಿ ಪ್ರವಾಸೋದ್ಯಮದಲ್ಲಿ ಹೊರಹೊಮ್ಮುತ್ತಿರುವ ಧೋರಣೆಗಳು – ಕೃತಿ ಕೆ. ಕಾರಂತ್, ಶಿವಾಂಗಿ ಜೈನ್, ಡಿನ್ಸಿ ಮರಿಯಮ್ – Nature Tourism, 2017
ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.