ಈ ಲೇಖನ ‘ವನ್ಯಜೀವಿಗಳ ಕಳ್ಳಬೇಟೆ’ ಎಂಬ ನಮ್ಮ ಲೇಖನ ಸರಣಿಯಲ್ಲಿ ಎರಡನೆಯದು.

ಲೇಖಕರು: ಅನುಷಾ ಚೌಧರಿ ಮತ್ತು ತ್ರಿಶಾಲಾ ಅಶೋಕ್
ಅನುವಾದ: ಸೌರಭಾ ರಾವ್

ಕಳೆದ ಶತಮಾನದವರೆಗೂ, ಭಾರತದ ಉಷ್ಣವಲಯದ ಕಾಡುಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಕಾಡುಪ್ರಾಣಿ-ಪಕ್ಷಿಗಳ ಹುಡುಕಾಟದಲ್ಲಿದ್ದ ಬಂದೂಕಗಳ ಸದ್ದುಗಳು ಅನುರಣಿಸುತ್ತಿದ್ದವು. ಪಾರಿತೋಷಕ ಬೇಟೆಯಿಂದ ಕಳ್ಳಬೇಟೆ ಮತ್ತು ದಂಧೆಯವರೆಗೂ, ವನ್ಯಜೀವಿ ಬೇಟೆ ಬೇರೆಬೇರೆ ರೂಪಗಳಲ್ಲಿ ನಡೆದುಕೊಂಡು ಬಂದಿದೆ. ಇದರಿಂದ ಅನೇಕ ಜಾತಿಯ ಪ್ರಾಣಿ ಹಾಗೂ ಪಕ್ಷಿ ಪ್ರಭೇದಗಳಿಗೆ ಅಪಾಯವುಂಟಾಗಿದೆ.

ಹಿಮಾಲಯ, ಈಶಾನ್ಯ ಪ್ರದೇಶ, ಪಶ್ಚಿಮ ಘಟ್ಟಗಳು, ಮತ್ತು ನಿಕೋಬಾರ್ ದ್ವೀಪಗಳ ಭೂಮಧ್ಯರೇಖೀಯ ಕಾಡುಗಳಂತಹ ಪ್ರತ್ಯೇಕ ಜೀವವೈವಿಧ್ಯ ಪ್ರದೇಶಗಳನ್ನು ಭಾರತ ಹೊಂದಿದೆ. ಪ್ರಪಂಚದ ಅರ್ಧದಷ್ಟು ಹುಲಿಗಳು, ಆರನೇ-ಹತ್ತರಷ್ಟು ಏಷಿಯಾಟಿಕ್ ಆನೆಗಳು, ಮತ್ತು ಏಳನೇ-ಹತ್ತರಷ್ಟು ಒಂದು-ಕೊಂಬಿನ ಘೇಂಡಾಮೃಗಗಳು ಭಾರತದಲ್ಲಿವೆ. ಹೀಗಾಗಿ, ಈ ಸಮೃದ್ಧ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಅಗತ್ಯ, ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಮನುಷ್ಯರ ಚಟುವಟಿಕೆಗಳಿಂದ ವನ್ಯಜೀವಿಗಳಿಗೆ ಉಂಟಾಗುವ ಅಪಾಯಗಳಲ್ಲಿ, ಮಾಂಸಕ್ಕಾಗಿ ಮತ್ತು ವಿವಿಧ ದೇಹದ ಭಾಗಗಳ ವ್ಯಾಪಾರಕ್ಕಾಗಿ ಅವುಗಳ ಕಳ್ಳಬೇಟೆ ಭಾರತ ಮತ್ತು ಪ್ರಪಂಚದ ಅನೇಕ ವನ್ಯಜೀವಿ ಪ್ರಭೇದಗಳಿಗಿರುವ ದೊಡ್ಡ ಸವಾಲು. ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಜೀವವಿಜ್ಞಾನಿಕ ಸವಾಲುಗಳಿಂದಾಗಿ ವನ್ಯಜೀವಿಗಳ ಮೇಲೆ ಕಳ್ಳಬೇಟೆಯ ಪರಿಣಾಮವನ್ನು ಕಡಿಮೆ ಮಾಡಲು ನಡೆಸುವ ಪ್ರಯತ್ನಗಳು ಸುಲಭವಲ್ಲ. ದಕ್ಷಿಣ ಅಮೇರಿಕಾ ಮತ್ತು ಆಫ್ರಿಕಾಗೆ ಹೋಲಿಸಿದರೆ, ವನ್ಯಜೀವಿಗಳ ಮೇಲೆ ಕಳ್ಳಬೇಟೆಯ ಅಪಾಯವಿರುವುದರ ಬಗ್ಗೆ ಮಾಹಿತಿ ದಾಖಲಾಗಿರುವುದು ಬಹಳ ಕಡಿಮೆ.

ಜೇಮ್ಸ್  ಕುಕ್ ವಿಶ್ವವಿದ್ಯಾಲಯ (ಆಸ್ಟ್ರೇಲಿಯಾ), ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ (ಭಾರತ), ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ (ಭಾರತ) ಮತ್ತು ಡ್ಯೂಕ್ ವಿಶ್ವವಿದ್ಯಾಲಯ (ಯುಎಸ್ಏ)ದ ವಿಜ್ಞಾನಿಗಳು ಭಾರತದಲ್ಲಿ ನಡೆದ ೧೪೩ ಅಧಿಕೃತ ಅಧ್ಯಯನಗಳನ್ನು ಪರಿಶೀಲಿಸಿದರು. ಅದರಲ್ಲಿ ಕೇವಲ ಶೇ. ೫.೬%ರಷ್ಟು ಮಾತ್ರ ಕಳ್ಳಬೇಟೆಯ ಪರಿಣಾಮಗಳನ್ನು ಅಳತೆಮಾಡಿವೆ ಎಂದು ತಿಳಿದುಬಂತು. ಬಹುತೇಕ ಅಧ್ಯಯನಗಳು ಗುಣಾತ್ಮಕ ಅಥವಾ ಆನುವಂಶಿಕ ಮತ್ತು ಅಣುಸಂಬಂಧಿ ಸಂಶೋಧನೆಗಳಾಗಿವೆ. ಅನೇಕ ಅಧ್ಯಯನಗಳು ದೊಡ್ಡ ಸಸ್ತನಿಗಳ ಮೇಲೆ ಕೇಂದ್ರೀಕೃತವಾಗಿದ್ದು, ಭಾರತದಲ್ಲಿ ೧೧೪ ಸಸ್ತನಿಗಳನ್ನು ಸಾಮಾನ್ಯವಾಗಿ ಬೇಟೆಯಾಡಲಾಗುತ್ತದೆ ಎಂದು ಈ ವಿಜ್ಞಾನಿಗಳ ಪರಿಶೀಲನೆಯಿಂದ ತಿಳಿದುಬಂದಿದೆ. ಸಣ್ಣಗಾತ್ರದ ಸಸ್ತನಿಗಳ ಮೇಲೆ ಕೇಂದ್ರೀಕೃತವಾದ ಸಂಶೋಧನೆಗಳು ಹೆಚ್ಚು ನಡೆಯಬೇಕು ಅಂದು ಈ ಅಧ್ಯಯನ ಎತ್ತಿತೋರಿಸಿದೆ. ಕೆಲವು ಹಕ್ಕಿಗಳು, ನೀರಿನ ಹಕ್ಕಿಗಳು ಮತ್ತು ಮಂಗಟ್ಟೆ ಮತ್ತು ಗ್ರೇಟ್ ಇಂಡಿಯನ್ ಬಸ್ಟರ್ಡ್-ನಂತಹ ದೊಡ್ಡಗಾತ್ರದ ಹಕ್ಕಿಗಳು ಕೂಡಾ ಕಳ್ಳಬೇಟೆಯಿಂದ ಅಪಾಯ ಎದುರಿಸುತ್ತಿವೆ ಎಂದು ಮತ್ತಷ್ಟು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಸಸ್ತನಿಗಳು ಮತ್ತು ಹಕ್ಕಿಗಳನ್ನು ಹೊರತುಪಡಿಸಿ, ವನ್ಯಜೀವಿ ಮಾಂಸ ಹಾಗೂ ದಂಧೆಯಿಂದಾಗಿ ಸರೀಸೃಪಗಳು ಮತ್ತು ಉಭಯಚರಿಗಳು ಕೂಡಾ ಅಪಾಯದಲ್ಲಿವೆ. ಪೂರ್ವ ಹಿಮಾಲಯ ಮತ್ತು ಭಾರತ-ಬರ್ಮಾ ಗಡಿಯ ಪ್ರದೇಶಗಳಲ್ಲಿ ಹೆಚ್ಚು ತೀವ್ರವಾದ ಮತ್ತು ನಿರಂತರ ಬೇಟೆಯ ವಿನ್ಯಾಸಗಳಿರುವುದು ಕಂಡುಬಂದಿದೆ. ಸಾಕುಪ್ರಾಣಿಗಳ ಮಾಂಸಜಾತೀಯ ಖಾದ್ಯ ಪದಾರ್ಥಗಳಿಗಿಂತ ವನ್ಯಜೀವಿ ಮಾಂಸದ ಮೇಲೆ ಒಲವು ಹೆಚ್ಚಿರುವುದು ಬೇಟೆಯ ಹಿಂದಿನ ಸಾಂಸ್ಕೃತಿಕ ಕಾರಣವಾಗಿರಬಹುದು. ಈ ಪ್ರದೇಶದಲ್ಲಿ ಬೇಟೆಗೆ ಸಂಬಂಧಿತ ಚಟುವಟಿಕೆಗಳು ಹೆಚ್ಚಾಗಿದ್ದು ಇತರ ಜೀವವೈವಿಧ್ಯ ಪ್ರದೇಶಗಳ ಜೊತೆಗೆ ಹೋಲಿಸಿದರೆ ಬೇಟೆಯ ಒತ್ತಡದಲ್ಲಿರುವ ಅಸಮಾನತೆಗಳು ಎದ್ದುಕಾಣುತ್ತವೆ.

೧೯೭೨ರ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಬೇಟೆಯನ್ನು ಕಾನೂನುಬಾಹಿರ ಎಂದು ಘೋಷಣೆ ಮಾಡಲಾಗಿದ್ದರೂ, ಭಾರತದ ಅನೇಕ ಭಾಗಗಳಲ್ಲಿ ಬೇಟೆ ಇನ್ನೂ ಪ್ರಚಲಿತವಾಗಿದೆ. ಇಂತಹ ಪದ್ಧತಿ-ಅಭ್ಯಾಸಗಳಿಂದ ಕಳೆದ ಕೆಲವು ದಶಕಗಳಲ್ಲಿ ಅನೇಕ ವನ್ಯಜೀವಿ ಸಂಖ್ಯೆಗಳು ಸ್ಥಳೀಯವಾಗಿ ಅವಸಾನಗೊಂಡಿವೆ. ಅತ್ಯಂತ ಅಪಾಯದಲ್ಲಿರುವ ಪ್ರಾಣಿಗಳನ್ನು ಗುರುತಿಸುವುದರಲ್ಲಿ ಈ ಅಧ್ಯಯನದ ವಿಜ್ಞಾನಿಗಳ ಪರಿಶೀಲನೆ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಐಯುಸಿಎನ್ ರೆಡ್ ಲಿಸ್ಟ್-ನ ಮಾಹಿತಿಗೆ ಹೊಂದಾಣಿಕೆಯಾಗುತ್ತದೆ. ಮೇಲಾಗಿ, ಹೊಸದಾಗಿ ಪತ್ತೆಹಚ್ಚಲಾದ ಪ್ರಾಣಿಗಳನ್ನು ಮತ್ತು ಅವುಗಳ ಸಂರಕ್ಷಣಾ ಸ್ಥಾನಮಾನವನ್ನು ವ್ಯವಸ್ಥಿತವಾಗಿ ದಾಖಲಿಸುವ ಅಗತ್ಯವಿದೆ ಎಂದು ಸಲಹೆ ನೀಡಲಾಗಿದೆ. ಈಗಿನ ಬದಲಾಗುತ್ತಿರುವ ಸಮಯಗಳಲ್ಲಿ ಭಾರತದ ವನ್ಯಜೀವಿಗಳ ಮೇಲೆ ಬೇಟೆಯ ಪರಿಣಾಮಗಳನ್ನು ಅಧ್ಯಯಿಸಲು ಪರಿಮಾಣಾತ್ಮಕ ಮತ್ತು ಗುಣಾತ್ಮಕ ಸಂಶೋಧನೆಗಳ ಅಗತ್ಯವಿದೆ ಎಂದು ಬೇಟೆಯ ಮೇಲೆ ನಡೆಸಿರುವ ಸಂಶೋಧನೆಗಳ ಮೇಲಿನ ಈ ಅಧ್ಯಯನ ಒತ್ತಿಹೇಳುತ್ತದೆ. ಇದರಿಂದ ಬೇಟೆಯ ಚಟುವಟಿಕೆಗಳನ್ನು ಸಮರ್ಥವಾಗಿ ಮೇಲ್ವಿಚಾರಣೆ ನಡೆಸಿ ಎದುರಿಸುವ ಮತ್ತು ಅದರಿಂದ ಭಾರತದ ವನ್ಯಜೀವಿಗಳ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಬಹಳಷ್ಟು ಹೆಚ್ಚಿಸುತ್ತದೆ.

ಮೂಲ ಸಂಶೋಧನಾ ವರದಿ

ಹಂಟಿಂಗ್: ಅ ಸೀರಿಯಸ್ ಅಂಡ್ ಅಂಡರ್-ಸ್ಟಡೀಡ್ ತ್ರೆಟ್ ಇನ್ ಇಂಡಿಯಾ, ಅ ಗ್ಲೋಬಲಿ ಸಿಗ್ನಿಫಿಕೆಂಟ್ ಕಾನ್ಸರ್ವೇಷನ್ ರೀಜನ್ – ನಂದಿನಿ ವೆಲ್ಹೋ, ಕೃತಿ ಕೆ. ಕಾರಂತ್, ವಿಲಿಯಂ ಎಫ್. ಲಾರೆನ್ಸ್  (Biological Conservation, 2020)

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು. 

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.