ಲೇಖಕರು: ಕೃತಿ ಕೆ. ಕಾರಂತ್
ಅನುವಾದ: ಸೌರಭಾ ರಾವ್
ಈ ಲೇಖನ, ಪರಿಸರ ಪ್ರವಾಸೋದ್ಯಮ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ಮೊದಲನೆಯದು.
ವನ್ಯಜೀವಿ ಅಥವಾ ಪರಿಸರ ಪ್ರವಾಸೋದ್ಯಮ ಭಾರತವನ್ನು ಒಳಗೊಂಡಂತೆ ಜಗತ್ತಿನ ನಾನಾ ದೇಶಗಳಲ್ಲಿ ಬೆಳೆಯುತ್ತಿದೆ. ಭಾರತದ ೧೦ ವನ್ಯಜೀವಿ ಅಭಯಾರಣ್ಯಗಳ ಸುತ್ತಮುತ್ತಲಿನ ರೆಸಾರ್ಟುಗಳು ಮತ್ತು ಹೋಂಸ್ಟೇಗಳನ್ನು ಪರಿಶೀಲಿಸಿದ ನಂತರ CWS ಮತ್ತು ಕೊಲಂಬಿಯಾ ಯೂನಿವರ್ಸಿಟಿಯ ವಿಜ್ಞಾನಿಗಳು, ಈ ಅಭಯಾರಣ್ಯಗಳು, ವನ್ಯಜೀವಿಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ನಿಜವಾಗಿಯೂ ಅನುಕೂಲವಾಗಬೇಕಾದರೆ, ಹೆಚ್ಚಿನ ನಿಬಂಧನೆ ಮತ್ತು ಪ್ರವಾಸಿಗರಿಗೆ ಪ್ರವಾಸೋದ್ಯಮ ಶಿಕ್ಷಣದ ತುರ್ತು ಅಗತ್ಯವಿದೆ ಎಂದು ಅಧ್ಯಯಿಸಿದ್ದಾರೆ.
ಪರಿಸರ-ಆಧಾರಿತ ಪ್ರವಾಸೋದ್ಯಮ ನೈಸರ್ಗಿಕ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಅಭಯಾರಣ್ಯಗಳಿಗೆ ಪ್ರವಾಸ, ಕಾಲ್ನಡಿಗೆ (ಹೈಕಿಂಗ್), ಪ್ರಾಕೃತಿಕ ಸ್ಥಳಗಳಲ್ಲಿ ಡೇರೆ ಹಾಕುವುದು (ಕ್ಯಾಂಪಿಂಗ್), ಪಕ್ಷಿವೀಕ್ಷಣೆ, ಮತ್ತು ಸ್ಕೂಬಾ ಡೈವಿಂಗ್. ಭಾರತದಲ್ಲಿ, ಇದು ಅತೀ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಪ್ರತಿ ವರ್ಷ ಅಭಯಾರಣ್ಯಗಳಿಗೆ ಜನರ ಭೇಟಿ ಹೆಚ್ಚುತ್ತಲೇ ಇದೆ. ಇಂಥ ಪ್ರವಾಸೋದ್ಯಮದಿಂದ ಹೆಚ್ಚಿನ ಹಣ ಉತ್ಪಾದನೆಯಾಗುವುದರಿಂದ ಸಂರಕ್ಷಣೆಗೆ ಮತ್ತು ಸ್ಥಳೀಯ ಆರ್ಥಿಕ ವ್ಯವಸ್ಥೆಗೆ ಮಹತ್ವಪೂರ್ಣವಾದದ್ದು ಎಂಬ ನಂಬಿಕೆ ವ್ಯಾಪಕವಾಗಿದ್ದರೂ, ಇದು ಯಾವಾಗಲೂ ನಿಜವಾದ ಪದ್ಧತಿಯಲ್ಲ.
CWSನ ಡಾ।। ಕೃತಿ ಕೆ. ಕಾರಂತ್ ಮತ್ತು ಕೊಲಂಬಿಯಾ ಯೂನಿವರ್ಸಿಟಿಯ ಡಾ।। ರೂಥ್ ಡೆಫ್ರೈಸ್ ಪ್ರಸ್ತುತ ಚಾಲ್ತಿಯಲ್ಲಿರುವ ವನ್ಯಜೀವಿ ಪ್ರವಾಸೋದ್ಯಮದ ವಿವಿಧ ಮಜಲುಗಳನ್ನು ಅರ್ಥ ಮಾಡಿಕೊಳ್ಳಲು, ರಣತಂಭೋರ್, ಸಾರಿಸ್ಕಾ, ಪೇನ್ಚ್, ಕಾನ್ಹಾ, ಮತ್ತು ನಾಗರಹೊಳೆ ಸೇರಿದಂತೆ ಭಾರತದ ೧೦ ಅಭಯಾರಣ್ಯಗಳ ಸುತ್ತಲಿನ ಪ್ರವಾಸಿಗರ ರೆಸಾರ್ಟುಗಳು, ಹೋಂಸ್ಟೇಗಳು, ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯವರನ್ನು ಸಂದರ್ಶಿಸಿದ್ದಾರೆ.
ಅವರಿಗೆ ತಿಳಿದ ಅಂಶವೆಂದರೆ, ಈ ಆಯ್ದ ಅಭಯಾರಣ್ಯಗಳಲ್ಲಿ ಸರಾಸರಿ ೧೫% ಪ್ರಮಾಣದಲ್ಲಿ ವನ್ಯಜೀವಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಪ್ರವಾಸಿಗರ ಸಂಖ್ಯೆ ‘ಭದ್ರಾ’ ಅಭಯಾರಣ್ಯದಲ್ಲಿ ಸುಮಾರು ೫೦೦೦ದಿಂದ ಹಿಡಿದು ‘ಪೆರಿಯಾರ್’ನಲ್ಲಿ ೫,೦೦,೦೦೦ವರೆಗೂ ಇದೆ. ಇದರಲ್ಲಿ ಬಹುಪಾಲು (೮೦%) ಭಾರತೀಯರೇ ಆಗಿರುವುದರಿಂದ ಅವರಲ್ಲಿ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮಹತ್ತರ ಅವಕಾಶವಿದೆ.
ರೆಸಾರ್ಟ್ ಮತ್ತು ಹೋಂಸ್ಟೇಗಳಂಥ ಸೌಲಭ್ಯಗಳು ಬಹುತೇಕ ಇತ್ತೀಚಿನ ಮತ್ತು ಖಾಸಗಿ ಒಡೆತನದ್ದಾಗಿವೆ – ೨೦೦೦ ಇಸವಿಯ ನಂತರ ೭೨% ಪ್ರವಾಸಿಗರ ಸೌಲಭ್ಯ ಪ್ರಾರಂಭವಾಗಿದ್ದು, ಅವುಗಳಲ್ಲಿ ೮೫% ಅಭಯಾರಣ್ಯಗಳ ಗಡಿಯಿಂದ ೫ ಕಿಲೋಮೀಟರ್ ವ್ಯಾಪ್ತಿಯ ಒಳಗೇ ಇವೆ. ಪೆರಿಯಾರ್, ರಣತಂಭೋರ್, ಕಾನ್ಹಾ ಮತ್ತು ಪೇನ್ಚ್ ಅಭಯಾರಣ್ಯಗಳ ಸುತ್ತ ಈ ಸೌಲಭ್ಯಗಳು ಗುಂಪುಗುಂಪಾಗಿವೆ, ಇದರಿಂದ ಸ್ಥಳೀಯ ಸಮುದಾಯಗಳ ನಿರ್ವಹಣೆ ಮತ್ತು ಪ್ರವಾಸ ಪದ್ಧತಿಗಳನ್ನು ನಿರ್ವಹಿಸುವುದು ಸುಲಭವಾಗಬಹುದು.
ಪ್ರವಾಸಿ ಸೌಲಭ್ಯಗಳು ನೀರು ಮತ್ತು ಕಟ್ಟಿಗೆಗಳಂಥ ಸ್ಥಳೀಯ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸುತ್ತವೆ. ರಣತಂಭೋರ್, ಕಾನ್ಹಾ ಮತ್ತು ಪೇನ್ಚ್ ಅಭಯಾರಣ್ಯಗಳಲ್ಲಿ ಬೇಸಿಗೆಯಲ್ಲಿ ನೀರಿನ ವಿಪರೀತ ಕೊರತೆಯಿದ್ದರೂ ಪ್ರವಾಸಿ ಸೌಲಭ್ಯಗಳಲ್ಲಿ ಸದಾ ತುಂಬಿರುವ ನೀರಿನ ಚಿಲುಮೆಗಳು ಮತ್ತು ಈಜುಕೊಳಗಳಿದ್ದವು. ಸ್ಥಳೀಯ ಜನರಿಗೆ ಇಂಥ ಜಾಗಗಳಲ್ಲಿ ಉದ್ಯೋಗಾವಕಾಶ ಕೊಟ್ಟರೂ, ಕೆಲಸಗಳು ಋತುಕಾಲಿಕವಾಗಿದ್ದು ಇದರಿಂದ ನೇರವಾದ ಲಾಭ ಪಡೆಯುವವರ ಸಂಖ್ಯೆ ತೀರಾ ಕಡಿಮೆ.
ಅಭಯಾರಣ್ಯಗಳ ಹೊರಗಿನ ನೆಲದ ಬಳಕೆ ತೀವ್ರಗತಿಯಲ್ಲಿ ಬದಲಾಗುತ್ತಿದೆ. ಅದು ಹೊರಗಿನವರಿಂದ ಪ್ರವಾಸಿ ಸೌಲಭ್ಯಗಳನ್ನು ಕಟ್ಟಲು ಖರೀದಿಗೊಳ್ಳುತ್ತಿದ್ದು, ಅಲ್ಲಿನ ದರ ಅಷ್ಟೇ ತೀವ್ರಗತಿಯಲ್ಲಿ ದುಬಾರಿಯಾಗುತ್ತಿದೆ. ಕೆಲವು ಅಭಯಾರಣ್ಯಗಳ ಸುತ್ತ, ಗೋಡೆ ಮತ್ತು ಇಂತಹ ಸೌಲಭ್ಯಗಳ ನಿರ್ಮಾಣದಿಂದ ವನ್ಯಜೀವಿ ಸಂಚಾರಕ್ಕೆ ಅಡೆತಡೆಗಳಾಗುತ್ತಿದೆ. ಸ್ಥಳೀಯ ಜನ ಹೊರಗಿನವರಿಗೆ ತಮ್ಮ ಜಾಗಗಳನ್ನು ಮಾರಿ ಕಾಡಿನಿಂದ ದೂರ ಸರಿಯುತ್ತಿದ್ದಾರೆ.
ಬೇರೆ ಬೇರೆ ಅಭಯಾರಣ್ಯಗಳಲ್ಲಿ ಬೇರೆ ಬೇರೆ ನಿರ್ವಹಣಾ ಪದ್ಧತಿಗಳಿರುತ್ತವೆ. ಕೆಲವುಗಳಲ್ಲಿ, ಕೇವಲ ಅರಣ್ಯ ಇಲಾಖೆಯ ವಾಹನಗಳನ್ನು ಒಳಗೆ ಬಿಟ್ಟರೆ ಮತ್ತೆ ಕೆಲವಲ್ಲಿ ಖಾಸಗಿ ವಾಹನಗಳನ್ನೂ ಬಿಡಲಾಗುತ್ತದೆ. ಇದರಿಂದಾಗಿ ಕಾಡುಗಳಲ್ಲಿ ವಾಹನ ಸಂಚಾರವೂ ಹೆಚ್ಚಾಗಿದೆ. ಉದಾಹರಣೆಗೆ, ೨೦೦೭-೨೦೦೮ರಲ್ಲಿ ಕಾನ್ಹಾ ಒಂದರಲ್ಲೇ ೨೭,೦೦೦ ವಾಹನಗಳು ಹೋಗಿದ್ದು, ಪ್ರವಾಸೋದ್ಯಮ ಮಾರ್ಗಗಳೂ ಉದ್ದವಾಗಿವೆ (ಕಾನ್ಹಾದಲ್ಲಿ ೨೨೦೦ ಕಿಲೋಮೀಟರ್). ಪ್ರಸ್ತುತ ನಿಬಂಧನೆಗಳು ಮತ್ತು ಸಲಹಾಸೂತ್ರಗಳು ಪ್ರವಾಸೋದ್ಯಮ, ನೆಲ ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುವುದರಲ್ಲಿ ಅಸಮರ್ಪಕವಾಗಿದ್ದು, ಭಾರತದ ಎಲ್ಲ ಅಭಯಾರಣ್ಯಗಳಲ್ಲಿ ಹೊಂದಿಕೆಯಾಗಬೇಕಿದೆ.
ಪ್ರವಾಸೋದ್ಯಮ ಹೆಚ್ಚಾಗಲು, ಹೆಚ್ಚುತ್ತಿರುವ ವನ್ಯಜೀವಿ ಕಾಣಿಸಿಕೊಳ್ಳುವಿಕೆ, ಹೆಚ್ಚುತ್ತಿರುವ ಪ್ರಚಾರ ಮತ್ತು ವ್ಯಾಪಾರೋದ್ಯಮ, ನಗರಗಳಿಗೆ ಹೆಚ್ಚುತ್ತಿರುವ ಸಂಚಾರ ವ್ಯವಸ್ಥೆ, ಮತ್ತು ಪ್ರವಾಸೋದ್ಯಮ ಚಟುವಟಿಕೆ ಮತ್ತು ಸೌಲಭ್ಯಗಳಲ್ಲಿ ಗುಣಮಟ್ಟದ ಏರಿಕೆ, ಇವೆಲ್ಲವೂ ಪ್ರವಾಸೋದ್ಯಮದ ಬೆಳವಣಿಗೆಗೆ ಕೊಡುಗೆ ನೀಡಿವೆ. ಇದಕ್ಕೆ ಪೂರಕವಾಗಿ, ಹುಲಿಗಳನ್ನು ನೋಡುವ ಅವಕಾಶ ಪ್ರವಾಸಿಗರಿಗೆ ಒಂದು ದೊಡ್ಡ ಪ್ರೇರಣೆಯಾಗಿದೆ.
ಅವ್ಯವಸ್ಥಿತ ಪ್ರವಾಸೋದ್ಯಮ, ಈಗಾಗಲೇ ಇರುವ ಸಂರಕ್ಷಣಾ ಸವಾಲುಗಳಿಗೆ ಮತ್ತಷ್ಟು ನಕಾರಾತ್ಮಕ ಕೊಡುಗೆ ನೀಡುತ್ತದೆ, ಮತ್ತು ಕೆಲವೇ ಕೆಲವು ವ್ಯಕ್ತಿಗಳಿಗೆ ಇದರಿಂದ ಲಾಭವಾಗುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ವನ್ಯಜೀವಿ ಪ್ರವಾಸೋದ್ಯಮದಿಂದ ಗ್ರಾಮೀಣ ಮತ್ತು ನಗರ ಭಾರತೀಯರೆಲ್ಲರಲ್ಲೂ ಸಂರಕ್ಷಣಾ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಮುಖ್ಯ ಅವಕಾಶ ಸಿಗುತ್ತದೆ, ಮತ್ತು ಕೆಲವು ಅಭಯಾರಣ್ಯಗಳಿಗೆ ಸಾಕಷ್ಟು ಆದಾಯವನ್ನೂ ತಂದುಕೊಡುತ್ತದೆ. ಹೀಗಿದ್ದರೂ, ಪ್ರವಾಸೋದ್ಯಮವನ್ನು ಪ್ರಸ್ತುತ ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ. ಭಾರತದ ಅಭಯಾರಣ್ಯಗಳಲ್ಲಿ ಅತ್ಯುತ್ತಮ ಪದ್ಧತಿಗಳ ಸಲಹಾಸೂತ್ರಗಳು ಮತ್ತು ನಿಬಂಧನೆಗಳು ಇವೆರಡನ್ನೂ ಬಳಸಿ ಪ್ರವಾಸಿಗರನ್ನು, ಪ್ರವಾಸ ಸೌಲಭ್ಯಗಳನ್ನು, ನೆಲ, ನೀರು ಮತ್ತು ಇತರ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ತುರ್ತು ಅಗತ್ಯವಿದೆ.
ಸಂಶೋಧನಾ ವರದಿ: ಭಾರತದ ಅಭಯಾರಣ್ಯಗಳಲ್ಲಿ ನಿಸರ್ಗ-ಆಧಾರಿತ ಪ್ರವಾಸೋದ್ಯಮ: ಅಭಯಾರಣ್ಯ ನಿರ್ವಹಣೆಗೆ ಹೊಸ ಸವಾಲುಗಳು – ಕೃತಿ ಕೆ. ಕಾರಂತ್, ರೂಥ್ ಡೆಫ್ರೈಸ್ – Conservation Letters, 2010
ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಲೇಖನ ಈ ಹಿಂದೆ ‘ಕಾನ್ಸರ್ವೇಶನ್ ಇಂಡಿಯಾ’ (Conservation India)ದಲ್ಲಿ ಪ್ರಕಟವಾಗಿತ್ತು. ಅದನ್ನು ಇಲ್ಲಿ ಓದಬಹುದು.