ಲೇಖಕರು: ಕೃತಿಕಾ ಸಂಪತ್
ಅನುವಾದ: ಸೌರಭಾ ರಾವ್

ಈ ಲೇಖನ, ಮನುಷ್ಯ-ಚಿರತೆಗಳ ನಡುವಿನ ಪರಸ್ಪರ ಪರಿಣಾಮ ಎಂಬ ವಿಜ್ಞಾನ-ಲೇಖನ ಸರಣಿಯಲ್ಲಿ ಮೊದಲನೆಯದು.

ದೊಡ್ಡ ಮಾರ್ಜಾಲಗಳು ಅತ್ಯಂತ ಪ್ರಭಾವಶಾಲಿ ಪ್ರಾಣಿಗಳೆಂದರೆ ಅತಿಶಯೋಕ್ತಿಯಲ್ಲ. ಪರಿಸರವ್ಯವಸ್ಥೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಅವುಗಳ ಪಾತ್ರ ಮಹತ್ವದ್ದು. ಆದರೂ, ಮಾನವ ಚರಿತ್ರೆಯಲ್ಲಿ ಈ ಮಾರ್ಜಾಲಗಳ ಜೊತೆಗಿನ ಸಂಬಂಧ ಹೆಚ್ಚಾಗಿ ಬೇಟೆಯಿಂದಲೇ ಬೆಸೆದುಕೊಂಡಿದೆ. ಒಂದು ಕಡೆ, ಚಿರತೆ ದಾಳಿಯಿಂದ ಜಾನುವಾರು ಮತ್ತು/ಅಥವಾ ಜನರಿಗೆ ಉಂಟಾಗುವ ನಷ್ಟ ಒಮ್ಮೊಮ್ಮೆ ಪ್ರಾಣಾಂತಿಕವೂ ಆಗಬಹುದು. ಇನ್ನೊಂದು ಕಡೆ, ನಷ್ಟ ತರುವ ಹತಾಶೆ ಮತ್ತು ಕೋಪದಿಂದಾಗಿ ಜನರೂ ಅವುಗಳ ಮೇಲೆ ಪ್ರತೀಕಾರಕ್ಕಾಗಿ ಕಾಯುವ ಸಾಧ್ಯತೆ ಹೆಚ್ಚು. ಇಂತಹ ಪರಸ್ಪರ ನಕಾರಾತ್ಮಕ ಪ್ರತಿಕ್ರಿಯೆಗಳಿಂದಾಗಿ ಜನರು ಮಾಂಸಾಹಾರಿ ಪ್ರಾಣಿಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ.

ಶೇ. ೬೫ರಷ್ಟು ಭಾರತದ ಭೂಪ್ರದೇಶ ೧೨,೦೦೦ ಚಿರತೆಗಳ ಅಸ್ತಿತ್ವಕ್ಕೆ ಆಧಾರವಾಗಿದೆ. ಹೀಗಾಗಿ, ಚಿರತೆಯ ಇರುವಿಕೆಯ ಪ್ರದೇಶಗಳ ಸುತ್ತ ಇರುವ ಮನುಷ್ಯರ ವಾಸಸ್ಥಳಗಳಲ್ಲಿ ಸಂಘರ್ಷಣೆಯ ಇರುವಿಕೆಯೂ ಸಾಮಾನ್ಯವಾಗಿದೆ. ಚಿರತೆ ಮತ್ತು ಮನುಷ್ಯರ ನಡುವಿನ ಸಂಘರ್ಷದಿಂದ ನಕಾರಾತ್ಮಕ ಪ್ರಭಾವ ಬೀರಿದಾಗ ಭಾರೀ ಆರ್ಥಿಕ ನಷ್ಟಗಳಾವುದುಂಟು. ರೈತರು ಪದೇ ಪದೇ ಬೇಲಿ, ಬೆದರು ಬೊಂಬೆಗಳಂತಹ, ಬೇಟೆಪ್ರಾಣಿಗಳಿಂದ ರಕ್ಷಣೆ ಹೊಂದುವಂತಹ ವ್ಯವಸ್ಥೆಗಳ ಮೇಲೆ ಹಣ ಹೂಡಬೇಕಾಗುತ್ತದೆ. ಇದರ ಜೊತೆಗೆ ಸರ್ಕಾರ, ವನ್ಯಜೀವಿ ನಿರ್ವಹಣಾಧಿಕಾರಿಗಳು ಮತ್ತು ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಹಾಗೂ ವ್ಯಕ್ತಿಗಳೂ ಸಂಘರ್ಷ-ಪೂರ್ವ ಮತ್ತು ಸಂಘರ್ಷದ ನಂತರದ ಪರಿಹಾರ ಕಾರ್ಯಗಳಿಗೆ ಹಣಕಾಸಿನ ಸಹಾಯ ಮಾಡಬೇಕಾಗುತ್ತದೆ.

indian leopard


ಜಾನುವಾರು ಮೇಲಿನ ಚಿರತೆಯ ದಾಳಿಯನ್ನು ಯಾವ ಯಾವ ಅಂಶಗಳು ಬಾಧಿಸುತ್ತವೆ? ಕಾಡಿನಲ್ಲಿ ಸಸ್ಯಾಹಾರಿ ಪ್ರಾಣಿಗಳ ಇರುವಿಕೆ ಜಾನುವಾರು ಮೇಲಿನ ಚಿರತೆಯ ದಾಳಿಯ ಮೇಲೆ ಯಾವ ಪರಿಣಾಮ ಬೀರುತ್ತದೆ? ಮನುಷ್ಯ, ಚಿರತೆ ಮತ್ತು ಬಲಿಪ್ರಾಣಿಗಳ ನಡುವಿನ ಸಂಬಂಧದ ಇಂತಹ ಸಂಕೀರ್ಣ ವಿವರಗಳನ್ನು ಸಂಶೋಧಕರಾದ ಮಾಹೀ ಪುರಿ, ಅರ್ಜುನ್ ಶ್ರೀವತ್ಸ, ಡಾ।। ಕೃತಿ ಕೆ. ಕಾರಂತ್, ಇಮ್ರಾನ್ ಪಟೇಲ್ ಮತ್ತು ಡಾ।। ಸಾಂಬ ಕುಮಾರ್ ಪರಿಗಣಿಸಿ, ಚಿರತೆಗಳ ಹರಡುವಿಕೆ, ಅವುಗಳ ಆಹಾರ ಮತ್ತು ಮಧ್ಯ ಪ್ರದೇಶದಲ್ಲಿ ಸಂಘರ್ಷಣೆಯನ್ನು ಹುಟ್ಟುಹಾಕುವ ಅಂಶಗಳಾವುವು ಎಂದು ಅಧ್ಯಯಿಸಿದ್ದಾರೆ.

indian leopard prey indian wildlife


ಮಧ್ಯ ಪ್ರದೇಶದ ಕಾನ್ಹಾ-ಪೆಂಚ್ ಕಾಡಿನ ಪ್ರದೇಶದ ೧೦,೦೦೦ ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಅಧ್ಯಯನ ನಡೆಸಲಾಗಿದೆ. ಈ ಕಾಡುಗಳ ಸುತ್ತಮುತ್ತ ಸುಮಾರು ೪೦೦ ವಾಸಸ್ಥಳಗಳಲ್ಲಿ ೩.೫ ಲಕ್ಷದಷ್ಟು ಜನ ವಾಸಿಸುತ್ತಿದ್ದಾರೆ. ಅಲ್ಲಿನ ಸ್ಥಳೀಯ ಆರ್ಥಿಕ ವ್ಯವಸ್ಥೆಗೆ ಮೂಲ ಕೃಷಿಯಾಗಿದ್ದರೂ, ಜನ ಸೌದೆಗಾಗಿ, ಇತರ ಉತ್ಪನ್ನಗಳಿಗಾಗಿ, ಮತ್ತು ತಮ್ಮ ಸಾಕುಪ್ರಾಣಿಗಳನ್ನು ಮಾಯಿಸುವುದಕ್ಕಾಗಿ ಕಾಡಿನ ಮೇಲೆ ಅವಲಂಬಿತರಾಗಿದ್ದಾರೆ. ಶೇ. ೯೦ಕ್ಕೂ ಹೆಚ್ಚು ಕಾಡಿನ ಸಸ್ಯಾಹಾರಿ ಪ್ರಾಣಿಗಳೇ ಚಿರತೆಗಳ ಆಹಾರ ಪದ್ಧತಿಯ ಭಾಗವಾಗಿದ್ದು, ಜಾನುವಾರು ಮತ್ತು ನಾಯಿಗಳ ಮೇಲೆ ಅವು ಆಹಾರಕ್ಕಾಗಿ ಅವಲಂಬಿತವಾಗಿರುವುದು ಕೇವಲ ಶೇ. ೩ರಷ್ಟು. ಬುಕ್ಕಾ (ಲಂಗೂರ್) ಚಿರತೆಗಳ ಆಹಾರದಲ್ಲಿ ದೊಡ್ಡ ಭಾಗವಾಗಿರುವುದು ಅಧ್ಯಯನದಲ್ಲಿ ಕಂಡುಬಂದ ಆಶ್ಚರ್ಯಕರವಾದ ಅಂಶ. ಇವೇ ಕಾಡುಗಳು, ಹುಲಿ, ಚಿರತೆ, ಕರಡಿ, ಕೆನ್ನಾಯಿ, ತೋಳ, ಗುಳ್ಳೆನರಿ, ನರಿ, ಮತ್ತು ಕತ್ತೆಕಿರುಬಗಳಂತಹ ಮಾಂಸಾಹಾರಿ ಪ್ರಾಣಿಗಳಿಗೂ ಆವಾಸಸ್ಥಾನವಾಗಿರುವುದರಿಂದ ಬಲಿಪ್ರಾಣಿಗಳಿಗಾಗಿ ಪೈಪೋಟಿ ಇದಕ್ಕೆ ಕಾರಣವಿರಬಹುದು.

langur indian wildlife leopard prey

ಹೆಚ್ಚಿದ ಜನಸಂಖ್ಯೆ ಮತ್ತು ಅರಣ್ಯ ಪ್ರದೇಶವನ್ನು ಕೃಷಿಭೂಮಿಯನ್ನಾಗಿ ಪರಿವರ್ತಿಸಿದಾಗ ಕಾಡಿನ ಬಲಿಪ್ರಾಣಿಗಳ ಸಂಖ್ಯೆಗೆ ಏನಾಗಬಹುದು? ಈ ಅಧ್ಯಯನ ನಡೆದ ಸಮಯದಲ್ಲಿ ಶೇ. ೮೦ಕ್ಕೂ ಹೆಚ್ಚು ಜನರ ಜಾನುವಾರುಗಳ ಮೇಲೆ ಚಿರತೆ ದಾಳಿಯಾಗಿರುವ ದಾಖಲೆಯಿದೆ. ಇದ್ದುದರಲ್ಲೇ ಹೆಚ್ಚು ಸಂಪರ್ಕವಿಲ್ಲದ ಮನುಷ್ಯರ ಆವಾಸಸ್ಥಳು ಚಿರತೆ ದಾಳಿಗಳಿಗೆ ಬಹು ದೊಡ್ಡ ಕಾರಣವಾಗಿದ್ದರೂ, ಕಾಡಿನ ಬಲಿಪ್ರಾಣಿಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾದರೂ, ಜಾನುವಾರು ಮೇಲಿನ ಚಿರತೆ ದಾಳಿ (ಈಗಿರುವ ಚಿರತೆಗಳ ಸಂಖ್ಯೆಯನ್ನು ಪೋಷಿಸಲು) ಶೇ. ೩ರಿಂದ ಶೇ. ೪೦ರವರೆಗೂ ಏರಬಹುದೆಂದು ಅಧ್ಯಯನಕಾರರು ಅಂದಾಜು ಮಾಡಿದ್ದಾರೆ!

indian leopard prey cattle cows livestock


ಚಿರತೆಗಳು ಬೇರೆ ಬೇರೆ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುತ್ತವೆ. ಮನುಷ್ಯರಿಂದ ಮಾರ್ಪಾಡಾಗಿರುವ ಭೂಪ್ರದೇಶಗಳಿಗೂ ಒಗ್ಗಿಕೊಳ್ಳುವುದು ದೊಡ್ಡ ಬೆಕ್ಕಿನ ಜಾತಿಯಲ್ಲಿ ಬಹುಷಃ ಚಿರತೆ ಒಂದೇ. ಈ ಅಧ್ಯಯನ ನಡೆದ ಪ್ರದೇಶದಲ್ಲಿ, ಸಾಕಷ್ಟು ಅರಣ್ಯ ವಿಸ್ತಾರ ಮತ್ತು ಕಾಡಿನ ಬಲಿಪ್ರಾಣಿಗಳ ಸಮೃದ್ಧಿ ಚಿರತೆಗಳ ಇರುವಿಕೆಗೆ ಪೂರಕವಾಗಿದ್ದವು. ಚಿರತೆ ಮತ್ತು ಬಲಿಪ್ರಾಣಿಗಳ ಅಸಮತೋಲನವಿದ್ದ ಪರಿಸರವ್ಯವಸ್ಥಾಗಳಲ್ಲಿ, ಚಿರತೆಗಳ ಸಂಖ್ಯೆಯ ಇಳಿಮುಖದಿಂದಾಗಿ ರೈತರ ಬೆಳೆನಾಶ ಕಾಡಿನ ಸಸ್ಯಾಹಾರಿ ಪ್ರಾಣಿಗಳಿಂದಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಕಾಡಿನ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಕಡಿಮೆಯಾದಲ್ಲಿ ಜಾನುವಾರುಗಳ ಮೇಲೆ ಚಿರತೆಗಳ ದಾಳಿ ಜಾಸ್ತಿಯಾಗುತ್ತದೆ. ಹೀಗಾಗಿ ಚಿರತೆ ಮತ್ತು ಕಾಡಿನ ಬಲಿಪ್ರಾಣಿಗಳ ಸಂಖ್ಯೆಗಳ ನಡುವೆ ಸಮತೋಲನವಿದ್ದಲ್ಲಿ ಕಾಡಿನ ಬಳಿ ವಾಸಿಸುವ ಜನರಿಗೆ ಆರ್ಥಿಕ ಅನುಕೂಲವಿರುತ್ತದೆ. ಆದರೆ ಅದಕ್ಕಾಗಿ ದಕ್ಷ ಅರಣ್ಯ ನಿರ್ವಹಣಾ ಕ್ರಮಗಳು ಮತ್ತು ವ್ಯವಸ್ಥೆಗಳು ಮಾಂಸಾಹಾರಿ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಸಕಾರಾತ್ಮಕವಾಗಿರುವಂತೆ ಪೋಷಿಸಬೇಕಿದೆ.

ಮೂಲ ಸಂಶೋಧನಾ ವರದಿ: ಸಮತೋಲನ ಕಾಯ್ದುಕೊಳ್ಳುವ ಕೆಲಸ: ಚಿರತೆ-ಬಲಿಪ್ರಾಣಿಗಳ ಸಮತೋಲನ ಕಾಪಾಡುವುದರಿಂದ ಮಧ್ಯಭಾರತದ ಕಾಡುಗಳ ಸುತ್ತಮುತ್ತ ವಾಸಿಸುವ ಜನರಿಗೆ ಆರ್ಥಿಕ ಅನುಕೂಲಗಳಾಗುತ್ತವೆ – ಮಾಹೀ ಪುರಿ, ಅರ್ಜುನ್ ಶ್ರೀವತ್ಸ, ಡಾ।। ಕೃತಿ ಕೆ. ಕಾರಂತ್, ಇಮ್ರಾನ್ ಪಟೇಲ್ ಮತ್ತು ಡಾ।। ಏನ್. ಸಾಂಬ ಕುಮಾರ್ ಎಕಾಲಾಜಿಕಲ್ ಇಂಡಿಕೇಟರ್ಸ್ (Ecological Indicators)

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು. 

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.