ಲೇಖಕರು: ಸಲೋನಿ ಬಸ್ರೂರು
ಅನುವಾದ: ಸೌರಭಾ ರಾವ್

ಈ ಲೇಖನ, ‘ಕ್ಲಾಸಿಕ್ಸ್’ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ಮೊದಲನೆಯದು.

ಅಚ್ಚ ಕಪ್ಪು ಕೂದಲಿನ ದೇಹ ಮತ್ತು ಮುಖದ ಸುತ್ತ ಸಿಂಹದಂತೆ ಬೂದುಬಣ್ಣದ ಕೇಸರ ಇರುವ ಸಿಂಗಲೀಕ (ಲಯನ್-ಟೇಲ್ಡ್ ಮೆಕಾಕ್) ಒಂದು ಸುಂದರ, ಸಂಕೋಚಗೊಳ್ಳುವ, ಗಂಭೀರ ಪ್ರಾಣಿ. ಹಣ್ಣುಗಳನ್ನು ಸೇವಿಸುವ ಈ ಸಸ್ತನಿ ಪ್ರಾಣಿಗಳು ಒಂದು ಕಾಲದಲ್ಲಿ ದಕ್ಷಿಣ ಭಾರತದ ಮಳೆಗಾಡುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿದ್ದವು. ಆದರೆ ಕಳೆದ ಶತಮಾನದಲ್ಲಿ, ಅವುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ವಿಜ್ಞಾನಿಗಳು ಅವುಗಳನ್ನು ಅವಸಾನದ ಅಂಚಿನಲ್ಲಿ ಗಂಭೀರ ಅಪಾಯದಲ್ಲಿರುವ ಪ್ರಾಣಿಗಳಲ್ಲೊಂದು ಎಂದು ದೃಢಪಡಿಸಿದ್ದಾರೆ. ೧೯೮೫ರಲ್ಲಿ ಡಾ।। ಉಲ್ಲಾಸ ಕಾರಂತರು, ಕರ್ನಾಟಕದಲ್ಲಿ ಮುಂಚೆ ಎಣಿಸಿದ್ದಕ್ಕಿಂತಲೂ ಹೆಚ್ಚು ಸಿಂಗಲೀಕಗಳಿವೆ ಎಂದು ಪತ್ತೆಹಚ್ಚಿದರು.

ಕರ್ನಾಟಕದಲ್ಲಿ, ಸ್ಥಳೀಯರು ‘ಸಿಂಗಲೀಕ’ ಎಂದು ಕರೆವ ಈ ಕಪಿಯ ಸಂಬಂಧಿಯ ಹೆಸರಿನ ಅಕ್ಷರಶಃ ಅನುವಾದ ‘ಸಿಂಹದಂತೆ ಇರುವ’. ಅವುಗಳ ಇರುವಿಕೆ ಭಾರತದ ಪಶ್ಚಿಮ ಘಟ್ಟಗಳ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳಿಗೆ ಮಾತ್ರ ಸೀಮಿತವಾಗಿದೆ. ಕರ್ನಾಟಕ, ಕೇರಳ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಈ ಸಸ್ತನಿಗಳು ವೆಶೇಷವಾದ ನೈಸರ್ಗಿಕ ನೆಲೆ ಹೊಂದಿವೆ.

“೧೯೬೦ ಮತ್ತು ೭೦ರ ದಶಕಗಳಲ್ಲಿ ಕರ್ನಾಟಕದ ಕಾಡುಗಳಲ್ಲಿನ ನನ್ನ ಚಾರಣಗಳಲ್ಲಿ ಕೆಲವು ಕಡೆ ಸಿಂಗಲೀಕಗಳನ್ನು ನೋಡಿದ್ದೆ. ೧೯೭೭ರಲ್ಲಿ ಅಮೆರಿಕಾದ ಜೀವಶಾಸ್ತ್ರಜ್ಞರಾದ ಸ್ಟೀವನ್ ಗ್ರೀನ್ ಅವರ ಭಾಷಣದಿಂದ ಈ ಪ್ರಾಣಿ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಅವಸಾನದ ಅಂಚಿನಲ್ಲಿದೆ ಎಂದು ತಿಳಿದಾಗ, ನನಗೆ ಬಹಳ ಆಶ್ಚರ್ಯವಾಗಿತ್ತು. ಸಿಂಗಲೀಕ ಇರಬಹುದಾದ ಆವಾಸ ಸ್ಥಾನಗಳಲ್ಲಿ ವಿವರವಾದ ಪ್ರಶ್ನಾವಳಿ ಸಮೀಕ್ಷೆ ನಡೆಸಲು ನಿರ್ಧರಿಸಿದೆ.” – ಡಾ।। ಕೆ. ಉಲ್ಲಾಸ ಕಾರಂತ

೧೯೮೦ರ ದಶಕದಲ್ಲಿ ಕರ್ನಾಟಕದಲ್ಲಿ ಸಿಂಗಲೀಕದ ಸಂಖ್ಯೆ ಮತ್ತು ಆವಾಸ ಸ್ಥಾನಗಳ ಸ್ಥಿತಿಯನ್ನು ಪ್ರಮಾಣೀಕರಿಸಲು ಉಲ್ಲಾಸ ಕಾರಂತರು ಕಾರ್ಯನಿರತರಾದರು. ಸಿಂಗಲೀಕದ ಸಂಖ್ಯೆ, ಆವಾಸ ಸ್ಥಾನದ ಲಭ್ಯತೆ, ಮತ್ತು ಅವುಗಳ ಮೇಲಿರುವ ಅಪಾಯಗಳನ್ನು ಅಧ್ಯಯಿಸಲು ಅವರು ೨೮ ಕಾಡು ವಲಯಗಳನ್ನು ಸಮೀಕ್ಷಿಸಿದರು.

“ಸಿಂಗಲೀಕ, ಸಾಮಾನ್ಯ ಕೋತಿ (ಬಾನೆಟ್ ಮೆಕಾಕ್), ಹನುಮಾನ್ ಮುಚ್ಚ (ಹನುಮಾನ್ ಲಂಗೂರ್), ಮತ್ತು ದಕ್ಷಿಣ ಕೊಡಗಿನಲ್ಲಿ ನೀಲಗಿರಿ ಮುಚ್ಚಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಿ ಮಾಹಿತಿ ನೀಡಬಲ್ಲ ಸ್ಥಳೀಯರನ್ನು ಹುಡುಕುವುದು ಬಹುಮುಖ್ಯವಾಗಿತ್ತು. ಅಂತಹವರನ್ನು ಗುರುತಿಸಿ ಮತ್ತು ಅವರು ಕೊಟ್ಟ ಮಾಹಿತಿಯಿಂದ, ಸಿಂಗಲೀಕಗಳು ಪಶ್ಚಿಮ ಘಟ್ಟಗಳ ದಕ್ಷಿಣಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ ಎಂದು ಪರಿಶೀಲಿಸಿದೆ.” – ಡಾ।। ಉಲ್ಲಾಸ ಕಾರಂತ

ಮನುಷ್ಯರ ಅತಿಕ್ರಮಣ, ಕಾಡಿನ ನೆಲವನ್ನು ಕೃಷಿಭೂಮಿಯಾಗಿ ಪರಿವರ್ತಿಸುವುದು, ಮರ ಕಡಿಯುವುದು ಮತ್ತು ಇತರ ಚಟುವಟಿಕೆಗಳಿಂದ ಸಿಂಗಲೀಕದ ಆವಾಸಸ್ಥಾನ ಇಳಿಕೆಯಾಗಿರುವುದು ಕಾರಂತರ ಸಂಶೋಧನೆಯಿಂದ ತಿಳಿದುಬಂತು. ಸಿಂಗಲೀಕಗಳಿಗೆ ಕಾನೂನಿನ ರಕ್ಷಣೆಯಿದ್ದರೂ, ‘ಕಪ್ಪು ಕೋತಿ’ಯ ಮಾಂಸದಲ್ಲಿ ಔಷಧೀಯ ಮತ್ತು ಕಾಮೋತ್ತೇಜಕ ಗುಣಗಳಿವೆ ಎಂಬ ಸ್ಥಳೀಯರ ನಂಬಿಕೆಯಿಂದಾಗಿ ಕಳ್ಳಬೇಟೆಯ ಬಹುದೊಡ್ಡ ಅಪಾಯವಿತ್ತು. ಈ ಅಧ್ಯಯನದಿಂದ ಕರ್ನಾಟಕದಲ್ಲಿ ಸಿಂಗಲೀಕಗಳಿಗೆ ಸೂಕ್ತವಾದ ೧೦೦೦ ಕಿ.ಮೀ. ಆವಾಸ ಸ್ಥಾನವಿದೆಯೆಂದೂ ತಿಳಿದುಬಂತು. ಕರ್ನಾಟಕದಲ್ಲಿ ಸಿಂಗಲೀಕಗಳ ಕನಿಷ್ಠ ೨೦೦ ಗುಂಪು ಅಥವಾ ೩೦೦೦ ವಿವಿಕ್ತ ಸಂಖ್ಯೆಯಿರುವುದೆಂದು ಕಾರಂತರು ಅಧ್ಯಯನದ ಮೂಲಕ ನಿರ್ಣಯಿಸಿದರು.

ಕರ್ನಾಟಕದಲ್ಲಿ ಹಿಂದಿನ ಎಲ್ಲಾ ಎಣಿಕೆಗಳೂ ಕಡಿಮೆ ಅಂದಾಜು ಮಾಡಿದ್ದ ಸಿಂಗಲೀಕಗಳ ಸಂಖ್ಯೆ ಮತ್ತು ಆವಾಸಸ್ಥಾನಗಳ ಮೇಲೆ ಈ ಅಧ್ಯಯನ ಹೊಸ ಬೆಳಕು ಚೆಲ್ಲಿ, ಅವುಗಳ ಸಂಖ್ಯೆ ಸುಗಮವಾಗಿರುವ ಆವಾಸಸ್ಥಾನಗಳಲ್ಲಿ ಚೆನ್ನಾಗಿ ಹರಡಿರುವುದನ್ನು ಎತ್ತಿ ತೋರಿಸಿತು. ಈ ಸಕಾರಾತ್ಮಕ ದೃಷ್ಟಿಕೋನದ ಹೊರತಾಗಿಯೂ, ಹೆಚ್ಚುತ್ತಿರುವ ಅಪಾಯಗಳಿಂದ ಸಿಂಗಲೀಕದ ಸಂಖ್ಯೆ ರಾಜ್ಯದೆಲ್ಲೆಡೆ ಕಡಿಮೆಯಾಗುತ್ತಿದೆ. ಈ ಅಧ್ಯಯನದ ಫಲವಾಗಿ ರಾಜ್ಯದಲ್ಲಿ ಪ್ರಮುಖ ಸಂರಕ್ಷಣಾ ಪ್ರದೇಶಗಳನ್ನು ಗುರುತಿಸಿ ನಿರ್ವಹಣಾ ಯೋಜನೆಗಳನ್ನು ಕಾರ್ಯಗತಗೊಳಿಸಲಾಯಿತು. ಕಡೆಗೆ, ಈ ಅಧ್ಯಯನದಿಂದ, ಕುದುರೆಮುಖ, ತಲಕಾವೇರಿ, ಮತ್ತು ಬ್ರಹ್ಮಗಿರಿಯ ವಿಸ್ತಾರಣಾ ವ್ಯಾಪ್ತಿಗಳನ್ನು ಸಿಂಗಲೀಕಗಳ ಆವಾಸಸ್ಥಾನದ ರಕ್ಷಣೆಗಾಗಿ ಹೊಸ ಸಂರಕ್ಷಿತ ಪ್ರದೇಶಗಳಾಗಿ ಸ್ಥಾಪಿಸಲಾಯಿತು.

ಈ ಅಧ್ಯಯನ ಪ್ರಕಟಗೊಂಡಾಗಿನಿಂದಲೇ ಸಿಂಗಲೀಕದ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ, ಈ ಮೇಲೆ ಉಲ್ಲೇಖಿಸಿರುವ ಅಪಾಯಗಳಿಂದಾಗಿಯೇ ಅರ್ಧದಷ್ಟು ಗುಂಪುಗಳು ಕಣ್ಮರೆಯಾಗಿವೆ. ಸದ್ಯಕ್ಕೆ, IUCN ಪ್ರಕಾರ ಸಿಂಗಲೀಕ ‘ಎನ್ಡೇಂಜರ್ಡ್’ ಆಗಿದ್ದು, ಅವುಗಳ ಎಣಿಕೆ ಇಂದು ಕಾಡುಗಳಲ್ಲಿ ೨,೫೦೦ಕ್ಕಿಂತಲೂ ಕಡಿಮೆಯಿದೆ.

ಮೂಲ ಸಂಶೋಧನಾ ವರದಿ: ಭಾರತದ ಕರ್ನಾಟಕದಲ್ಲಿ ಸಿಂಗಲೀಕದ ಮತ್ತು ಅದರ ಮಳೆಗಾಡು ಆವಾಸಸ್ಥಾನಗಳ ಜೀವಪರಿಸರದ ಪರಿಸ್ಥಿತಿ, ಕೆ. ಉಲ್ಲಾಸ ಕಾರಂತ Primate Conservation, 1985

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.