ಲೇಖಕರು: ಮಿಶೆಲ್ ಲೂಯಿಜ್ಹ್
ಅನುವಾದ: ಸೌರಭಾ ರಾವ್
ಜನ ಮತ್ತು ವನ್ಯಪ್ರಾಣಿಗಳ ನಡುವೆ ನಕಾರಾತ್ಮಕ ಸಂಪರ್ಕವಾದರೆ ಅದನ್ನು ಮಾನವ-ವನ್ಯಜೀವಿ ಸಂಘರ್ಷ ಎನ್ನುತ್ತಾರೆ. ಇದು ಆನೆ ಮತ್ತು ಕಾಡುಹಂದಿಗಳಿಂದ ಉಂಟಾಗುವ ಬೆಲೆ ಹಾನಿಯಾಗಬಹುದು, ಸಿಂಹಗಳು ಸಾಕುಪ್ರಾಣಿಗಳನ್ನು ಬೇಟೆಯಾಡುವದಾಗಿರಬಹುದು, ಮತ್ತು ಹೀಗೆ ‘ತೊಂದರೆ ಕೊಡುವ’ ಪ್ರಾಣಿಗಳನ್ನು ಮನುಷ್ಯರು ಸಾಯಿಸುವದಾಗಿರಬಹುದು. ಈ ವಿಷಯ ಹೊಸದೇನಲ್ಲ, ರೈತರು ಮತ್ತು ಸಾಕುಪ್ರಾಣಿಗಳ ಪಾಲನೆಯಲ್ಲಿ ನಿರತರಾಗಿರುವ ಜನರಿಗೆ ಸಂಘರ್ಷ ದಿನನಿತ್ಯ ಜೀವನದ ಭಾಗವಾಗಿದೆ ಮತ್ತು ಇದರಿಂದ ಅವರ ಜೀವನದ ಮೇಲೆ ನೇರ ಪರಿಣಾಮ ಉಂಟಾಗುತ್ತಿದೆ. ಹೀಗೆ ಸಂಘರ್ಷ ವ್ಯಾಪಕವಾಗಿದ್ದರೂ, ಅದನ್ನು ತಗ್ಗಿಸುವ ಪ್ರಯತ್ನಗಳು ಹಲವು ಸಮುದಾಯಗಳನ್ನು ಈಗಲೂ ತಲುಪುತ್ತಿಲ್ಲ. ಅದರಲ್ಲೂ, ಬೆಳೆ ಹಾನಿ ಮತ್ತು ಜಾನುವಾರು ನಷ್ಟ ತೀವ್ರವಾಗಿ ಕಾಡುವುದು ಅಭಯಾರಣ್ಯಗಳ ಸುತ್ತಮುತ್ತಲೇ ವಾಸಿಸುವ ಜನರಿಗೆ.
೨೦೦೯ರಿಂದ ಈಚೆಗೆ ಮಧ್ಯ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ರಾಜಸ್ಥಾನಗಳಲ್ಲಿ ೧೧ ಅಭಯಾರಣ್ಯಗಳ ಸುತ್ತ ಯಾವ ರೀತಿಯ ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳು ಮತ್ತು ಅವುಗಳ ಪುನರಾವರ್ತನೆಯನ್ನು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್-ನ ವಿಜ್ಞಾನಿಯಾದ ಡಾ।। ಕೃತಿ ಕೆ. ಕಾರಂತ ಅವರ ನೇತೃತ್ವದ ಸಂಶೋಧನೆಯಲ್ಲಿ ಪರಿಶೀಲಿಸಲಾಯಿತು. ಈ ಅಭಯಾರಣ್ಯಗಳು ವಿವಿಧ ರೀತಿಯ ಪರಿಸರ ವ್ಯವಸ್ಥೆಗಳನ್ನು ಪ್ರತಿನಿಧಿಸುತ್ತವೆ. ಸ್ಥಳೀಯ ಸಮುದಾಯಗಳು ಸಂಘರ್ಷವನ್ನು ಕಡಿಮೆ ಮಾಡಲು ಬಳಸುವ ವಿಧಾನಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ ಎಂದೂ ವಿಜ್ಞಾನಿಗಳು ಪರಿಶೀಲಿಸಿದ್ದಾರೆ.
ಈ ಸಂಶೋಧನೆಯಿಂದ ತಿಳಿದುಬಂದಿರುವುದೇನೆಂದರೆ, ಸಂಘರ್ಷವನ್ನು ತಡೆಗಟ್ಟಲು ಜನ ಎರಡು ರೀತಿಯ ವಿಧಾನಗಳನ್ನು ಬಳಸುತ್ತಾರೆ: ನೇರ ವಿಧಾನಗಳು (ಬೇಲಿ/ಬೆಳೆ ಹಾಗೂ ಜಾನುವಾರುಗಳನ್ನು ಸ್ವತಃ ಕಾವಲು ಕಾಯುವುದು) ಮತ್ತು ಪರೋಕ್ಷ ವಿಧಾನಗಳು (ಬೆಳೆ ವಿಮೆ, ಸರ್ಕಾರದ ಪರಿಹಾರಧನ ಕಾರ್ಯಯೋಜನೆಗಳು). ಹುಲಿ, ಚಿರತೆ, ಕರಡಿ, ಆನೆ ಮತ್ತು ಜಿಂಕೆ, ಹೀಗೆ ವಿಧವಿಧವಾದ ಪ್ರಾಣಿಗಳು ಜನರನ್ನು ಮುಖಾಮುಖಿಯಾಗುತ್ತಿರುತ್ತವೆ ಎಂಬುದೂ ಕಂಡುಬಂದಿದೆ. ಈ ಪ್ರಾಣಿಪ್ರಭೇದಗಳ ವೈವಿಧ್ಯತೆಯನ್ನು ಸರಿಗಟ್ಟುವಂತೆ ಈ ಅಭಯಾರಣ್ಯಗಳ ಸುತ್ತಮುತ್ತ ವಾಸಿಸುವ ಜನರ ಸಂಸ್ಕೃತಿ, ಧರ್ಮ ಮತ್ತು ಸಾಂಪ್ರದಾಯಿಕ ಆಚರಣೆಗಳೂ ಅಷ್ಟೇ ವೈವಿಧ್ಯವಾಗಿವೆ. ಹೀಗೆ ಜನದಟ್ಟಣೆ ಇರುವ ಹಳ್ಳಿಗಳು ಮತ್ತು ವನ್ಯಜೀವಿಗಳ ಇರುವಿಕೆ ಕೇವಲ ಸಂಘರ್ಚಾಕ್ಕೆ ಮಾತ್ರವಲ್ಲ, ಜನರ ಮತ್ತು ಕಾಡುಪ್ರಾಣಿಗಳ ನಡುವೆ ನಿರಂತರವಾಗಿರುವ ಸಹಿಷ್ಣುತೆಯನ್ನೂ ಅಧ್ಯಯನ ತೋರಿಸುತ್ತದೆ.
ಅಭಯಾರಣ್ಯಗಳ ಸುತ್ತ ಇರುವ ೨,೮೫೫ ಹಳ್ಳಿಗಳ ೫,೧೯೬ ಮನೆಗಳಲ್ಲಿ ಸಮೀಕ್ಷೆ ನಡೆಸಿ, ಜನಾಂಗ ಸ್ಥಿತಿಗತಿಗಳು, ಜಾನುವಾರು ಪಾಲನೆ ರೂಢಿಗಳು, ಸಂಘರ್ಷದ ಘಟನೆಗಳು ಮತ್ತು ಅದನ್ನು ತಡೆಯುವ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ವಿಜ್ಞಾನಿಗಳು ಕಲೆಹಾಕಿದರು. ಅಧ್ಯಯನದ ಫಲಿತಾಂಶದಲ್ಲಿ ಮೂರು ಮುಖ್ಯವಾದ ಅಂಶಗಳಿವೆ: ಸಂಘರ್ಷದ ತಡೆಯುವಿಕೆಗೆ ಇತಿಹಾಸ, ಪ್ರಾಣಿಪ್ರಭೇದ ಮತ್ತು ಸ್ಥಳದ ಮಾಹಿತಿ ಅಗತ್ಯವಾಗುತ್ತವೆ. ಪದೇ ಪದೇ ಸಂಘರ್ಷ ಎದುರಿಸಿದ ಕಾಡುಗಳಿಗೆ ಬಹಳ ಹತ್ತಿರವಿರುವ ಜನ ಸಂಘರ್ಷವನ್ನು ಕಡಿಮೆ ಮಾಡುವ ತಂತ್ರಗಳನ್ನು ಬಳಸುವ ಸಾಧ್ಯತೆ ಹೆಚ್ಚು. ಪ್ರಾಣಿಪ್ರಭೇದದಲ್ಲಿ ಕಾಡುಹಂದಿ, ನೀಲಗೈ, ಚಿಂಕಾರಾ, ಮತ್ತು ದೊಡ್ಡ ಮಾರ್ಜಾಲಗಳ ಜೊತೆ ಸಂಘರ್ಷ ನಿಯಂತ್ರಿಸಲು ತಂತ್ರಗಳ ಬಳಕೆ ಹೆಚ್ಚು.
ಎಷ್ಟೋ ಕುಟುಂಬಗಳು ಸಂಘರ್ಷ ನಿಯಂತ್ರಣ ವಿಧಾನಗಳನ್ನು ಬಳಸಿದರೂ ವಿವಿಧ ರೀತಿಯ ನಷ್ಟ ಅನುಭವಿಸುವುದು ಮುಂದುವರೆದಿತ್ತು. ಸದ್ಯಕ್ಕೆ ಬಳಕೆಯಲ್ಲಿರುವ ಸಂಘರ್ಷ ನಿಯಂತ್ರಣ ವಿಧಾನಗಳ ಮೌಲ್ಯಮಾಪನ ಮಾಡಿ, ಪ್ರತಿಯೊಂದು ಸ್ಥಳಕ್ಕೆ ಅದರದ್ದೇ ಆದ ಹೊಸ ಸೃಜನಾತ್ಮಕ ಸಂಘರ್ಷ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಈ ಸಂಶೋಧನೆ ಒತ್ತಿಹೇಳುತ್ತದೆ. ಅದರಲ್ಲೂ, ಅಪಾಯ ಹೆಚ್ಚು ಇರುವ, ಸಂಘರ್ಷದ ಸಂಭವ ಜಾಸ್ತಿ ಇರುವ ಸಮುದಾಯಗಳ ಸಹಾಯಕ್ಕೆ ಹೆಚ್ಚು ಬಂಡವಾಳ ಹೂಡಬೇಕು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಂಘರ್ಷ ನಿಯಂತ್ರಣಕ್ಕೆ ಬಂಡವಾಳ ಹೂಡಿಕೆಯ ಮತ್ತು ಸಂಘರ್ಷೋತ್ತರ ಪರಿಹಾರ ಕಾರ್ಯನೀತಿಗಳನ್ನು ಪ್ರಮಾಣೀಕರಣವಾಗಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಇಂತಹ ಪ್ರಯತ್ನಗಳಿಂದ ಸ್ಥಳೀಯ ಸಮುದಾಯಗಳಲ್ಲಿ ವನ್ಯಜೀವಿ ಸಂರಕ್ಷಣೆಯ ಪರವಾಗಿ ಹೆಚ್ಚಿನ ಸಹಿಷ್ಣುತೆ ಮತ್ತು ಬೆಂಬಲ ನೀಡಿದಂತಾಗಿ, ದೀರ್ಘಾವಧಿಯಲ್ಲಿ ಜೀವವೈವಿಧ್ಯತೆಯ ರಕ್ಷಣೆಗೆ ಪೂರಕವಾಗುತ್ತದೆ ಎಂದು ಅವರು ಒತ್ತಿಹೇಳಿದ್ದರೆ.
ಮೂಲ ಸಂಶೋಧನಾ ವರದಿ: ಇತಿಹಾಸ, ಸ್ಥಳ ಮತ್ತು ಪ್ರಾಣಿಪ್ರಭೇದದ ಪಾಮುಖ್ಯತೆ: ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಒಳನೋಟ – ಕೃತಿ ಕೆ. ಕಾರಂತ, ಸಾಹಿಲಾ ಕುಡಲ್ಕರ್ (ಹ್ಯೂಮನ್ ಡೈಮೆನ್ಶನ್ಸ್ ಆಫ್ ವೈಲ್ಡ್ ಲೈಫ್, ೨೦೧೭)
ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.
ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.