ಲೇಖಕರು: ವಿನ್ನಿ ಜೈನ್
ಅನುವಾದ: ಸೌರಭಾ ರಾವ್

ಈ ಲೇಖನ, ‘ಮನುಷ್ಯ-ಚಿರತೆಗಳ ನಡುವಿನ ಪರಸ್ಪರ ಪರಿಣಾಮ’ ಎಂಬ ವಿಜ್ಞಾನ-ಲೇಖನ ಸರಣಿಯಲ್ಲಿ ಎರಡನೆಯದು.

ಸಾವಿರಾರು ವರ್ಷಗಳಿಂದ ಸಿಂಹ, ಹುಲಿ, ಚಿರತೆ, ಹಿಮ ಚಿರತೆ ಮತ್ತು ಜಾಗ್ಯುಅರ್-ನಂತಹ ‘ದೊಡ್ಡ ಮಾರ್ಜಾಲಗಳು’ ಮನುಷ್ಯರು ವಾಸಿಸುವ ಬಳಿಯಲ್ಲಿಯೇ ವಾಸಿಸುತ್ತಿವೆ. ಇಂತಹ ಒಡನಾಟದಿಂದ ಸಾಕಷ್ಟು ದಂತಕಥೆಗಳು, ಸಾಂಸ್ಕೃತಿಕ ಹಾಗೂ ಧಾರ್ಮಿಕ ನಂಬಿಕೆಗಳಲ್ಲಿ ಈ ಮಾರ್ಜಾಲಗಳನ್ನು ಸುಲಭವಾಗಿ ತಿಳಿಯಲು ಆಗದ, ಭಯ ಹಾಗೂ ಬೆರಗು ಹುಟ್ಟಿಸುವ ಪ್ರಾಣಿಗಳೆಂದು ಬಣ್ಣಿಸಲಾಗಿದೆ. ಇಂದು, ಮನುಷ್ಯರ ಸಂಖ್ಯೆ ಹೆಚ್ಚಾದಷ್ಟೂ, ಕಾಡುಪ್ರಾಣಿಗಳ ಆವಾಸಸ್ಥಾನ ಕಡಿಮೆಯಾಗುತ್ತಿದ್ದು, ಮನುಷ್ಯ ಮತ್ತು ದೊಡ್ಡ ಮಾರ್ಜಾಲಗಳ ನಡುವಿನ ಸಂಬಂಧವೂ ಬದಲಾಗುತ್ತಿದೆ. ಇಬ್ಬರೂ ಹಂಚಿಕೊಳ್ಳುವ ಪ್ರದೇಶಗಳಲ್ಲಿ ಒಂದೇ ವಿಧದ ಸಂಪನ್ಮೂಲಗಳಿಗಾಗಿ ಸ್ಪರ್ಧಿಸುತ್ತಾರೆ. ಡಾ।। ವಿದ್ಯಾ ಆತ್ರೇಯ ಅವರ ನೇತೃತ್ವದಲ್ಲಿ ವಿಜ್ಞಾನಿಗಳ ಒಂದು ತಂಡ ಚಿರತೆಯ ಇರುವಿಕೆ ಭಾರತ ಗ್ರಾಮೀಣ ಪ್ರದೇಶವೊಂದರಲ್ಲಿ ಮನುಷ್ಯರ ಮೇಲೆ ಯಾವ ಪ್ರಭಾವ ಬೀರುತ್ತಿದೆ ಎಂದು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.

ಭಾರತದಲ್ಲಿ ಮನುಷ್ಯರು ಮತ್ತು ಚಿರತೆಗಳ ಅಸ್ತಿತ್ವ ನಾವು ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ಬೆಸೆದುಕೊಂಡಿದೆ! ದಕ್ಷಿಣದಲ್ಲಿರುವ ಪಶ್ಚಿಮ ಘಟ್ಟಗಳಿಂದ ಉತ್ತರದ ಹಿಮಾಲಯದ ತಪ್ಪಲಿನವರೆಗೆ ಭಾರತದಲ್ಲಿ ಅನೇಕ ಕಡೆ ಚಿರತೆಗಳ ಇರುವಿಕೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲೂ ಕಂಡುಬರುತ್ತದೆ. ಎಲ್ಲೆಲ್ಲಿ ಕಾಡಿನ ಬಲಿಪ್ರಾಣಿಗಳಾದ ಜಿಂಕೆ, ಮಂಗ, ಮತ್ತು ಪುಣುಗು ಬೆಕ್ಕುಗಳ ಸಂಖ್ಯೆ ಕಡಿಮೆಯಾಗುತ್ತದೋ, ಅಲ್ಲೆಲ್ಲಾ ಭಾರತದ ಚಿರತೆಗಳು ತಮ್ಮ ಆಹಾರವನ್ನು ದನಕರುಗಳು, ಆಡು, ಮತ್ತು ನಾಯಿಗಳಂತಹ ಸಾಕುಪ್ರಾಣಿಗಳ ಮೂಲಕ ಪೂರೈಸಿಕೊಳ್ಳುತ್ತವೆ. ಇಂತಹ ‘ಸುಲಭ ಬಲಿಪ್ರಾಣಿಗಳು’ ಚಿರತೆಗಳಿಗೆ ಆಸರೆಯಾಗಿವೆ, ಆದರೆ ಇದರಿಂದ ಮನುಷ್ಯರ ಸುರಕ್ಷತೆ ಹಾಗೂ ಜೀವನಾಧಾರದ ಮೇಲೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದರಿಂದ ‘ಮನುಷ್ಯ-ಚಿರತೆ ಸಂಘರ್ಷ’ ಉಂಟಾಗುತ್ತದೆ.

ಚಿರತೆಗಳು ಮನುಷ್ಯರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂದು ತಿಳಿಯಲು, ವೈಲ್ಡ್ಲೈಫ್ ಕಾನ್ಸರ್ವೇಶನ್ ಸೊಸೈಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಇನ್ಲ್ಯಾಂಡ್ ನಾರ್ವೇ ಯೂನಿವರ್ಸಿಟಿ ಆ ಅಪ್ಲೈಡ್ ಸೈನ್ಸಸ್, ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್, ನಾರ್ವೇಜಿಯನ್ ಇನ್ಸ್ಟಿಟ್ಯೂಟ್ ಆಫ್ ನೇಚರ್ ರಿಸರ್ಚ್, ಮತ್ತು ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ದ ಏನ್ವಯರ್ಮೆಂಟ್-ನ ವಿಜ್ಞಾನಿಗಳು ಪಶ್ಚಿಮ ಮಹಾರಾಷ್ಟ್ರದಲ್ಲಿರುವ ಅಕೋಲೆ ಎಂಬ ಪುಟ್ಟ ಕೃಷಿಪ್ರಧಾನ ತಾಲ್ಲೂಕಿನ ಜನರನ್ನು ಸಂದರ್ಶಿಸಿದರು.

ವಾರ್ಷಿಕ ಸರಾಸರಿ ಲೆಕ್ಕದಲ್ಲಿ ಇಲ್ಲಿಯ ಜನ ೮೧ ಜಾನುವಾರುಗಳನ್ನು ಕಳೆದುಕೊಂಡಿದ್ದರು. ಆಶ್ಚರ್ಯಕರವಾದ ಸಂಗತಿಯೆಂದರೆ, ಇದು ಸಣ್ಣ ಸಂಖ್ಯೆ. ಈ ತಾಲ್ಲೂಕಿನಲ್ಲಿ ಮನುಷ್ಯರನ್ನು ಚಿರತೆ ಕೊಂದ ಯಾವ ವರದಿಯೂ ಆಗಿಲ್ಲ, ಮತ್ತು ನಡೆದಿರುವ ಕೆಲವು ದಾಳಿಗಳೂ ಆಕಸ್ಮಿಕ ಮತ್ತು ಪ್ರಚೋದನೆಯಿಂದ ಆದಂಥವು. ರೋಗ ಮತ್ತು ಅನಾರೋಗ್ಯ ಇಲ್ಲಿನ ಜಾನುವಾರುಗಳ ಸಾವಿಗೆ ಮುಖ್ಯ ಕಾರಣ, ಹೀಗಾಗಿ ಚಿರತೆಗಳ ಪಾತ್ರ ಇದರಲ್ಲಿ ಬಹಳ ಚಿಕ್ಕದು. ಕುತೂಹಲಕಾರಿ ಅಂಶವೆಂದರೆ, ಚಿರತೆಗಳಿಗೆ ನಾಯಿಗಳ ಮೇಲೆ ಬೇಟೆಗಾಗಿ ಆಸಕ್ತಿ ಇದ್ದುದು, ಮತ್ತು ಮಾಂಸಾಹಾರಿ ಪ್ರಾಣಿಗಳಿಂದ ಜಾನುವಾರುಗಳನ್ನು ರಕ್ಷಿಸಲು ಬೇಕಿರುವ ಸದೃಢ, ಸುರಕ್ಷಿತ ಕೊಠಡಿಗಳು ಸಾಕಷ್ಟು ಸಂಖ್ಯೆಯಲ್ಲಿ.

ಜಾನುವಾರು ನಷ್ಟ ಅನುಭವಿಸಿದ ಬಹಳಷ್ಟು ಜನ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ನೀಡಿ ವರದಿ ಸಲ್ಲಿಸಿದ್ದರು. ಆದರೆ, ವಲಸಿಗ ಕುರುಬರಲ್ಲಿ ಹಲವರಿಗೆ ಇಂತಹ ಪರಿಹಾರ ಧನ ಯೋಜನೆಗಳ ಬಗ್ಗೆ ಅರಿವೇ ಇರಲಿಲ್ಲ, ಮತ್ತು ಕೆಲವರಿಗೆ ಅದರ ಪರಿಣಾಮಕಾರಿತ್ವದ ಮೇಲೆ ನಂಬಿಕೆ ಇರಲಿಲ್ಲ. ಈ ಅಧ್ಯಯನ ನಡೆಸಿದ ವಿಜ್ಞಾನಿಗಳು, ಸಂಘರ್ಷವನ್ನು ತಗ್ಗಿಸುವ ಮಾರ್ಗವಾಗಿ ಇರುವ ಪರಿಹಾರ ಧನ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು, ಅದನ್ನು ಸುಧಾರಿಸಲು ಬೇಕಾದ ನಿರ್ವಹಣಾ ಕ್ರಮಗಳೇನು ಎಂಬುದನ್ನು ಪರಿಶೀಲಿಸಿ ಚರ್ಚಿಸಿದ್ದಾರೆ.

ಅಕೋಲೆ ಪ್ರದೇಶದಲ್ಲಿ ಹೆಚ್ಚು ಚಿರತೆಗಳ ಸಂಖ್ಯಾ ಸಾಂದ್ರತೆ (ಪ್ರತಿ ೧೦೦ ಚದುರ ಕಿಲೋಮೀಟರ್-ಗೆ ಹತ್ತು ವಯಸ್ಕ ಚಿರತೆಗಳು) ಮತ್ತು ಬಲಿಪ್ರಾಣಿಗಳ ಸಂಖ್ಯೆ ಕಡಿಮೆಯಿದ್ದರೂ, ಮನುಷ್ಯರು ಮತ್ತು ಜಾನುವಾರುಗಳ ಮೇಲೆ ಚಿರತೆ ದಾಳಿಯ ಪ್ರಮಾಣ ಅಂದಾಜು ಮಾಡಿದ್ದಕ್ಕಿಂತಲೂ ಕಡಿಮೆ ಇತ್ತು. ಹಲವಾರು ಜನ ಬೇಟೆಪ್ರಾಣಿಗಳಿಂದ ಜಾನುವಾರು ರಕ್ಷಿಸಲು ಕಟ್ಟಿಕೊಂಡ ಸುರಕ್ಷಿತ ಕೊಠಡಿಗಳು ಇದಕ್ಕೆ ಕಾರಣವಿರಬಹುದು. ಮಾಂಸಾಹಾರಿ ಪ್ರಾಣಿಗಳು ಜಾನುವಾರುಗಳ ಮೇಲೆ ನಡೆಸುವ ದಾಳಿಯನ್ನು ಸರ್ವೇಸಾಮಾನ್ಯವಾಗಿ “ಸಂಘರ್ಷ” ಎಂದು ವರ್ಗೀಕರಿಸುವುದನ್ನು ಅಧ್ಯಯನಕಾರರು ಪ್ರಶ್ನಿಸಿದ್ದಾರೆ, ಏಕೆಂದರೆ ಅಲ್ಲಿ ಕಾಡುಪ್ರಾಣಿಗಳದ್ದೇ ತಪ್ಪು ಎಂಬ ಸೂಚನೆ ಇರುತ್ತದೆ. ಜಾನುವಾರು ನಷ್ಟ, ಸಾಕಷ್ಟು ರಕ್ಷಣೆಯಿಲ್ಲದೇ ಅವುಗಳನ್ನು ಇಟ್ಟುಕೊಳ್ಳುವುದರ ಪರಿಣಾಮ ಎಂದೂ, ಹೀಗಾಗಿ ಜವಾಬ್ದಾರಿ ಪ್ರಾಣಿಗಳದ್ದಲ್ಲ, ಜಾನುವಾರುಗಳನ್ನು ಸಾಕಿಕೊಂಡ ಜನರ ಮೇಲಿದೆ ಎಂದು ಅವರು ವಾದಿಸಿದ್ದಾರೆ.

 ಒಟ್ಟಾರೆ, ಕಾಡಿನ ಬೇಟೆಪ್ರಾಣಿಗಳು ಮತ್ತು ಮನುಷ್ಯರು ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂಬ ಆಲೋಚನೆಯನ್ನು ಈ ಅಧ್ಯಯನದ ಫಲಿತಾಂಶಗಳು ಆಕ್ಷೇಪಿಸುತ್ತವೆ. ಮನುಷ್ಯರ ನಡವಳಿಕೆಗಳಲ್ಲಿ ಕೆಲವು ಸಣ್ಣ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದರಿಂದ, ದೊಡ್ಡ ಮಾರ್ಜಾಲಗಳು ಮತ್ತು ಜನರು ಸಾಧ್ಯವಾದಷ್ಟೂ ಸಂಘರ್ಷಗಳಿಲ್ಲದೆ ಬದುಕಬಹುದು ಎಂದು ಅಕೋಲೆಯಂತಹ ಪ್ರದೇಶದಲ್ಲಿರುವ ಪರಿಸ್ಥಿತಿ ನಮಗೆ ತೋರಿಸುತ್ತದೆ. ಇಂತಹ ‘ಸಹಬಾಳ್ವೆ’ ಮನುಷ್ಯರ ಪ್ರಭಾವ ಪ್ರಬಲವಾಗಿರುವ ಇಂದಿನ ಪ್ರಪಂಚದಲ್ಲಿ ದೊಡ್ಡ ಮಾರ್ಜಾಲಗಳು ಉಳಿದು ಬೆಳೆಯಲು ಅವಶ್ಯಕವಾಗಿದೆ.

ಮೂಲ ಸಂಶೋಧನಾ ವರದಿ: ಭಾರತದ ಮಹಾರಾಷ್ಟ್ರದಲ್ಲಿ ಮನುಷ್ಯರ ಬಳಕೆಯಲ್ಲಿರುವ ಭೂಪ್ರದೇಶದಲ್ಲಿ ಜಾನುವಾರು ಮತ್ತು ಜನರ ನಷ್ಟದ ಮೇಲೆ ಚಿರತೆಗಳ ಪ್ರಭಾವ – ವಿದ್ಯಾ ಆತ್ರೇಯ, ಕವಿತಾ ಈಸ್ವರನ್, ಮೋರ್ಟೆನ್ ಓಡ್ಡೆನ್, ಜಾನ್ ಲಿನ್ನೆಲ್ಲ್, ಅರಿತ್ರ ಕ್ಷೇತ್ರಿ, ಜಗದೀಶ್ ಕೃಷ್ಣಸ್ವಾಮಿ, ಉಲ್ಲಾಸ ಕಾರಂತ – ಪೀಯರ್ ಜೆ (PeerJ), ೨೦೨೦

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.