ಲೇಖಕರು: ವಿನ್ನಿ ಜೈನ್

ಅನುವಾದ: ಸೌರಭಾ ರಾವ್

ಈ ಲೇಖನ, ಸಂರಕ್ಷಣಾ ಪ್ರದೇಶಗಳ ಹೊರಗಿನ ಜೀವವೈವಿಧ್ಯತೆ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ಮೂರನೆಯದು.

NCBS ಮತ್ತು CWS ವಿಜ್ಞಾನಿಗಳು ನಡೆಸಿರುವ ಒಂದು ಅಧ್ಯಯನದ ಪ್ರಕಾರ ಪಶ್ಚಿಮ ಘಟ್ಟಗಳಲ್ಲಿನ  ಕೃಷಿ ಅರಣ್ಯಗಳು, ಹುಲಿ, ಚಿರತೆ, ಕರಡಿ, ಪುನುಗು ಬೆಕ್ಕುಗಳಂಥ ಸಸ್ತನಿಗಳಿಗೆ ಮುಖ್ಯ ಆವಾಸಸ್ಥಾನವಾಗಿವೆ. ಭದ್ರಾ ಹುಲಿ ರಕ್ಷಿತಾರಣ್ಯದ ಬಳಿಯಿರುವ ೧೫ ಕಾಫಿ ತೋಟಗಳಲ್ಲಿ ಕನಿಷ್ಠ ೨೮ ವಿವಿಧ ಬಗೆಯ ಸಸ್ತನಿಗಳನ್ನು ಗುರುತಿಸಲಾಗಿದೆ.

ಎತ್ತರದ ಮರಗಳ ಕೆಳಗೆ ನೆರಳಿನಲ್ಲಿ ಬೆಳೆವ ಕಾಫಿ ತೋಟಗಳು ಕರ್ನಾಟಕ, ಕೇರಳ, ಮತ್ತು ತಮಿಳು ನಾಡುಗಳ ಸಂಪರ್ಕರಹಿತ ಕಾಡಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಇದು ಪಶ್ಚಿಮ ಘಟ್ಟಗಳಲ್ಲಿ ಕೃಷಿ ಪ್ರವಾಸೋದ್ಯಮದ ವ್ಯಾಪಾರಚಿಹ್ನೆಯೂ ಆಗಿವೆ. ಸ್ಥಳೀಯ ಮರಗಳ ನೆರಳಿನಲ್ಲೇ ಇಂತಹ ತೋಟಗಳನ್ನು ಬೆಳೆಯುವುದರಿಂದ, ‘ಕೃಷಿ ಅರಣ್ಯಗಳು’ ಅಂದು ಕರೆಯಲಾಗುವ ಇವು, ಶ್ರಮದಾಯಕವಾದ ಕೃಷಿಪದ್ಧತಿಗಳ ಬದಲಿ ವ್ಯವಸ್ಥೆಯಾಗಿ, ಪರಿಸರಸ್ನೇಹಿಯೂ ಆಗಿವೆ. ಕಳೆದ ಕೆಲವು ದಶಕಗಳಲ್ಲಿ ಕಾಫಿ ಬೆಳೆವ ಭಾರತದ ರೈತರು ನೆರಳಿಗಾಗಿ ಆಸ್ಟ್ರೇಲಿಯಾದ ಹೆಟ್ಟಿಗೆ-ಉತ್ಪಾದಿಸುವ ‘ಸಿಲ್ವರ್ ಓಕ್’ನ್ನು ಬೆಳೆಯುತ್ತಿದ್ದಾರೆ. ಇದರಿಂದ ಜೀವವೈವಿಧ್ಯತೆಯ ಮೇಲೆ ಪ್ರತಿಕೂಲ ಬದಲಾವಣೆಗಳಾಗುವ ಸಾಧ್ಯತೆಯಿರಬಹುದು.

ವನ್ಯಜೀವಿಗಳಿಗೆ ಆಸರೆಯಾಗುವುದರಲ್ಲಿ ಮರಗಳ ನೆರಳಲ್ಲಿ ಬೆಳೆವ ಕಾಫಿ ತೋಟಗಳ ಪಾತ್ರವನ್ನು ಅಧ್ಯಯಿಸಲು, NCBS, CWS ಮತ್ತು ATREE ಸಂಸ್ಥೆಗಳ ಸಂಶೋಧಕರು ಕರ್ನಾಟಕದ ಸಂರಕ್ಷಿತ ಪ್ರದೇಶವಾದ ಭದ್ರಾ ಹುಲಿ ರಕ್ಷಿತಾರಣ್ಯದಿಂದ ಬೇರೆಬೇರೆ ಅಂತರಗಳಲ್ಲಿರುವ ೧೫ ಕಾಫಿ ತೋಟಗಳಲ್ಲಿ ಸಸ್ತನಿಗಳ ವೈವಿಧ್ಯತೆಯನ್ನು ಅಧ್ಯಯನ ಮಾಡಿದ್ದಾರೆ. ಸಂರಕ್ಷಿತ ಪ್ರದೇಶಗಳಿಗೆ ಇರುವ ಸಾಮೀಪ್ಯತೆ ಮತ್ತು ಸಿಲ್ವರ್ ಓಕ್ ವ್ಯಾಪ್ತಿ ಎಷ್ಟಿದೆ ಎನ್ನುವಂತಹ ವಿವರಗಳನ್ನೊಳಗೊಂಡ ಸಸ್ಯರಾಶಿಯ ವೈಶಿಷ್ಟ್ಯ, ಹೇಗೆ ಸಸ್ತನಿ ಸಮುದಾಯಗಳ ರಚನೆಯ ಮೇಲೆ ಪರಿಣಾಮ ಬೀರಿದೆ ಎಂದು ಅವರು ಪರಿಶೀಲಿಸಿದ್ದಾರೆ.

ಸೋಜಿಗವೆಂದರೆ, ಹುಲಿ, ಚಿರತೆ, ಆನೆ, ಕೆನ್ನಾಯಿ, ಕರಡಿ, ನರಿ, ಕಡವೆ, ಕಾಡು ಕುರಿ, ಮುಸುವ, ಪುನುಗು ಬೆಕ್ಕು, ಮಲಬಾರ್ ದೈತ್ಯ ಅಳಿಲು, ಪಟ್ಟೆ ಅಳಿಲು, ಮುಂಗುಸಿ ಮತ್ತು ಹಾರುವ ಅಳಿಲುಗಳಂತಹ ೨೮ ಜಾತಿಯ ಸಸ್ತನಿಗಳು ಈ ಕಾಫಿ ತೋಟಗಳಲ್ಲಿ ಕಂಡುಬಂದಿದ್ದು. ಈ ಅಧ್ಯಯನದಿಂದ, ಸಸ್ತನಿಗಳ ಮೇಲೆ ‘ಸಿಲ್ವರ್ ಓಕ್’ನಿಂದ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

ಸಸ್ಯಾಹಾರಿ, ಮಾಂಸಾಹಾರಿ, ಮತ್ತು ವಿಶೇಷ ಕಾಡುಜೀವಿಗಳ ಸಂಖ್ಯೆ, ಭದ್ರಾದಿಂದ ದೂರ ಹೋಗುತ್ತಾ ಹೋಗುತ್ತಾ ಇಳಿಮುಖವಾಗುತ್ತದೆ. ಕಾಡಿನ ವಿಶೇಷ ಜೀವಿಗಳಾದ ಹುಲಿ ಮತ್ತು ಆನೆಗಳಿಗೆ ಕಾಫಿ ತೋಟಗಳು ತಮ್ಮ ಆವಾಸಸ್ಥಾನವಾದ ಕಾಡಿಗೆ ವಿಸ್ತರಣೆಯಂತೆ ಉಪಯೋಗವಾಗಿ, ಅವುಗಳ ಓಡಾಟಕ್ಕೆ ಮತ್ತು ವಿಶ್ರಾಂತಿಗೆ ಸಹಾಯಕವಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಸಾಮಾನ್ಯ ಸಸ್ತನಿಗಳಾದ ಅಳಿಲುಗಳು ಮತ್ತು ಮಂಗಗಳು ಭದ್ರಾದಿಂದ ಹತ್ತಿರ ಅಥವಾ ದೂರ ಇರುವುದರಿಂದ ಹೆಚ್ಚೇನೂ ಪ್ರಭಾವಗೊಂಡಿಲ್ಲ.

ಮರಗಳ ನೆರಳಲ್ಲಿ ಬೆಳೆವ ಕಾಫಿ ತೋಟಗಳು ಸಸ್ತನಿಗಳಿಗೆ ಮಹತ್ವದ್ದಾಗಿದ್ದು, ಪ್ರತ್ಯೇಕ ಸಂರಕ್ಷಿತ ಪ್ರದೇಶಗಳ ನಡುವೆ ಸಂಪರ್ಕ ಏರ್ಪಡಿಸಿ ಅವುಗಳ ಓಡಾಟಕ್ಕೆ ಹೆಚ್ಚು ಅನುವು ಮಾಡಿಕೊಡುತ್ತವೆ. ಹೀಗಾಗಿ ಸಿಲ್ವರ್ ಓಕ್ ನೆರಳಲ್ಲಿ ಬೆಳೆವ ಕಾಫಿ ತೋಟಗಳನ್ನು ಉಳಿಸಿಕೊಳ್ಳಬೇಕು ಎಂದು ವಿಜ್ಞಾನಿಗಳು ವಾದಿಸುತ್ತಾರೆ. ಆದರೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ, ಈ ಕಾಫಿ ತೋಟಗಳು ನೈಸರ್ಗಿಕ ಕಾಡುಗಳ ಸ್ಥಾನವನ್ನು ಭರಿಸಲಾಗುವುದಿಲ್ಲ. ಪರಿಸರದ ಬೆಲೆಯಲ್ಲಿ ಇಂತಹ ಕಾಫಿ ತೋಟಗಳ ಮಹತ್ವದ ಬಗ್ಗೆ ಅಲ್ಲಿನ ರೈತರಲ್ಲಿ ಅರಿವು ಮೂಡಿಸಿ, ಅವರನ್ನು ಸಂರಕ್ಷಿತ ಪ್ರದೇಶಗಳ ಹೊರಗೆ ಜೀವವೈವಿಧ್ಯತೆಯನ್ನು ಕಾಪಾಡುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ಈ ಅಧ್ಯಯನ ನಡೆಸಿದ ಸಂಶೋಧಕರು ನಂಬುತ್ತಾರೆ.

ಸಂಶೋಧನಾ ವರದಿ: ಭಾರತದ ಪಶ್ಚಿಮ ಘಟ್ಟಗಳಲ್ಲಿನ ಸಂರಕ್ಷಿತ ಪ್ರದೇಶವೊಂದರ ಸುತ್ತಲಿರುವ ಕಾಫಿ ತೋಟಗಳಲ್ಲಿ ಸಸ್ತನಿಗಳ ಸಮುದಾಯಗಳು – ಅರ್ಚನಾ ಬಾಲಿ, ಅಜಿತ್ ಕುಮಾರ್, ಜಗದೀಶ್ ಕೃಷ್ಣಸ್ವಾಮಿ – Biological Conservation, 2007

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.