ಲೇಖಕರು: ಶ್ರುತಿ ಸುರೇಶ್
ಅನುವಾದ: ಸೌರಭಾ ರಾವ್

ಈ ಲೇಖನ, ‘ಕ್ಲಾಸಿಕ್ಸ್’ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ಎರಡನೆಯದು.

ಭಾರತ ಪ್ರಪಂಚದ ೮ ಅತ್ಯಂತ ಅಪೇಕ್ಷಣೀಯ ಜೀವವೈವಿಧ್ಯತೆ ಹೊಂದಿರುವ ಸ್ಥಳಗಳಲ್ಲೊಂದು. ಈ ದೇಶದಲ್ಲಿ ನೈಸರ್ಗಿಕವಾಗಿ ಬಹುಮುಖ್ಯವಾದ ಪ್ರಾಣಿಗಳನ್ನು ರಕ್ಷಿಸಲು ಅನೇಕ ಮಹತ್ವದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂರಕ್ಷಣಾ ಪ್ರಯತ್ನಗಳು ಮತ್ತು ಸಂಪನ್ಮೂಲಗಳನ್ನು ತೊಡಗಿಸಲಾಗಿದೆ. ಭಾರತದ ಕಾಡುಗಳಲ್ಲಿ ಕೇವಲ ಹುಲಿ ಮಾತ್ರವಲ್ಲ, ಆಹಾರ ಮತ್ತು ಆವಾಸಸ್ಥಾನಕ್ಕಾಗಿ ಇನ್ನೂ ಅನೇಕ ಮಾಂಸಾಹಾರಿ ಪ್ರಾಣಿಗಳು ಸ್ಫರ್ದಿಸುತ್ತವೆ. ಈ ಅಧ್ಯಯನದಲ್ಲಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ, ಮೂರು ಮಾಂಸಾಹಾರಿ ಪ್ರಾಣಿಗಳು – ಬಂಗಾಳ ಹುಲಿ, ಚಿರತೆ ಮತ್ತು ಕೆನ್ನಾಯಿ – ಹೆಚ್ಚು ಸಂಖ್ಯೆಯಲ್ಲಿದ್ದರೂ ಹೇಗೆ ಸಹಬಾಳ್ವೆ ನಡೆಸುತ್ತವೆ ಎಂದು ಪರಿಶೀಲಿಸಲಾಗಿದೆ.

೧೯೯೫ರಲ್ಲಿ, ‘ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್’ನ ಡಾ।। ಕೆ. ಉಲ್ಲಾಸ ಕಾರಂತ ಮತ್ತು ಯೂನಿವರ್ಸಿಟಿ ಆ ಫ್ಲೋರಿಡಾದ ಡಾ।। ಮೆಲ್ವಿನ್ ಈ. ಸನ್ಕ್ವಿಸ್ಟ್ ಅವರು, ಈ ಮೂರು ಮಾಂಸಾಹಾರಿ ಪ್ರಾಣಿಗಳು ತಮ್ಮ ತಮ್ಮ ಆಹಾರವನ್ನು ಹೇಗೆ ಆರಿಸುತ್ತವೆ ಮತ್ತು ಯಾವ ಯಾವ ಅಂಶಗಳ ಆಧಾರದ ಮೇಲೆ ಬಲಿಪ್ರಾಣಿಗಳನ್ನು ಆಯ್ಕೆ ಮಾಡುತ್ತವೆ ಎಂದು ನಾಗರಹೊಳೆ ಅಭಯಾರಣ್ಯದೊಳಗಿರುವ ನಾಲ್ಕೇರಿ ಸಂರಕ್ಷಿತ ಅರಣ್ಯದಲ್ಲಿ ಅಧ್ಯಯನ ನಡೆಸಿ ಪ್ರಕಟಿಸಿದ್ದಾರೆ. ಒಂದೇ ಕಾಡಿನಲ್ಲಿರುವ ಮೂರು ದೊಡ್ಡ ಮಾಂಸಾಹಾರಿ ಪ್ರಾಣಿಗಳು ಆಹಾರಕ್ಕಾಗಿ ಬಲಿಪ್ರಾಣಿಗಳ ಮೇಲೆ ಅವಲಂಬಿತವಾಗಿರುವಾಗ, ಅವುಗಳಲ್ಲಿ ಇರುವ ಸಮಾನತೆ, ವ್ಯತ್ಯಾಸಗಳೇನು ಎಂದು ಅರ್ಥ ಮಾಡಿಕೊಳ್ಳಲು ನಡೆಸಿದ ಅಧ್ಯಯನ ಇದಾಗಿದೆ.

ಬಲಿಪ್ರಾಣಿಗಳನ್ನು ಮಾಂಸಾಹಾರಿ ಪ್ರಾಣಿಗಳು ಆಯ್ಕೆ ಮಾಡುವುದನ್ನು ಅರ್ಥ ಮಾಡಿಕೊಳ್ಳಲು, ಈ ವಿಜ್ಞಾನಿಗಳು ಬಲಿಪ್ರಾಣಿಗಳ ಸಂಖ್ಯಾಸಾಂದ್ರತೆಯನ್ನು ತಮ್ಮ ಅಧ್ಯಯನ ಪ್ರದೇಶದಲ್ಲಿ ಲೈನ್ ಟ್ರಾನ್ಸೆಕ್ಟ್ ಮೂಲಕ ಅಧ್ಯಯನ ಮಾಡಿದರು. ಮೊದಲಿಗೆ ಬಲಿಪ್ರಾಣಿಗಳನ್ನು ಅವುಗಳ ವಯಸ್ಸು, ಲಿಂಗ, ದೇಹದ ಗಾತ್ರ ಮತ್ತು ಹೇರಳತೆಯ ಆಧಾರದ ಮೇಲೆ ವಿಂಗಡಿಸಿದರು. ನಂತರ ಚಿತಲ್ (ಜಿಂಕೆ), ಕಡವೆ, ಕಾಡುಕುರಿ, ಕಾಡೆಮ್ಮೆ (ಕಾಟಿ), ಕಾಡು ಹಂದಿ, ಹನುಮಾನ್ ಲಂಗೂರ್, ಬಾನೆಟ್ ಮಕಾಕ್ (ಮಂಗ) ಮುಂತಾದ ಸಸ್ಯಾಹಾರಿ ಪ್ರಾಣಿಗಳು ಸಂಖ್ಯೆಯ ಲೆಕ್ಕ ಹಾಕಿದರು. ಸಂಖ್ಯೆಯ ಗಾತ್ರ ಮತ್ತು ವಿವಿಧ ಪ್ರಾಣಿಗಳ ವಿಂಗಡಣೆಯ ಆಧಾರದ ಮೇಲೆ, ಈ ಅಧ್ಯಯನದ ಲೇಖಕರು ಮಾಂಸಾಹಾರಿ ಪ್ರಾಣಿಗಳು ಹೇಗೆ ಬಲಿಪ್ರಾಣಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂದು ಅಂದಾಜು ಮಾಡಿದರು. 

ಹುಲಿ, ಚಿರತೆ ಮತ್ತು ಕೆನ್ನಾಯಿಗಳ ಮಲವನ್ನೂ ಡಾ।। ಕಾರಂತ ಮತ್ತು ಡಾ।। ಸನ್ಕ್ವಿಸ್ಟ್ ಕಲೆಹಾಕಿ ಅಧ್ಯಯಿಸಿದರು. ಬಹಳ ಎಚ್ಚರಿಕೆಯಿಂದ ಮಲದಿಂದ ಕೂದಲು, ಮೂಳೆ, ಕಾಲ್ಗೊರಸು (ಖುರ) ಮುಂತಾದವುಗಳನ್ನು ಅಧ್ಯಯನದ ಸಲುವಾಗಿ ಬೇರ್ಪಡಿಸಲಾಯಿತು. ಪ್ರಾಣಿಗಳ ಮಲದ ಅಧ್ಯಯನದಿಂದ ಅವುಗಳ ಬಗ್ಗೆ ಹಲವು ಮಾಹಿತಿಗಳು ದೊರೆಯುತ್ತವೆ: ವಯಸ್ಸು, ಆರೋಗ್ಯದ ಸ್ಥಿತಿ, ಆನುವಂಶಿಕ ಮಾಹಿತಿ, ಆಹಾರ (ಯಾವ ಯಾವ ಬಲಿಪ್ರಾಣಿಗಳು ಎಂಬುದನ್ನೂ ಸೇರಿ). ಮಲದ ಅಧ್ಯಯನದಿಂದ ಆಹಾರ ಆಯ್ಕೆಗಳನ್ನು ಒಂದರ ಜೊತೆಗೆ ಮತ್ತೊಂದನ್ನು ಹೋಲಿಸಿ ಯಾವ ಮಾಂಸಾಹಾರಿ ಪ್ರಾಣಿ ಯಾವ ಸಸ್ಯಾಹಾರಿ ಪ್ರಾಣಿಗಳನ್ನು ಹೆಚ್ಚು ಆಯ್ಕೆ ಮಾಡುತ್ತದೆ ಎಂದು ಪರಿಶೀಲಿಸಲಾಯಿತು.

ಹುಲಿ, ಚಿರತೆ ಮತ್ತು ಕೆನ್ನಾಯಿಗಳು ದೇಹದ ಗಾತ್ರದಲ್ಲಿ ವ್ಯತ್ಯಾಸವಿದ್ದರೂ, ಹೆಚ್ಚೂಕಡಿಮೆ ಒಂದೇ ರೀತಿಯ ಬಲಿಪ್ರಾಣಿಗಳನ್ನು ಆಯ್ಕೆ ಮಾಡುತ್ತವೆಂದು ವಿಜ್ಞಾನಿಗಳು ಪತ್ತೆಮಾಡಿದರು. ಮೂರೂ ಮಾಂಸಾಹಾರಿ ಪ್ರಾಣಿಗಳು, ವಯಸ್ಸಿನಲ್ಲಿ ಚಿಕ್ಕದಾದ ಬಲಿಪ್ರಾಣಿಗಳಿಗೆ ತಪ್ಪಿಸಿಕೊಳ್ಳಲು ಕಷ್ಟವಾಗುವುದರಿಂದ ಅವುಗಳನ್ನು ಬೇಟೆಯಾಡುತ್ತವೆ. ನಾಗರಹೊಳೆಯ ಹುಲಿಗಳು ಮುಖ್ಯವಾಗಿ ಕಾಡೆಮ್ಮೆ ಮತ್ತು ವಯಸ್ಕ ಕಡವೆಗಳನ್ನು ಬೇಟೆಯಾಡಿದರೆ, ಚಿರತೆ ಮತ್ತು ಕೆನ್ನಾಯಿಗಳು ಮಧ್ಯಮ-ಗಾತ್ರದ ಬಲಿಪ್ರಾಣಿಗಳಾದ ಜಿಂಕೆಗಳನ್ನು ಹೆಚ್ಚಾಗಿ ಬೇಟೆಯಾಡುತ್ತವೆ. ಹುಲಿ ಮತ್ತು ಕೆನ್ನಾಯಿಗಳು ಜಿಂಕೆಗಳಲ್ಲಿ ಗಂಡು ಜಿಂಕೆಯನ್ನು ಹೆಚ್ಚು ಬೇಟೆಯಾಡುತ್ತವೆ. ಚಿರತೆಗಳು ಬಹಳ ಚುರುಕಾಗಿ ಮರ ಹತ್ತುವುದರಿಂದ ಅವುಗಳು ಲಂಗೂರ್-ಗಳನ್ನೂ ಬೇಟೆಯಾಡುತ್ತವೆ. ಕಾಡು ಹಂದಿಗಳು ಆಕ್ರಮಣಕಾರಿ ಸ್ವಭಾವ ಹೊಂದಿರುವುದರಿಂದ, ಚಿರತೆಗಳಾಗಲೀ ಕೆನ್ನಾಯಿಗಳಾಗಲೀ ಅವುಗಳನ್ನು ಅಷ್ಟಾಗಿ ಬೇಟೆಯಾಡುವುದಿಲ್ಲ ಎಂದೂ ಅಧ್ಯಯನದಿಂದ ತಿಳಿದುಬಂದಿತು.

ಬಲಿಪ್ರಾಣಿಗಳ ಸಂಖ್ಯೆ ಹೇರಳವಾಗಿರುವ ನಾಗರಹೊಳೆಯಂತಹ ಅಭಯಾರಣ್ಯಗಳಲ್ಲಿ ಮಾಂಸಾಹಾರಿ ಪ್ರಾಣಿಗಳು, ಎಷ್ಟು ಬಲಿಪ್ರಾಣಿಗಳನ್ನು ಕೊಲ್ಲುತ್ತವೆ ಎಂಬುದಕ್ಕಿಂತ ಮುಖ್ಯವಾಗಿ ಯಾವ ಪ್ರಾಣಿಯೊಂದನ್ನು ಕೊಂಡರೆ ತಮ್ಮ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದರ ಆಧಾರದ ಮೇಲೆ ಬೇಟೆಯಾಡುತ್ತವೆ ಎಂದು ಡಾ।। ಕಾರಂತ ಮತ್ತು ಡಾ।। ಸನ್ಕ್ವಿಸ್ಟ್ ಪರಿಶೀಲಿಸಿದರು. ಬಲಿಪ್ರಾಣಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿದ್ದಾಗ ಮಾಂಸಾಹಾರಿ ಪ್ರಾಣಿಗಳಿಗೆ ಯಾವುದು ಬೇಕೋ ಅದನ್ನು ಆರಿಸುವ ಅವಕಾಶವಿರುತ್ತದೆ. ಆದರೆ ಕಾಡಿನ ವ್ಯಾಪ್ತಿ ಕಡಿಮೆಯಾಗುತ್ತಿರುವುದು, ಹವಾಮಾನ ಬದಲಾವಣೆ, ಮತ್ತು ಮನುಷ್ಯರ ಹಸ್ತಕ್ಷೇಪದಂತಹ ಅಸ್ಥಿರ ಅಂಶಗಳು ಇನ್ನೂ ಹೆಚ್ಚಾದಲ್ಲಿ, ಮಾಂಸಾಹಾರಿ ಪ್ರಾಣಿಗಳ ಆಹಾರ ಕ್ರಮ ಮತ್ತು ಉಷ್ಣವಲಯದ ಕಾಡುಗಳಲ್ಲಿ ಅವುಗಳ ಸಹಬಾಳ್ವೆಯ ಮೇಲೆ ನೇರವಾದ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

 

ಮೂಲ ಸಂಶೋಧನಾ ವರದಿ: ಉಷ್ಣವಲಯದ ಕಾಡುಗಳಲ್ಲಿ ಹುಲಿ, ಚಿರತೆ ಮತ್ತು ಕೆನ್ನಾಯಿಗಳಿಂದ ಬಲಿಪ್ರಾಣಿ ಆಯ್ಕೆ, ಡಾ।। ಕೆ. ಉಲ್ಲಾಸ ಕಾರಂತ ಮತ್ತು ಡಾ।। ಮೆಲ್ವಿನ್ ಈ. ಸನ್ಕ್ವಿಸ್ಟ್  ಬ್ರಿಟಿಷ್ ಈಕಾಲಾಜಿಕಲ್ ಸೊಸೈಟಿ (British Ecological Society), 1995

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.