ಲೇಖಕರು: ಲೂಕ್ರೇಷಿಯಾ ಆಗಿಲಾರ್
ಅನುವಾದ: ಸೌರಭಾ ರಾವ್

ಈ ಲೇಖನ, ಪರಿಸರ ಪ್ರವಾಸೋದ್ಯಮ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ನಾಲ್ಕನೆಯದು.

ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳಿಗೆ ಅನುಕೂಲವಾಗುವ ಸಾಮರ್ಥ್ಯವಿರುವ ಪರಿಸರ-ಪ್ರವಾಸೋದ್ಯಮ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಉದ್ಯಮ. ಏರುತ್ತಿರುವ ಇದರ ಜನಪ್ರಿಯತೆ ಅನೇಕ ರೀತಿಯ ಸಂಶೋಧನೆಗಳಿಗೆ ಅನುವು ಮಾಡಿಕೊಟ್ಟಿದೆ. CWSನ ವಿಜ್ಞಾನಿಗಳು, ಪರಿಸರ ಪ್ರವಾಸೋದ್ಯಮದ ಮೇಲಿನ ಬೆಳೆಯುತ್ತಿರುವ ವೈಜ್ಞಾನಿಕ ಸಾಹಿತ್ಯವನ್ನು ನಿರೂಪಣಾ ವಿಷಯಗಳ ಆಧಾರದ ಮೇಲೆ ಪರಿಶೀಲಿಸಿ, ಅವುಗಳ ನಡುವೆಯಿರುವ ಅಂತರವನ್ನು ಎತ್ತಿತೋರಿಸುತ್ತ, ಭವಿಷ್ಯದ ಅಧ್ಯಯನಗಳಿಗೆ ಸಹಾಯವಾಗುವಂತೆ ಶಿಫಾರಸ್ಸುಗಳನ್ನು ಮಾಡಿದ್ದಾರೆ.

ಜಗತ್ತಿನ ಕೇವಲ ೧೭ ಅಗಾಧ ವೈವಿಧ್ಯತೆಯುಳ್ಳ ದೇಶಗಳಲ್ಲಿ ಒಂದಾದ ಭಾರತದಲ್ಲಿ ಪರಿಸರ ಪ್ರವಾಸೋದ್ಯಮ ದೇಶದಾದ್ಯಂತ ಬಿರುಸಾಗಿ ಬೆಳೆದಿರುವುದು ಅಚ್ಚರಿಯ ವಿಷಯವೇನಲ್ಲ. ೨೦೧೧ರಲ್ಲಿ ದೇಶದ ಆರು ಪ್ರತಿಶತ ಜಿಡಿಪಿ ಪ್ರವಾಸೋದ್ಯಮವೊಂದರಿಂದಲೇ ಬಂದದ್ದು ಇಲ್ಲಿ ಗಮನಾರ್ಹ. ಆದರೂ, ಪರಿಸರ ಪ್ರವಾಸೋದ್ಯಮ ಯಾವಾಗಲೂ ಪರಿಸರಕ್ಕೆ ಪೂರಕವಾಗಿರುವುದಿಲ್ಲ. ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಒಂದೇ ಜಾಗದಲ್ಲಿ ಸೇರುವುದರಿಂದ ನಾಜೂಕಾದ ನೈಸರ್ಗಿಕ ವ್ಯವಸ್ಥೆಗಳ ಮಳೆ ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ಸ್ಥಳೀಯ ಸಮುದಾಯಗಳನ್ನು ಹೊರತುಪಡಿಸಬಹುದು. ಹೀಗಿದ್ದೂ, ಪರಿಸರ ಪ್ರವಾಸೋದ್ಯಮ ಹೆಚ್ಚಾದಷ್ಟೂ ಅದರ ಬಗ್ಗೆ ಸಂಶೋಧನೆಗಳೂ ಹೆಚ್ಚಾಗಿವೆ. ಆದರೆ ಈ ಎಲ್ಲಾ ಸಂಶೋಧನೆಗಳಿಂದ ಭಾರತದಲ್ಲಿನ ಪರಿಸರ ಪ್ರವಾಸೋದ್ಯಮದ ಬಗ್ಗೆ ನಿಜವಾಗಿಯೂ ತಿಳಿದುಬಂದಿರುವುದೇನು, ಮತ್ತು ಅದರಲ್ಲಿರುವ ಕೊರತೆಗಳೇನು?

ಈ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು, ಸಂಶೋಧಕರಾದ ಮಾಹೀ ಪುರಿ, ಕೃತಿ ಕೆ. ಕಾರಂತ್, ಮತ್ತು ಬೃಜೇಶ್ ಥಾಪಾ, ಭಾರತದ ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ೩೦ ಅಧ್ಯಯನಗಳನ್ನು ವಿಶ್ಲೇಷಿಸಿದ್ದಾರೆ. ಪ್ರವಾಸೋದ್ಯಮದ ಸಾಮಾಜಿಕ, ನೈಸರ್ಗಿಕ, ಮತ್ತು ಆರ್ಥಿಕ ಅಂಶಗಳಿಗೆ ಸಂಬಂಧಿಸಿದ ಮೂರು ಪ್ರಮುಖ ವಿಷಯಗಳನ್ನು ಅವರು ಮನಗಂಡಿದ್ದಾರೆ. ಮೊದಲನೆಯದಾಗಿ, ಕೆಲವು ನಿರ್ದಿಷ್ಟ ಅಭಯಾರಣ್ಯಗಳಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಯ ಸಾಧ್ಯತೆ. ಎರಡನೆಯದಾಗಿ, ಸದ್ಯದ ಪರಿಸರ ಪ್ರವಾಸೋದ್ಯಮದ ಸ್ಥಿತಿಯ ಪ್ರಭಾವ ನಿಸರ್ಗದ ಮೇಲೆ ಸುಸ್ಥಿರವಾಗಿರುವಂತೆ ಇಲ್ಲ ಎಂದು ಇತರ ಅಧ್ಯಯನಗಳಿಂದ ತಿಳಿದುಬಂದಿರುವುದು. ಮೂರನೆಯದಾಗಿ, ಕೆಲವು ಸಂಶೋಧನೆಗಳಿಂದ ತಿಳಿದುಬಂದಿರುವುದೇನೆಂದರೆ, ವನ್ಯಜೀವಿ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳಿಗೆರಡೂ ಅನುಕೂಲವಾಗುವಂತಹ ಪರಿಸರ ಪ್ರವಾಸೋದ್ಯಮ ಉಪಕ್ರಮಗಳನ್ನು ಕೈಗೊಳ್ಳುವುದು.

ಪರಿಸರ ಪ್ರವಾಸೋದ್ಯಮವನ್ನು ಏಕೆ ಶುರು ಮಾಡಲಾಗಿದೆ ಎಂದೂ ಸಂಶೋಧಕರು ವಿಚಾರಣೆ ಮಾಡಿದ್ದಾರೆ. ಒಟ್ಟಾರೆಯಾಗಿ, ಎರಡು ದೊಡ್ಡ ಪ್ರೇರಣೆಗಳು ಪರಿಸರ ಪ್ರವಾಸೋದ್ಯಮದ ಹಿಂದಿದೆ: ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿ. ಪರಿಸರ ಸಂರಕ್ಷಣೆ, ಸ್ಥಳೀಯರ ಸಹಭಾಗಿತ್ವ, ಸಮುದಾಯ ಅಭಿವೃದ್ಧಿ, ಮತ್ತು ಅರಿವು ಮೂಡಿಸುವ ಶಿಕ್ಷಣಗಳಂತಹ ಪರಿಸರ ಪ್ರವಾಸೋದ್ಯಮದ ಬಹುಮುಖ್ಯ ಪ್ರೇರಣೆಗಳಿಗೆ ಇದು ಸಂಬಂಧಿಸಿದೆ. ಆದರೆ, ಈ ಸಿದ್ಧಾಂತಗಳಿಗೆ ಸಂಬಂಧಿಸಿದ ಅಧ್ಯಯನಗಳ ಸಂಖ್ಯೆಗೂ, ಮತ್ತು ಅವುಗಳನ್ನು ವಸ್ತುನಿಷ್ಠವಾಗಿ ಪರೀಕ್ಷಿಸಿದ ಅಧ್ಯಯನಗಳ ಸಂಖ್ಯೆಗೂ ಹೊಂದಾಣಿಕೆಯಿರಲಿಲ್ಲ. ಉದಾಹರಣೆಗೆ, ಹೆಚ್ಚೊಕಮ್ಮಿ ಎಲ್ಲಾ ಅಧ್ಯಯನಗಳೂ ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರಸ್ತಾಪ ಮಾಡಿದ್ದರೂ, ಅವುಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ಅಧ್ಯಯನಗಳು ಪರಿಸರ ಪ್ರವಾಸೋದ್ಯಮದ ನೈಸರ್ಗಿಕ ಅಂಶಗಳ ಬಗ್ಗೆ ಶೋಧನೆ ನಡೆಸಿವೆ.

ಭಾರತದಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂಶೋಧನೆ ಬೆಳೆಯುತ್ತಾ ಬಂದರೂ, ಅದರ ಮೂಲ ಸಿದ್ಧಾಂತಗಳನ್ನು ತಕ್ಕಮಟ್ಟಿಗೆ ಸಾಧಿಸಲಾಗಿಲ್ಲ. ಇದು ಅಪಾಯಕಾರಿ, ಏಕೆಂದರೆ ಪರಿಸರ ಪ್ರವಾಸೋದ್ಯಮದ ಹೆಸರನ್ನು ಲಾಭಗಳಿಕೆಯನ್ನು ಹೆಚ್ಚಿಸುವತ್ತ ದುರ್ಬಳಕೆ ಮಾಡಬಹುದು. ಪುರಿ ಮತ್ತು ಅವರ ಸಹಲೇಖಕರು ಪರಿಸರ ಪ್ರವಾಸೋದ್ಯಮಕ್ಕೆ ವಿವಿಧ ಸಂಸ್ಥೆಗಳ ಬೆಂಬಲ, ಮತ್ತು ಈ ವಿಷಯದ ಬಗ್ಗೆ ವಿಸ್ತಾರವಾದ ಸಂಶೋಧನೆ ನಡೆಸಲು ಶಿಫಾರಸ್ಸು ಮಾಡಿದ್ದಾರೆ. ವನ್ಯಜೀವಿ ಮೇಲ್ವಿಚಾರಣೆ, ಮಾನವ-ವನ್ಯಜೀವಿ ಹೊಂದಾಣಿಕೆ, ಸಾಮಾಜಿಕ-ಆರ್ಥಿಕ ಪರಿಗಣನೆಗಳು, ಮತ್ತು ಅನುಷ್ಠಾನಗೊಳಿಸುವಲ್ಲಿರುವ ಅಡೆತಡೆಗಳ ಬಗ್ಗೆ  ಸಂಶೋಧನೆಗಳು ನಡೆಯಬೇಕೆಂದು ಲೇಖಕರು ಅಭಿಪ್ರಾಯ ಹೊಂದಿದ್ದಾರೆ. ಭಾರತದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಬಹಳ ಸಾಧ್ಯತೆಗಳಿವೆ, ಆದರೆ ಅದಕ್ಕಾಗಿ ಬಹುಮುಖ್ಯವಾಗಿ ವೈಜ್ಞಾನಿಕ ಮತ್ತು ನಿರ್ವಹಣಾ ಬೆಂಬಲಗಳು ಅತ್ಯಗತ್ಯವಾಗಿವೆ.

ಮೂಲ ಸಂಶೋಧನಾ ವರದಿ: ಭಾರತದಲ್ಲಿ ಪರಿಸರ ಪ್ರವಾಸೋದ್ಯಮ ಸಂಶೋಧನೆ ಪ್ರವೃತ್ತಿಗಳು ಮತ್ತು ಮಾರ್ಗಗಳು –  ಮಾಹೀ ಪುರಿ, ಕೃತಿ ಕೆ. ಕಾರಂತ್, ಬೃಜೇಶ್ ಥಾಪಾ Journal of Ecotourism, 2018

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.