ಲೇಖಕರು: ನಿತ್ಯಾ ಸತೀಶ್
ಅನುವಾದ: ಸೌರಭಾ ರಾವ್

ಮನುಷ್ಯರ ಮತ್ತು ವನ್ಯಜೀವಿಗಳ ನಡುವೆ ಉಂಟಾಗುವ ವಿವಿಧ ರೀತಿಯ ಸಂಪರ್ಕಗಳಲ್ಲಿ ನಕಾರಾತ್ಮಕ ಪರಿಣಾಮ ಉಂಟಾದರೆ ಅದನ್ನು ಮಾನವ-ವನ್ಯಜೀವಿ ಸಂಘರ್ಷ ಎನ್ನುತ್ತೇವೆ. ಇದು ಬೆಳೆ ಹಾನಿ, ಆಸ್ತಿ ನಷ್ಟ, ಮತ್ತು ಜಾನುವಾರು ನಷ್ಟ ಅಥವಾ ಮನುಷ್ಯರಿಗೆ ಆಗುವ ಗಾಯ, ಹಾನಿ ಅಥವಾ ಸಾವಿನಿಂದ ಉಂಟಾಗುವ ನೋವು ಮತ್ತು ಆರ್ಥಿಕ ನಷ್ಟಗಳಗಿರಬಹುದು. ಇದು ಜನಸಂಖ್ಯೆಯ ಸಾಂದ್ರತೆ ಹೆಚ್ಚಿರುವ ಮತ್ತು ಜೀವವೈವಿಧ್ಯತೆ ಎರಡನ್ನೂ ಹೊಂದಿರುವ ದೇಶಗಳಲ್ಲಿ ಹೆಚ್ಚು, ಏಕೆಂದರೆ ಇರುವಷ್ಟು ಸ್ಥಳವನ್ನೇ, ಸಂಪನ್ಮೂಲಗಳನ್ನೇ ಮನುಷ್ಯರು ಮತ್ತು ವನ್ಯಜೀವಿಗಳು ಹಂಚಿಕೊಳ್ಳಬೇಕು, ಇದರಿಂದ ಇಬ್ಬರ ನಡುವೆಯೂ ಅನೇಕ ರೀತಿಯ ಸಂಪರ್ಕಗಳು ಉಂಟಾಗುತ್ತವೆ.

ಚೀನಾ ಮತ್ತು ಭಾರತ ಇಡೀ ಪ್ರಪಂಚದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಮತ್ತು ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯ ದೇಶಗಳು. ಈ ಎರಡೂ ದೇಶಗಳು ಅಪಾರ ಜೀವವೈವಿಧ್ಯತೆಯಿಂದಲೂ ಕೂಡಿದ್ದು, ವನ್ಯಜೀವಿಗಳ ರಕ್ಷಣೆಗೆ ಅನೇಕ ಅಭಯಾರಣ್ಯಗಳನ್ನು ಸ್ಥಾಪಿಸಿ ಪೋಷಿಸುತ್ತಿವೆ. ಎರಡೂ ದೇಶಗಳಲ್ಲೂ ಜೀವನೋಪಾಯಕ್ಕಾಗಿ ಜಾನುವಾರುಗಳನ್ನು ಸಾಕುವುದು ಕೂಡಾ ಹೆಚ್ಚಾಗಿ ಕಂಡುಬರುತ್ತದೆ.

ಚೀನಾದಲ್ಲಿ ಜಯಂಟ್ ಪಾಂಡಾ ಆವಾಸಸ್ಥಳ ಮತ್ತು ಭಾರತದಲ್ಲಿ ಹುಲಿಗಳ ಆವಾಸಸ್ಥಳಗಳ ಬಗ್ಗೆ ಅಧ್ಯಯನ ನಡೆಸಿರುವ ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ (ಭಾರತ) ಮತ್ತು ಡ್ಯೂಕ್ ಕುನ್ಷನ್ ವಿಶ್ವವಿದ್ಯಾಲಯ (ಚೀನಾ)ದ ವಿಜ್ಞಾನಿಗಳು ಎರಡೂ ದೇಶದ ಜನರ ಜಾನುವಾರು ಪಾಲನೆಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪರಿಶೀಲಿಸಿದ್ದಾರೆ. ಜನಸಂಖ್ಯಾ ವಿಜ್ಞಾನ, ಜನರ ಆದಾಯ, ಜಾನುವಾರುಗಳನ್ನು ಮೇಯಿಸುವ ರೂಢಿಗಳು ಮತ್ತು ಜಾನುವಾರುಗಳ ನಷ್ಟಗಳ ಅನುಭವಗಳನ್ನು ಸಾಮಾಜಿಕ-ಆರ್ಥಿಕ ಸಮೀಕ್ಷೆಗಳನ್ನು ನಡೆಸಿ ಮಾಹಿತಿ ಕಲೆಹಾಕಿದರು.

ಚೀನಾದ ಪಿಂಗ್ವು ಕೌಂಟಿಯಲ್ಲಿ  (ಸಿಚುವಾನ್ ಪ್ರದೇಶ) ಕಾಣಬರುವ ಎರಡು ಮುಖ್ಯ ಜಾನುವಾರು ತಳಿಗಳೆಂದರೆ ಕುದುರೆಗಳು, ಮತ್ತು ಯಾಕ್ ಮತ್ತು ದನಗಳಂತಹ ಸಾಂಪ್ರದಾಯಿಕ ನಾಟಿ ತಳಿಗಳು. ಕಡಿಮೆ ವೆಚ್ಚ ಮತ್ತು ಉತ್ತಮ ಬದುಕುಳಿಯುವಿಕೆಯ ಅಂಶಗಳಿಂದ ಕುದುರೆಗಳನ್ನು ಹೆಚ್ಚಾಗಿ ಮಾಂಸದ ಉತ್ಪಾದನೆಗೆ ಪೋಷಿಸಲಾಗುತ್ತದೆ. ಜಯಂಟ್ ಪಾಂಡಾ ಆವಾಸಸ್ಥಳಗಳಲ್ಲಿ ಅವುಗಳನ್ನು ಮುಕ್ತವಾಗಿ ಮಾಯುವುದಕ್ಕೆ ಬಿಡಲಾಗುತ್ತದೆ, ಇದು ಆವಾಸಸ್ಥಳಗಳ ಅವನತಿಗೆ ಕಾರಣವಾಗುತ್ತದೆ. ಭಾರತದಲ್ಲಿ, ಕರ್ನಾಟಕದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾಣುವ ಎರಡು ಮುಖ್ಯವಾದ ಜಾನುವಾರು ತಳಿಗಳೆಂದರೆ ಸ್ಥಳೀಯ ಸಾಂಪ್ರಯಾಯಿಕ ನಾಟಿ ತಳಿಗಳು ಮತ್ತು ಹೈಬ್ರಿಡ್ ಜಾನುವಾರುಗಳು (ಸ್ಥಳೀಯ ತಳಿಗಳ ಜೊತೆ ಯೂರೋಪ್-ನ ಹಾಲು ಉತ್ಪಾದನಾ ಜಾನುವಾರುಗಳ ಅಡ್ಡತಳಿ). ಸ್ಥಳೀಯ ತಳಿಗಳನ್ನು ಅಭಯಾರಣ್ಯಗಳ ಒಳಗೆ ಅಥವಾ ಸುತ್ತಮುತ್ತ ಮೇಯಲು ಬಿಡುವುದು ಹೆಚ್ಚು, ಇದರಿಂದ ಹುಲಿಗಳು ಮತ್ತು ಚಿರತೆಗಳಿಂದ ಅವುಗಳ ಬೇಟೆಯಾಡುವ ಸಾಧ್ಯತೆ ಹೆಚ್ಚು.

ಹೆಚ್ಚು ಬಂಡವಾಳ ಹೂಡಿಕೆ ಇದ್ದರೂ ಮತ್ತು ಕಡಿಮೆ ಜಾನುವಾರು ಹೊಂದಿದ್ದರೂ, ಭಾರತ ಮನೆಗಳಲ್ಲಿ ಜಾನುವಾರು ನಷ್ಟದ ಪ್ರಮಾಣ ಹೆಚ್ಚು ಎಂದು ಅಧ್ಯಯನ ನಡೆಸಿದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಚೀನಾದಲ್ಲಿ ತೋಳ, ಕರಡಿ, ಕೆನ್ನಾಯಿಗಳಂತಹ ಪ್ರಮುಖ ಬೇಟೆಪ್ರಾಣಿಗಳು ಇಲ್ಲವಾದ್ದರಿಂದ ಜಾನುವಾರು ನಷ್ಟದ ಪ್ರಮಾಣ ಕಡಿಮೆ; ಇದು ಜಾನುವಾರು ಪೋಷಣೆಯ ನಿರ್ಧಾರಗಳ ಮೇಲೆ ಕನಿಷ್ಠ ಪ್ರಭಾವ ಬೀರುತ್ತದೆ. ಇದರ ಬದಲಿಗೆ, ಅಲ್ಲಿ ಪ್ರಭಾವ ಬೀರುವ ಅಂಶಗಳೆಂದರೆ ಕೃಷಿಗಾಗಿ ಭೂಮಿಯ ಮತ್ತು ಕೆಲಸಗಾರರ ಲಭ್ಯತೆ.

ಭಾರತದಲ್ಲಿ, ಜಾನುವಾರು ನಷ್ಟ ಜಾಸ್ತಿ ಇರುವುದರಿಂದ, ಜನರು ಸಾಕುವ ಜಾನುವಾರುಗಳ ಸಂಖ್ಯೆಯ ಮೇಲೆ ಪ್ರಭಾವ ಬೀರುವ ನಕಾರಾತ್ಮಕ ಅಂಶಗಳೆಂದರೆ ಜಾನುವಾರು ನಷ್ಟದ ಅನುಭವ ಮತ್ತು ಅದರ ಜೊತೆಗೇ ಜನರ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಗಳು. ಭಾರತದಲ್ಲಿ, ನಾಟಿ ತಳಿಗಳನ್ನು ಪೋಷಿಸುವುದಕ್ಕಿಂತ ಹೈಬ್ರಿಡ್ (ಮಿಶ್ರ) ತಳಿಗಳ ಪಾಲನೆ ಹೆಚ್ಚು ಲಾಭದಾಯಕ ಎಂದು ತಿಳಿದುಬಂದಿದೆ. ಮಿಶ್ರತಳಿಗಳಿಗೆ ಇದ್ದ ಜಾಗದಲ್ಲೇ ಮೇವು ಉಣಿಸಲು ಸಾಧ್ಯವಾದ್ದರಿಂದ ಅವುಗಳನ್ನು ಅಭಯಾರಣ್ಯಗಳ ಹತ್ತಿರ ಕರೆದುಕೊಂಡು ಹೋಗುವ ಅಗತ್ಯವಿಲ್ಲ, ಮತ್ತು ಇದರಿಂದ ಬೇಟೆಪ್ರಾಣಿಗಳಿಗೆ ಅವು ಬಲಿಯಾಗುವ ಸಾಧ್ಯತೆ ಕಡಿಮೆ.

ಚೀನಾದಲ್ಲಿ, ಕುದುರೆಗಳ ಸಂಖ್ಯೆ ಹೆಚ್ಚಾಗುವುದನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಜಯಂಟ್ ಪಾಂಡಾ ಆವಾಸಸ್ಥಳಗಳಿಗೆ ಇದರಿಂದ ಬೇರೆ ಜಾನುವಾರುಗಳಿಗಿಂತ ಹೆಚ್ಚು ಅಪಾಯ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ. ಭಾರತದಲ್ಲಿ, ಜನ ಸರ್ಕಾರ ಮತ್ತು ಸಂರಕ್ಷಣಾ ಸಂಸ್ಥೆಗಳ ಸಹಾಯದಿಂದ, ನಾಟಿ ತಳಿಯ ಜಾನುವಾರಿಗಳಿಗಿಂತ ಮಿಶ್ರತಳಿಗಳನ್ನು ಹೆಚ್ಚು ಸಾಕಬೇಕು ಎಂದು ಅವರು ಸೂಚಿಸಿದ್ದಾರೆ.  ಪ್ರಮುಖ ಪ್ರಾಣಿಗಳ ಆವಾಸಸ್ಥಾನಗಳನ್ನು ಕಾಪಾಡಲು, ಮಾನವ-ವನ್ಯಜೀವಿ ಸಂಘರ್ಷದ ಸಂಭವವಿರುವ ಪ್ರದೇಶಗಳಲ್ಲಿ ಜನರಿಗೆ ಪರ್ಯಾಯ ಜೀವನೋಪಾಯ ದಾರಿಗಳನ್ನು ಹುಡುಕುವತ್ತ ಕಾರ್ಯನೀತಿಗಳನ್ನು ರಚಿಸಬೇಕು ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ. ಇಂತಹ ಮಾಹಿತಿ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಸ್ಥಳೀಯ ಜನರ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೇ ಪರಿಸರ ಸಂರಕ್ಷಣೆಗೂ ಸಹಾಯವಾಗುತ್ತದೆ.

ಮೂಲ ಸಂಶೋಧನಾ ವರದಿ

ಎಫೆಕ್ಟ್ಸ್ ಆಫ್ ಲೈವ್ ಸ್ಟಾಕ್ ಲಾಸ್ ಅಂಡ್ ಎಮರ್ಜಿಂಗ್ ಲೈವ್ ಸ್ಟಾಕ್ ಟೈಪ್ಸ್  ಆನ್ ಲೈವ್ಲಿಹುಡ್ ಡಿಸಿಷನ್ಸ್  ಅರೌಂಡ್ ಪ್ರೊಟೆಕ್ಟೆಡ್ ಏರಿಯಾಸ್: ಕೇಸ್ ಸ್ಟಡೀಸ್ ಫ್ರಮ್ ಚೈನಾ ಅಂಡ್ ಇಂಡಿಯಾ – ಬಿನ್ಬಿನ್ ವಿ. ಲೀ, ಕೆಲ್ಲಿ ರೇರ್ಡನ್, ನಿತ್ಯಾ ಸತೀಶ್, ಸಿಯು ಲಿಯು. ಕೃತಿ ಕೆ. ಕಾರಂತ್ (Biological Conservation, 2020)

ಮೂಲ ಸಂಶೋಧನಾ ಪ್ರಕಟಣೆಯನ್ನು ಇಲ್ಲಿ ಓದಬಹುದು.

ಈ ಸಾರಾಂಶವನ್ನು ಇಂಗ್ಲಿಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.